ADVERTISEMENT

ಜಾಗ ಖರೀದಿ: ತನಿಖೆಗೆ ಆಗ್ರಹ

ಪುರಸಭೆ ಸಾಮಾನ್ಯ ಸಭೆಯಲ್ಲಿ ತ್ಯಾಜ್ಯ ವಿಲೇವಾರಿ ಘಟಕದ ಬಗ್ಗೆ ಚರ್ಚೆ

​ಪ್ರಜಾವಾಣಿ ವಾರ್ತೆ
Published 27 ಜುಲೈ 2021, 16:23 IST
Last Updated 27 ಜುಲೈ 2021, 16:23 IST
ಕುಂದಾಪುರ ಪುರಸಭೆಯ ಸಭಾಂಗಣದಲ್ಲಿ ಅಧ್ಯಕ್ಷೆ ವೀಣಾ ಭಾಸ್ಕರ್ ಅಧ್ಯಕ್ಷತೆಯಲ್ಲಿ ಮಂಗಳವಾರ ಸಾಮಾನ್ಯ ಸಭೆ ನಡೆಯಿತು.
ಕುಂದಾಪುರ ಪುರಸಭೆಯ ಸಭಾಂಗಣದಲ್ಲಿ ಅಧ್ಯಕ್ಷೆ ವೀಣಾ ಭಾಸ್ಕರ್ ಅಧ್ಯಕ್ಷತೆಯಲ್ಲಿ ಮಂಗಳವಾರ ಸಾಮಾನ್ಯ ಸಭೆ ನಡೆಯಿತು.   

ಕುಂದಾಪುರ: ಪುರಸಭಾ ವ್ಯಾಪ್ತಿಯ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆಖರೀದಿಸಿರುವ ಜಾಗಕ್ಕೆ, ಸರ್ಕಾರ ನಿಗದಿ ಮಾಡಿದ ದರಕ್ಕಿಂತ 4 ಪಟ್ಟು ಹೆಚ್ಚು ದರ ನೀಡಿದ್ದು, ಈ ಬಗ್ಗೆ ತನಿಖೆಯಾಗಬೇಕು ಎಂದು ಸದಸ್ಯ ಜಿ.ಕೆ.ಗಿರೀಶ್‌ ಆಗ್ರಹಿಸಿದರು.

ಮಂಗಳವಾರ ಇಲ್ಲಿ ನಡೆದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರಿ ದರ
ಕ್ಕಿಂತ 2ಪಟ್ಟು ಹೆಚ್ಚಿಗೆ ನೀಡಬಹುದು. ಆದರೆ, ₹ 95 ಲಕ್ಷ ವ್ಯವಹಾರವನ್ನು ಸದಸ್ಯರ ಗಮನಕ್ಕೆ ತರದೆ ನಡೆಸಲಾಗಿದೆ ಎಂದು ಆಕ್ಷೇಪಿಸಿದರು. ಎಲ್ಲ ಸದಸ್ಯರು ಇದಕ್ಕೆ ಬೆಂಬಲ ವ್ಯಕ್ತಪಡಿಸಿದರು.ಅಧಿಕಾರಿಗಳು ಅನುಮೋದನೆ ನೀಡಿದ ದರದಲ್ಲಿ ಜಾಗ ಖರೀದಿಸಲಾಗಿದೆ. ಇದನ್ನು ಸಭೆಯ ಗಮನಕ್ಕೂ ತರಲಾಗಿತ್ತು ಎಂದು ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಸಮಜಾಯಿಷಿ ನೀಡಿದರು.

ಇದನ್ನು ವಿರೋಧಿಸಿದ ಸದಸ್ಯರಾದ ಚಂದ್ರಶೇಖರ ಖಾರ್ವಿ, ಮೋಹನದಾಸ ಶೆಣೈ, ಗಿರೀಶ್ ಜಿ.ಕೆ, ದೇವಕಿ ಪಿ ಸಣ್ಣಯ್ಯ, ಕೆ.ಜಿ.ನಿತ್ಯಾನಂದ, ಶ್ರೀಧರ ಶೇರೆಗಾರ್, ಪ್ರಭಾಕರ್ ವಿ, ಅಬ್ಬು ಮಹಮ್ಮದ್, ಅಶ್ಪಕ್ ಕೋಡಿ ಮುಂತಾದವರು, ‘ಸಭೆಯಲ್ಲಿ ಈ ವಿಚಾರ ಬಂದಿಲ್ಲ. ಪುರಸಭೆಯ ಹಣ ಪೋಲಾಗಲು ಅವಕಾಶ ನೀಡಲಾಗದು. ಈ ಬಗ್ಗೆ ತನಿಖೆಗೆ ಆಗಬೇಕು’ ಎಂದರು.

ADVERTISEMENT

ಈ ಸಂಬಂಧ ಆಕ್ಷೇಪ ದಾಖಲಿಸಿ, ಜಿಲ್ಲಾಧಿಕಾರಿಯಿಂದ ಮಾಹಿತಿ ಪಡೆ
ಯಲು ನಿರ್ಣಯಿಸಲಾಯಿತು. ಆರೋಪ ಬಂದ ಕಾರಣ ಜಾಗ ಖರೀದಿ ಪ್ರಕ್ರಿಯೆ ಸ್ಥಗಿತಗೊಳಿಸಲು ನಿರ್ಣಯಿಸುವಂತೆ ಮುಖ್ಯಾಧಿಕಾರಿ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯರು, ‘ಅಭಿವೃದ್ಧಿಗೆ ನಮ್ಮ ಅಡ್ಡಿ ಇಲ್ಲ. ಖರೀದಿ ವ್ಯವಹಾರವನ್ನು ಸದಸ್ಯರ ಗಮನಕ್ಕೆ ತನ್ನಿ’ ಎಂದರು.

ಸರ್ಕಾರಿ ಕಚೇರಿ, ಎಲ್‌ಐಸಿ, ಕಲ್ಯಾಣ ಮಂಟಪ, ಶಾಲಾ-ಕಾಲೇಜುಗಳಿರುವ ಬೊಬ್ಬರ್ಯನಕಟ್ಟೆ ಬಳಿ ರಾಷ್ಟ್ರೀಯ ಹೆದ್ದಾರಿಯಿಂದ ಸರ್ವೀಸ್ ರಸ್ತೆಗೆ ತೆರಳಲು ಹಾಗೂ ಸರ್ವೀಸ್ ರಸ್ತೆಯಿಂದ ಹೆದ್ದಾರಿಗೆ ಬರಲು ಅವಕಾಶ ನೀಡಬೇಕು ಎನ್ನುವ ಸಾರ್ವಜನಿಕರ ಬೇಡಿಕೆ ಬಗ್ಗೆ ಪ್ರಶ್ನಿಸಿದ ಚಂದ್ರಶೇಖರ ಖಾರ್ವಿ, ರೋಹಿಣಿ ಉದಯ ಕುಮಾರ ಅವರಿಗೆ ಉತ್ತರಿಸಿದ ಅಧ್ಯಕ್ಷೆ ವೀಣಾ ಭಾಸ್ಕರ್, ‘ನಾನೇ ಖುದ್ದು ಪತ್ರ ಬರೆದಿದ್ದೇನೆ. ಯೋಜನಾ ನಿರ್ದೇಶಕರ ಜತೆಯೂ ಮಾತನಾಡಿದ್ದೇನೆ. ಹೆದ್ದಾರಿ ಇಲಾಖೆ ಜತೆ ನಡೆಯುವ ವಿಶೇಷ ಸಭೆಯಲ್ಲಿ ಈ ಕುರಿತು ಚರ್ಚಿಸುವೆ’ ಎಂದರು.

ಪುರಸಭೆ ನಾಮ ನಿರ್ದೇಶಿತ ಸದಸ್ಯರಾಗಿ ಆಯ್ಕೆಯಾದ ದಿವಾಕರ ಪೂಜಾರಿ ಕಡ್ಗಿಮನೆ, ಪುಷ್ಪಾ ಶೇಟ್, ರತ್ನಾಕರ ಚರ್ಚ್‌ರೋಡ್, ಪ್ರಕಾಶ್ ಖಾರ್ವಿ, ನಾಗರಾಜ ಕಾಂಚನ್ ಅವರಿಗೆ ಪ್ರಮಾಣವಚನ ಬೋಧಿಸಲಾಯಿತು. ಉಪಾಧ್ಯಕ್ಷ ಸಂದೀಪ್‌ ಖಾರ್ವಿ, ಸ್ಥಾಯಿ ಸಮಿತಿ ಅಧ್ಯಕ್ಷ ಶೇಖರ ಪೂಜಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.