ಕುಂದಾಪುರ: ಸಂಘ ಹಾಗೂ ಸಂಘಟನೆಗಳು ಬೆಳೆಯಬೇಕಾದರೆ ಸಮಾನ ಮನಸ್ಕರ ಅಗತ್ಯವಿದೆ. ಸಮೂಹವಾಗಿ ಕೆಲಸ ಮಾಡಿದಾಗ ಮಾತ್ರ ಸಮಾಜಕ್ಕೆ ಒಳ್ಳೆಯ ಕಾರ್ಯ ಮಾಡಲು ಸಾಧ್ಯ ಎಂದು ಕೋಟೇಶ್ವರದ ಕಾಳಾವರ ವರದರಾಜ ಎಂ. ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಂಶುಪಾಲ ಪ್ರೊ. ಕೆ.ರಾಮರಾಯ ಆಚಾರ್ಯ ಅಭಿಪ್ರಾಯಪಟ್ಟರು.
ಕೋಟೇಶ್ವರ ಶ್ರೀವಿಶ್ವಕರ್ಮ ಸಭಾಭವನದಲ್ಲಿ ಶ್ರೀವಿಶ್ವಕರ್ಮ ಸಮಾಜ ಯುವಕ ದಳ, ಶ್ರೀವಿಶ್ವಕರ್ಮ ಬ್ರಾಹ್ಮಣ ಸಮಾಜ ಯುವಕ ಸೇವಾ ಸಂಘ, ಶ್ರೀದೇವಿ ಮಹಿಳಾ ಮಂಡಳಿ ಕೋಟೇಶ್ವರ ಸಹಯೋಗದಲ್ಲಿ ಶ್ರೀವಿಶ್ವಕರ್ಮ ಯಜ್ಞ ಮಹೋತ್ಸವದ ಪ್ರಯುಕ್ತ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಒಳ್ಳೆಯ ಕೆಲಸಗಳೇ ಪರಮಾತ್ಮನ ಸೇವೆಗಳಾಗುತ್ತದೆ. ವಿಶ್ವಕರ್ಮರು ಎಂತಹ ಶಿಲೆಯನ್ನಾದರು ಮೂರ್ತಿಯನ್ನಾಗಿಸಿ ದೈವ ಸ್ವರೂಪವನ್ನು ನೀಡುತ್ತಾರೆ. ಆದರೆ, ಮನುಷ್ಯನನ್ನು ಎಷ್ಟೇ ಕೆತ್ತಿದರೂ ಆತ ಬದಲಾಗುವುದಿಲ್ಲ ಹಾಗೇ ಇರುತ್ತಾನೆ. ಒಳ್ಳೆಯ ಕೆಲಸಗಳನ್ನು ಮಾಡಿದವರನ್ನು ಸಮಾಜ ಸ್ಮರಿಸುತ್ತದೆ. ವಿಶ್ವಕರ್ಮ ಸಮುದಾಯದಲ್ಲಿ ಅತ್ಯಂತ ಬುದ್ಧಿವಂತರಿದ್ದಾರೆ. ಅವರೊಂದಿಗೆ ಹೃದಯವಂತರ ಅವಶ್ಯಕತೆ ಇದೆ ಎಂದರು.
ಕೋಟೇಶ್ವರ ಶ್ರೀವಿಶ್ವಕರ್ಮ ಬ್ರಾಹ್ಮಣ ಸಮಾಜ ಯುವಕ ಸೇವಾ ಸಂಘದ ಅಧ್ಯಕ್ಷ, ರಥಶಿಲ್ಪಿ ರಾಜಗೋಪಾಲ ಆಚಾರ್ಯ ಮಾತನಾಡಿ, ‘ಬದಲಾದ ವೇಗದ ಬದುಕಿನಲ್ಲಿ ನಮ್ಮ ಸಮಾಜದ ಧಾರ್ಮಿಕ ವಿಚಾರಗಳಲ್ಲಿ ಯುವಜನರ ಭಾಗವಹಿಸುವಿಕೆ ಕಡಿಮೆಯಾಗುತ್ತಿರುವುದು ಆತಂಕಕಾರಿಯಾಗಿದೆ. ಈ ಹಿನ್ನೆಲೆ ನಮ್ಮ ಮಕ್ಕಳಿಗೆ ಒಳ್ಳೆಯ ಸಂಸ್ಕಾರ, ಸಂಸ್ಕೃತಿ ಹಾಗೂ ಆಚಾರ–ವಿಚಾರಗಳ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ’ ಎಂದರು.
ಕೋಟೇಶ್ವರ ರಥಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯ ಶುಭ ಹಾರೈಸಿದರು. ಪುರೋಹಿತ್ ರೋಹಿತಾಕ್ಷ ಆಚಾರ್ಯ ಕುಂಭಾಸಿ ಶುಭಾಶಂಸನೆಗೈದರು. ಕೋಟೇಶ್ವರದ ಶ್ರೀವಿಶ್ವಕರ್ಮ ಸಮಾಜ ಯುವಕ ದಳದ ಅಧ್ಯಕ್ಷ ಚಂದ್ರಯ್ಯ ಆಚಾರ್ಯ ತೆಕ್ಕಟ್ಟೆ, ಗೌರವಾಧ್ಯಕ್ಷ ಸುರೇಶ ಆಚಾರ್ಯ, ಸಾಂತಾವರ, ಕಾರ್ಯದರ್ಶಿ ಸತೀಶ್ ಆಚಾರ್ಯ ಕುಂಬ್ರಿ, ಕೋಟೇಶ್ವರದ ಶ್ರೀದೇವಿ ಮಹಿಳಾ ಮಂಡಳಿಯ ಅಧ್ಯಕ್ಷೆ ಲಕ್ಷ್ಮೀ ಗೋಪಾಲ ಆಚಾರ್ಯ ತೆಕ್ಕಟ್ಟೆ ಇದ್ದರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿಲ್ಪಿ ಎಸ್.ಸುಬ್ರಹ್ಮಣ್ಯ ಆಚಾರ್ಯ ಕುಂಭಾಸಿ ಹಾಗೂ ಭರತನಾಟ್ಯ ಕಲಾವಿದೆ ಪ್ರಣಮ್ಯ ಆಚಾರ್ಯ ಅರಸರಬೆಟ್ಟು ಅವರನ್ನು ಸನ್ಮಾನಿಸಲಾಯಿತು.
ಸತೀಶ್ ಅಚಾರ್ಯ ಸ್ವಾಗತಿಸಿದರು. ವಿನೇಂದ್ರ ಆಚಾರ್ಯ ಕುಂಭಾಸಿ ಹಾಗೂ ಗಣೇಶ್ ಆಚಾರ್ಯ ಕುಂಬ್ರಿ ನಿರೂಪಿಸಿದರು. ಯೋಗಿರಾಜ್ ಆಚಾರ್ಯ ಬೇಳೂರು ವಂದಿಸಿದರು. ಬಳಿಕ, ಸಂಘದ ಸದಸ್ಯರು ಹಾಗೂ ಮಕ್ಕಳಿಂದ ವಿವಿಧ ವಿನೋದಾವಳಿಗಳು ಪ್ರದರ್ಶಗೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.