ADVERTISEMENT

ಸೌಲಭ್ಯಗಳು ಅರ್ಹರನ್ನು ತಲುಪಲಿ: ಮೋಹನದಾಸ್ ಶೆಟ್ಟಿ

ಕುಂದಾಪುರ: ಯುವ ಬಂಟರ ಸಂಘದಿಂದ ವಿದ್ಯಾರತ್ನ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2022, 5:23 IST
Last Updated 28 ಸೆಪ್ಟೆಂಬರ್ 2022, 5:23 IST
ಕುಂದಾಪುರದ ಆರ್.ಎನ್.ಶೆಟ್ಟಿ ಸಭಾಂಗಣದಲ್ಲಿ ಭಾನುವಾರ ಕುಂದಾಪುರ ತಾಲ್ಲೂಕು ಯುವ ಬಂಟರ ಸಂಘದ ದಶಮ ಸಂಭ್ರಮ-–2022ರ ಮೂರನೆಯ ಕಾರ್ಯಕ್ರಮವಾಗಿ ನಡೆದ ವಿದ್ಯಾರತ್ನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮಂಗಳೂರಿನ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಕೋಶಾಧಿಕಾರಿ ಉಳ್ತೂರು ಮೋಹನದಾಸ್ ಶೆಟ್ಟಿ ಉದ್ಘಾಟಿಸಿದರು
ಕುಂದಾಪುರದ ಆರ್.ಎನ್.ಶೆಟ್ಟಿ ಸಭಾಂಗಣದಲ್ಲಿ ಭಾನುವಾರ ಕುಂದಾಪುರ ತಾಲ್ಲೂಕು ಯುವ ಬಂಟರ ಸಂಘದ ದಶಮ ಸಂಭ್ರಮ-–2022ರ ಮೂರನೆಯ ಕಾರ್ಯಕ್ರಮವಾಗಿ ನಡೆದ ವಿದ್ಯಾರತ್ನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮಂಗಳೂರಿನ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಕೋಶಾಧಿಕಾರಿ ಉಳ್ತೂರು ಮೋಹನದಾಸ್ ಶೆಟ್ಟಿ ಉದ್ಘಾಟಿಸಿದರು   

ಕುಂದಾಪುರ: ‘ಪ್ರತಿಯೊಂದು ಯೋಜನೆಗಳು ಹಳ್ಳಿಯಲ್ಲಿರುವ ಅರ್ಹ ಫಲಾನುಭವಿಗಳನ್ನು ತಲುಪಿದಾಗ ಮಾತ್ರ ಅವು ಸಾರ್ಥಕ ಭಾವವನ್ನು ಪಡೆದುಕೊಳ್ಳುತ್ತದೆ. ಸೇವಾಕಾಂಕ್ಷೆಯಿಂದ ನೀಡುವ ದಾನ ಹಾಗೂ ಕೊಡುಗೆಗಳ ಸದುಪಯೋಗವಾಗಬೇಕು’ ಎಂದು ಮಂಗಳೂರಿನ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಕೋಶಾಧಿಕಾರಿ ಉಳ್ತೂರು ಮೋಹನದಾಸ್ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.

ಇಲ್ಲಿನ ಆರ್.ಎನ್.ಶೆಟ್ಟಿ ಸಭಾಂಗಣ ದಲ್ಲಿ ಭಾನುವಾರ ಕುಂದಾಪುರ ತಾಲ್ಲೂಕು ಯುವ ಬಂಟರ ಸಂಘದ ದಶಮ ಸಂಭ್ರಮ-2022ರ 3ನೇ ಕಾರ್ಯಕ್ರಮವಾಗಿ ನಡೆದ ವಿದ್ಯಾರತ್ನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರತಾಪಚಂದ್ರ ಶೆಟ್ಟಿ ಹಳ್ನಾಡು, ಈತನಕ 3,500 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗಿದೆ. ವಿದ್ಯಾ ದೀವಿಗೆ ಮೂಲಕ ಆರ್ಥಿಕ ಸಮಸ್ಯೆಯ ವಿದ್ಯಾರ್ಥಿಗಳಿಗೆ ಸಹಾಯ, ಶೇ 95ಕ್ಕಿಂತ ಅಧಿಕ ಅಂಕ ಪಡೆದವರಿಗೆ ಪ್ರೋತ್ಸಾಹಧನ ನೀಡಲಾಗಿದ್ದು, ಈವರೆಗೆ ಒಟ್ಟು ₹ 1 ಕೋಟಿ ಆರ್ಥಿಕ ನೆರವನ್ನು ವಿದ್ಯಾಭ್ಯಾಸಕ್ಕೆ ನೀಡಲಾಗಿದೆ ಎಂದರು.

ADVERTISEMENT

ತಾಲ್ಲೂಕು ಯುವ ಬಂಟರ ಸಂಘದ ಅಧ್ಯಕ್ಷ ಡಾ.ಅಂಪಾರು ನಿತ್ಯಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಆಸರೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷೆ ಆಶಾ ಜ್ಯೋತಿ ರೈ ಅಭಿನಂದನಾ ಭಾಷಣಾ ಮಾಡಿದರು. ಮಂಗಳೂರಿನ ಬಂಟರ ಯಾನೆ ನಾಡವರ ಮಾತೃ ಸಂಘದ ಕುಂದಾಪುರ ಸಂಚಾಲಕ ಆವರ್ಸೆ ಸುಧಾಕರ ಶೆಟ್ಟಿ ಹಾಗೂ ತಾಲ್ಲೂಕು ಯುವ ಬಂಟರ ಸಂಘದ ಗೌರವಾಧ್ಯಕ್ಷ ಬೈಲೂರು ಉದಯ್‌ಕುಮಾರ ಶೆಟ್ಟಿ ವಿದ್ಯಾರತ್ನ ಪ್ರಶಸ್ತಿ ಪ್ರದಾನ ಮಾಡಿದರು.

ಮುಂಬೈ ಗೋಲ್ಡನ್ ಫೋರ್ಕ್ ಹಾಸ್ಪಿಟಲ್‌ನ ಆಡಳಿತ ನಿರ್ದೇಶಕ ಆದರ್ಶ ಶೆಟ್ಟಿ ಹಾಲಾಡಿ, ಮುಂಬೈನ ಫಾಸ್ಟ್ ಟ್ರ್ಯಾಕ್ ವರ್ಲ್ಡ್ ಆಡಳಿತ ನಿರ್ದೇಶಕ ಮಂಜುನಾಥ ಶೆಟ್ಟಿ ಕೊಡ್ಲಾಡಿ, ಉದ್ಯಮಿ ಎಂ.ದಿನೇಶ್ ಹೆಗ್ಡೆ ಮೊಳಹಳ್ಳಿ ಹಾಗೂ ಗೋವಾದ ಶ್ರೀಲಕ್ಷ್ಮಿ ಎಂಪಾಯರ್ ಹೋಟೆಲ್ ಆಡಳಿತ ನಿರ್ದೇಶಕ ಕಾವಡಿ ಸದಾಶಿವ ಶೆಟ್ಟಿ ವಿವಿಧ ಯೋಜನೆಗೆ ಚಾಲನೆಗೆ ಚಾಲನೆ ನೀಡಿದರು.

ಗೋವಾ ಬಂಟರ ಸಂಘದ ನಿಕಟ ಪೂರ್ವ ಅಧ್ಯಕ್ಷ ಮುರಳಿ ಮೋಹನ್ ಶೆಟ್ಟಿ, ಹಿರಿಯ ಗುತ್ತಿಗೆದಾರರಾದ ಅರುಣ್ ಕುಮಾರ್ ಹೆಗ್ಡೆ, ಕೆ.ರಮೇಶ ಶೆಟ್ಟಿ ಕುಚ್ಚೂರು, ಧಾರವಾಡ ಹೋಟೆಲ್ ಅಸೋಸಿಯೇಶನ್ ಅಧ್ಯಕ್ಷ ಮಹೇಶ ಶೆಟ್ಟಿ, ಉದ್ಯಮಿಗಳಾದ ಬಿ.ವಿನಯ್ ಕುಮಾರ್ ಶೆಟ್ಟಿ, ಅಶೋಕ್ ಶೆಟ್ಟಿ ಸಂಸಾಡಿ, ರಾಘವ ಶೆಟ್ಟಿ ಕೊಡ್ಲಾಡಿ, ವತ್ಸಲಾ ದಯಾನಂದ್ ಶೆಟ್ಟಿ ವಿಜಯಾನಂದ ಶೆಟ್ಟಿ ಹಳ್ನಾಡು, ಹುಂತ್ರಿಕೆ ಸುಧಾಕರ ಶೆಟ್ಟಿ ಯುಎಇ, ಯುವ ಬಂಟರ ಸಂಘದ ನಿತೀಶ್ ಶೆಟ್ಟಿ ಬಸ್ರೂರು, ಅಕ್ಷಯ ಹೆಗ್ಡೆ ಮೊಳಹಳ್ಳಿ ಹಾಗೂ ದಿನಕರ ಶೆಟ್ಟಿ ಇದ್ದರು.

ಸಭಾ ಕಾರ್ಯಕ್ರಮದ ಬಳಿಕ ನೃತ್ಯನಿಕೇತನ ಕೊಡವೂರು ಇವರಿಂದ ನೃತ್ಯ ಸಿಂಚನ ಕಾರ್ಯಕ್ರಮ ಹಾಗೂ ನೃತ್ಯ ವಿದುಷಿ ಮಾನಸಿ ಸುಧೀರ್ ಆಯೋಜನೆಯಲ್ಲಿ ನಡೆದ ನೃತ್ಯ ವೈಭವ ಮನ ಸೆಳೆಯಿತು. ಸುಧೀರ್ ರಾವ್ ಕೊಡವೂರು ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.