ADVERTISEMENT

ತಡವಾದರೆ ಈ ವರ್ಷವೂ ಕುಚಲಕ್ಕಿ ಇಲ್ಲ

ಪಡಿತರದಲ್ಲಿ ಕುಚಲಕ್ಕಿ ವಿತರಣೆಗೆ ಅನುಮತಿ ಕೋರಿ ಕೇಂದ್ರಕ್ಕೆ ತುರ್ತು ಪ್ರಸ್ತಾವ ಸಲ್ಲಿಕೆಗೆ ರೈತ ಮುಖಂಡರ ಒತ್ತಾಯ

ಬಾಲಚಂದ್ರ ಎಚ್.
Published 29 ಜೂನ್ 2022, 22:30 IST
Last Updated 29 ಜೂನ್ 2022, 22:30 IST
ಭತ್ತ
ಭತ್ತ   

ಉಡುಪಿ: ‘ಊರು ಕೊಳ್ಳೆ ಹೊಡೆದ ಬಳಿಕ ದಿಡ್ಡಿಯ ಬಾಗಿಲು ಹಾಕಿದಂತೆ’ ಕಳೆದ ವರ್ಷ ಜಿಲ್ಲೆಯಾದ್ಯಂತ ಭತ್ತದ ಕಟಾವು ಕಾರ್ಯ ಮುಗಿದ ಬಳಿಕ ಕೇಂದ್ರ ಸರ್ಕಾರ ಭತ್ತ ಖರೀದಿ ಕೇಂದ್ರಗಳ ಮೂಲಕ ಸ್ಥಳೀಯವಾಗಿ ಸಿಗುವ ಕುಚಲಕ್ಕಿ ತಳಿಯ ಭತ್ತ ಖರೀದಿಸಿ ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಯಡಿ ವಿತರಿಸಲು ಒಂದು ವರ್ಷದ ಮಟ್ಟಿಗೆ ಅನುಮತಿ ನೀಡಿತ್ತು.

ಕೇಂದ್ರ ಸರ್ಕಾರದ ನಿರ್ದೇಶನ ಬರುವ ಹೊತ್ತಿಗೆ ಜಿಲ್ಲೆಯಲ್ಲಿ ಭತ್ತದ ಕಟಾವು ಸಂಪೂರ್ಣ ಮುಗಿದಿದ್ದರಿಂದ ಖರೀದಿಗೆ ಕುಚಲಕ್ಕಿ ಭತ್ತ ಸಿಗಲಿಲ್ಲ. ಭತ್ತ ಖರೀದಿ ಕೇಂದ್ರಗಳಿಗೆ ಒಂದು ಕಾಳು ಭತ್ತವೂ ಬರಲಿಲ್ಲ. ಈ ವರ್ಷವೂ ಕಳೆದ ವರ್ಷದಂತೆ ಆಗದಿರಲಿ ಎಂಬುದು ರೈತ ಮುಖಂಡರ ಹಾಗೂ ಸಾರ್ವಜನಿಕರ ಆಶಯ.

ಕೇಂದ್ರ ಸರ್ಕಾರ ನೀಡಿದ್ದ ಅನುಮತಿ ಒಂದು ವರ್ಷಕ್ಕೆ ಸೀಮಿತವಾಗಿದ್ದರಿಂದ ಈ ವರ್ಷ ಹೊಸದಾಗಿ ಅನುಮತಿ ಪಡೆಯುವ ಅಗತ್ಯವಿದೆ. ಜಿಲ್ಲೆಯಲ್ಲಿ ಈಗಾಗಲೇ ಭತ್ತದ ನಾಟಿ ಆರಂಭವಾಗಿದ್ದು ಅಕ್ಟೋಬರ್‌ನಲ್ಲಿ ಭತ್ತ ಕಟಾವಿಗೆ ಬರಲಿದೆ. ಸುಗ್ಗಿ ಆರಂಭವಾಗುವ ಮುನ್ನ ಕೇಂದ್ರ ಸರ್ಕಾರ ಅನುಮತಿ ನೀಡಿದರೆ ಮಾತ್ರ ರೈತರಿಂದ ಕುಚಲಕ್ಕಿ ಭತ್ತ ಖರೀದಿಸಲು ಸಾದ್ಯವಾಗಲಿದೆ.

ADVERTISEMENT

ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಈ ವರ್ಷವೂ ಪಡಿತರದಲ್ಲಿ ಕುಚಲಕ್ಕಿ ಸಿಗುವುದು ಅನುಮಾನದಂತೆ ಕಾಣುತ್ತಿದೆ. ಕಾರಣ, ಇದುವರೆಗೂ ರಾಜ್ಯ ಸರ್ಕಾರದಿಂದ ಪಡಿತರದಲ್ಲಿ ಕುಚಲಕ್ಕಿ ಖರೀದಿಸಲು ಅವಕಾಶ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಹೋಗಿಲ್ಲ.

ಮೊದಲು ಜಿಲ್ಲಾಮಟ್ಟದಲ್ಲಿ ಅಧಿಕಾರಿಗಳ ಸಭೆ ನಡೆದು ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಕೆಯಾಗಬೇಕು. ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವಕಳುಹಿಸಬೇಕು. ಕೇಂದ್ರ ಸರ್ಕಾರ ಅಂಗೀಕರಿಸಿ ಪಡಿತರದಲ್ಲಿ ಕುಚಲಕ್ಕಿ ಖರೀದಿಗೆ ಆದೇಶ ಹೊರಡಿಸಬೇಕು. ಇಷ್ಟೆಲ್ಲ ಪ್ರಕ್ರಿಯೆಗಳು ಮುಗಿಯುವ ಹೊತ್ತಿಗೆ ಜಿಲ್ಲೆಯಲ್ಲಿ ಮತ್ತೆ ಭತ್ತದ ಕಟಾವು ಅವಧಿ ಮುಗಿಯಬಹುದು ಎಂಬ ಆತಂಕ ಕಾಡುತ್ತಿದೆ.

ಸರ್ಕಾರದ ಮಟ್ಟದಲ್ಲಿ ನಡೆಯಬೇಕಾಗಿರುವ ಪ್ರಕ್ರಿಯೆಗಳು ತ್ವರಿತವಾಗಬೇಕು. ಕಟಾವು ಆರಂಭವಾಗುವ ತಿಂಗಳು ಮೊದಲು ಕೇಂದ್ರ ಸರ್ಕಾರದಿಂದ ಅನುಮತಿ ಸಿಕ್ಕರೆ ಮಾತ್ರ ಪ್ರಯೋಜನವಾಗಲಿದೆ ಎನ್ನುತ್ತಾರೆ ರೈತ ಮುಖಂಡರು.

ಅಧಿಕಾರಿಗಳು ಏನಂತಾರೆ:

ಜುಲೈ ಆರಂಭದಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಎಪಿಎಂಸಿ, ಕೃಷಿ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳ ಸಭೆ ನಡೆಯಲಿದ್ದು ಪಡಿತರದಲ್ಲಿ ಕುಚಲಕ್ಕಿ ಖರೀದಿಗೆ ಅನುಮತಿ ಕೋರಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು. ರಾಜ್ಯ ಸರ್ಕರ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಲಿದ್ದು, ಭತ್ತ ಕಟಾವು ಆರಂಭವಾಗುವ ಮುನ್ನವೇ ಅನುಮತಿ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಮಹಮ್ಮದ್ ಇಸಾಕ್‌.

ರೈತ ನಾಯಕರು ಏನಂತಾರೆ:

ಪಡಿತರದಲ್ಲಿ ಕುಚಲಕ್ಕಿ ವಿತರಿಸುವ ಸರ್ಕಾರದ ನಿರ್ಧಾರ ಕರಾವಳಿಯ ರೈತರಿಗೆ ಹಾಗೂ ಸಾರ್ವಜನಿಕರಿಗೆ ಪೂರಕವಾಗಿದೆ. ಸರ್ಕಾರದ ನಿರ್ಧಾರದಿಂದ ಕಾಳಸಂತೆಯಲ್ಲಿ ಪಡಿತರ ಮಾರಾಟವಾಗುತ್ತಿರುವುದನ್ನು ತಡೆಯಬಹುದು. ಕರಾವಳಿಗರು ಬೆಳ್ತಿಗೆ ಅಕ್ಕಿಯನ್ನು ಹೆಚ್ಚಾಗಿ ಬಳಸುವುದಿಲ್ಲವಾದ್ದರಿಂದ ಕಡಿಮೆ ದರಕ್ಕೆ ಮಾರಾಟ ಮಾಡುತ್ತಾರೆ. ಬೆಳ್ತಿಗೆ ಬದಲಿಗೆ ಕುಚಲಕ್ಕಿ ಕೊಟ್ಟರೆ ಯಾರೂ ಮಾರಾಟ ಮಾಡುವುದಿಲ್ಲ ಎನ್ನುತ್ತಾರೆ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು.

ಪ್ರತಿವರ್ಷ ಜಿಲ್ಲೆಯಲ್ಲಿ ಕಟಾವು ಆರಂಭವಾಗುವ ಮುನ್ನ ಭತ್ತ ಖರೀದಿ ಕೇಂದ್ರಗಳನ್ನು ತೆರೆಯುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸುತ್ತ ಬಂದರೂ ಪ್ರಯೋಜನವಾಗಿಲ್ಲ. ಈ ಬಾರಿಯಾದರೂ ಸರ್ಕಾರ ಸ್ಪಂದಿಸಲಿ. ಕ್ವಿಂಟಲ್ ಭತ್ತಕ್ಕೆ ಕನಿಷ್ಠ ₹ 2,500 ಬೆಂಬಲ ಬೆಲೆ ಸಿಗದಿಪಡಿಸಲಿ. ಇದರಿಂದ ಕೃಷಿಯಿಂದ ವಿಮುಖರಾಗುತ್ತಿರುವ ರೈತ ಮತ್ತೆ ಕೃಷಿಯತ್ತ ಮರಳಬಹುದು ಎನ್ನುತ್ತಾರೆ ಅವರು.

ಸವಾಲುಗಳು ಏನು ?

ಜಿಲ್ಲೆಗೆ ಸಾರ್ವಜನಿಕರ ಪಡಿತರ ವಿತರಣಾ ವ್ಯವಸ್ಥೆಯ ಮೂಲಕ ತಿಂಗಳಿಗೆ 43,000 ಕ್ವಿಂಟಲ್‌ ಅಕ್ಕಿ ವಿತರಣೆ ಮಾಡಲಾಗುತ್ತಿದೆ. ವರ್ಷಕ್ಕೆ 5,16,000 ಕ್ವಿಂಟಲ್‌ ಅಕ್ಕಿ ಪಡಿತರ ವಿತರಣೆಗೆ ಅಗತ್ಯವಿದೆ. ಇಷ್ಟು ಪ್ರಮಾಣದ ಕುಚಲಕ್ಕಿ ತಳಿಯ ಭತ್ತವನ್ನು ಉಡುಪಿ ಜಿಲ್ಲೆಯಲ್ಲಿ ಬೆಳೆಯಲಾಗುವುದಿಲ್ಲ. ಜಿಲ್ಲೆಯಲ್ಲಿ 38,000 ಹೆಕ್ಟೇರ್ ಭತ್ತದ ಕೃಷಿ ನಡೆಯುತ್ತಿದ್ದು, 1.60 ಲಕ್ಷ ಟನ್‌ ಭತ್ತ ಉತ್ಪಾದನೆಯಾಗುತ್ತಿದೆ. ಇದರಲ್ಲಿ ಶೇ 90ರಷ್ಟು ಕುಚಲಕ್ಕಿ ಪ್ರಬೇಧದ ಭತ್ತವಾಗಿದ್ದರೆ, ಶೇ 10ರಷ್ಟು ಇತರೆ ತಳಿಯ ಭತ್ತ ಬೆಳೆಯಲಾಗುತ್ತದೆ. ಹೆಚ್ಚಿನ ರೈತರು ಸಣ್ಣ ಹಿಡುವಳಿ ಹೊಂದಿರುವ ಕಾರಣ ಬೆಳೆದ ಅರ್ಧಭಾಗವನ್ನು ಮನೆಯ ಬಳಕೆಗೆ ಮೀಸಲಿಟ್ಟುಕೊಂಡು ಉಳಿಕೆ ಭಾಗವನ್ನು ಮಾತ್ರ ಮಾರಾಟ ಮಾಡುತ್ತಾರೆ.  ಅಂದರೆ, ಒಟ್ಟು ಭತ್ತ ಉತ್ಪಾದನೆಯ ಶೇ 50ರಷ್ಟು ಮಾತ್ರ ಮಾರುಕಟ್ಟೆಗೆ ಬರುತ್ತದೆ. ಜತೆಗೆ ಮಾರುಕಟ್ಟೆಗಿಂತ ಹೆಚ್ಚಿನ ದರ ಸಿಕ್ಕರೆ ಮಾತ್ರ ರೈತರು ಖರೀದಿ  ಕೇಂದ್ರಗಳಿಗೆ ಭತ್ತ ಮಾರಾಟ ಮಾಡುತ್ತಾರೆ. ಈ ಎಲ್ಲ ಅಂಶಗಳನ್ನು ಸರ್ಕಾರ ಗಮನದಲ್ಲಿಟ್ಟುಕೊಳ್ಳಬೇಕು. ಜತೆಗೆ, ಹೊರ ಜಿಲ್ಲೆಗಳಿಂದಲೂ ಕುಚಲಕ್ಕಿ ಖರೀದಿಸಲು ಅವಕಾಶ ನೀಡಬೇಕು.

‘ಸಂಕಷ್ಟದಲ್ಲಿ ಭತ್ತ ಬೆಳೆಗಾರರು’

ಕರಾವಳಿಯಲ್ಲಿ ಭತ್ತ ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದಾರೆ. ಸಮಯಕ್ಕೆ ಸರಿಯಾಗಿ ಭತ್ತ ಖರೀದಿ ಕೇಂದ್ರಗಳು ತೆರೆಯದ ಕಾರಣ ದಲ್ಲಾಳಿಗಳು ರೈತರಿಂದ ಕಡಿಮೆ ದರಕ್ಕೆ ಭತ್ತ ಖರೀದಿ ಮಾಡುತ್ತಿದ್ದಾರೆ. ಸರ್ಕಾರದಿಂದ ಪ್ರೋತ್ಸಾಹಧನವೂ ಸಿಗುತ್ತಿಲ್ಲ. ರೈತನ ಬೆವರಿನ ಶ್ರಮಕ್ಕೆ ಬೆಲೆ ಇಲ್ಲದಂತಾಗಿದೆ ಎನ್ನುತ್ತಾರೆ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು.

ಜಿಲ್ಲೆಯಲ್ಲಿರುವ ಭತ್ತದ ಕೃಷಿ ಭೂಮಿ: 38,000 ಹೆಕ್ಟೇರ್

ಭತ್ತ ಉತ್ಪಾದನೆ ಪ್ರಮಾಣ: 1.60 ಲಕ್ಷ ಟನ್‌

ಕುಚಲಕ್ಕಿ ತಳಿ ಬೆಳೆಯುವ ಪ್ರದೇಶ: 34,000 ಹೆಕ್ಟೇರ್‌

ಕುಚಲಕ್ಕಿ ತಳಿಯ ಭತ್ತ ಉತ್ಪಾದನೆ: 1.40 ಲಕ್ಷ ಟನ್‌

ತಿಂಗಳಿಗೆ ಪಡಿತರದಲ್ಲಿ ವಿತರಣೆಯಾಗುವ ಅಕ್ಕಿ: 43,055 ಕ್ವಿಂಟಲ್‌

ಆದ್ಯತಾ ಕಾರ್ಡ್‌ಗಳ (ಬಿಪಿಎಲ್‌)ಸಂಖ್ಯೆ: 1,64,727

ಆದ್ಯತೇತರ ಕಾರ್ಡ್‌ಗಳ (ಎಪಿಎಲ್‌) ಸಂಖ್ಯೆ: 1,11,061

ಅಂತ್ಯೋದಯ ಕಾರ್ಡ್‌ಗಳು: 28,553

ಅಂತ್ಯೋದಯ ಕಾರ್ಡ್‌ದಾರರಿಗೆ ಪೂರೈಕೆಯಾಗುವ ಅಕ್ಕಿ: 10,000 ಕ್ವಿಂಟಲ್‌

ಆದ್ಯತಾ ಹಾಗೂ ಆದ್ಯತೇತರ ಕಾರ್ಡ್‌ದಾರರಿಗೆ ಪೂರೈಕೆಯಾಗುವ ಅಕ್ಕಿ: 33,000 ಕ್ವಿಂಟಲ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.