ADVERTISEMENT

ಕುಂದಾಪುರ ಡಿಪೊದಲ್ಲಿ ಇಕ್ಕಟ್ಟು !

ಕೆ.ಸಿ.ರಾಜೇಶ್‌
Published 31 ಜನವರಿ 2025, 7:44 IST
Last Updated 31 ಜನವರಿ 2025, 7:44 IST
ಕುಂದಾಪುರ ನಗರದಲ್ಲಿ ಇರುವ ಕೆಎಸ್ಆರ್‌ಟಿಸಿ ಬಸ್‌ ಡಿಪೊದಲ್ಲಿ ನಿಂತಿರುವ ಸರ್ಕಾರಿ ಬಸ್‌ಗಳು
ಕುಂದಾಪುರ ನಗರದಲ್ಲಿ ಇರುವ ಕೆಎಸ್ಆರ್‌ಟಿಸಿ ಬಸ್‌ ಡಿಪೊದಲ್ಲಿ ನಿಂತಿರುವ ಸರ್ಕಾರಿ ಬಸ್‌ಗಳು   

ಕುಂದಾಪುರ: ಇಲ್ಲಿನ ಕೆಎಸ್ಆರ್‌ಟಿಸಿ ಬಸ್‌ ಡಿಪೊದಲ್ಲಿ ಕಾಲಿಡಲು ಜಾಗವಿಲ್ಲದಷ್ಟು ಬಸ್‌ಗಳು ತುಂಬಿರುವುದರಿಂದ, ಬೈಂದೂರು ಹಾಗೂ ಕುಂದಾಪುರ ತಾಲ್ಲೂಕಿನ ಜನರ ಹಾಗೂ ಜನಪ್ರತಿನಿಧಿಗಳ, ಬಸ್‌ ಬೇಕು ಎನ್ನುವ ಬೇಡಿಕೆಗೆ ಸ್ಪಂದಿಸಲು ಆಗದ ಅಸಹಾಯಕತೆ ಇಲ್ಲಿದೆ.

ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಹೆಚ್ಚುವರಿ ಮಾರ್ಗಗಳನ್ನು ಗುರುತಿಸಲು ಹಾಗೂ ಅದಕ್ಕೆ ಪೂರಕವಾಗಿ ಹೆಚ್ಚುವರಿ ಬಸ್‌ಗಳಿಗೆ ಬೇಡಿಕೆ ಸಲ್ಲಿಸಲು ಅಧಿಕಾರಿಗಳು ಹಿಂದೆ-ಮುಂದೆ ನೋಡಬೇಕಾದ ವಾಸ್ತವಿಕತೆ ಇದೆ.

ಕುಂದಾಪುರ ಡಿಪೊದಲ್ಲಿ ಒಟ್ಟು 117 ಬಸ್‌ಗಳು ರಾಜ್ಯದ ವಿವಿಧ ಭಾಗಗಳಿಗೆ ಓಡಾಟ ನಡೆಸುತ್ತವೆ. ಶಕ್ತಿ ಯೋಜನೆಗೆ ಸಂಬಂಧಪಟ್ಟಂತೆ 39 ಬಸ್‌ಗಳು ಸಾಮಾನ್ಯ ಸಾರಿಗೆಯಾಗಿಯೂ, 36 ಬಸ್‌ಗಳು ವೇಗದೂತ ಸಾರಿಗೆಯಾಗಿಯೂ ಸಂಚರಿಸುತ್ತವೆ. ಕುಂದಾಪುರ, ಬೈಂದೂರು ವಿಧಾನಸಭಾ ಕ್ಷೇತ್ರಗಳ ಗ್ರಾಮಾಂತರ ಪ್ರದೇಶಕ್ಕೆ ಕೆಎಸ್‌ಆರ್‌ಟಿಸಿಯ 38 ಬಸ್‌ಗಳು ನಿತ್ಯ ಓಡಾಟ ನಡೆಸುತ್ತವೆ. ವಿದ್ಯಾರ್ಥಿಗಳು ಸೇರಿದಂತೆ ಪ್ರತಿನಿತ್ಯ ಅಂದಾಜು 15 ಸಾವಿರ ಪ್ರಯಾಣಿಕರು ಸಂಚರಿಸುತ್ತಾರೆ.

ADVERTISEMENT

ಕುಂದಾಪುರ ನಗರವೂ ಬೆಳೆದಿರುವುದರಿಂದ ಡಿಪೊ ಇರುವ ಪ್ರದೇಶದ ಅಕ್ಕ-ಪಕ್ಕದಲ್ಲಿ ವಾಣಿಜ್ಯ ಕಟ್ಟಡಗಳು ಎದ್ದು ನಿಂತಿದೆ. ರಾಷ್ಟ್ರೀಯ ಹೆದ್ದಾರಿ 66 ಚತುಷ್ಪತವಾಗಿ ವಿಸ್ತರಣೆಯಾಗಿರುವುದರಿಂದ, ಡಿಪೊ ಪ್ರವೇಶ ದ್ವಾರಕ್ಕೆ ತಾಗಿಕೊಂಡೆ ಸರ್ವಿಸ್ ರಸ್ತೆಗಳು ಹಾದು ಹೋಗಿದೆ. ಈ ಎಲ್ಲ ಅವಾಂತರಗಳಿಂದ ಬಸ್‌ಗಳು ಡಿಪೊ ಪ್ರವೇಶಿಸಿ, ಹೊರ ಹೋಗುವುದೇ ಒಂದು ಸಾಹಸವಾಗಿದೆ.

ಈ ಹಿಂದೆ ಶಾಸಕರಾಗಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ಮುತುವರ್ಜಿಯಿಂದ ಮಂಜೂರಾಗಿದ್ದ ₹3 ಕೋಟಿ ಅನುದಾನದಲ್ಲಿ, ಡಿಪೊದಲ್ಲಿ ಸುಸಜ್ಜಿತ ಕಟ್ಟಡವೊಂದು ನಿರ್ಮಾಣವಾಗಿದೆ. ಕುಂದಾಪುರ ವಿಭಾಗ ವ್ಯಾಪ್ತಿಯ ಬಸ್‌ಗಳು ಸೇರಿ, ತುರ್ತು ಸೇವೆಗಳ ಅಗತ್ಯಕ್ಕಾಗಿ ಡಿಪೊಗೆ ಬಂದು ಹೋಗುವ ಬಸ್‌ಗಳಿಂದಾಗಿ ಹೊಸ ಬಸ್‌ಗಳನ್ನು ನಿಲ್ಲಿಸಲು ಜಾಗದ ತಾಪತ್ರಯ ಇಲ್ಲಿದೆ. ಈ ಕಾರಣಕ್ಕಾಗಿಯೇ ಬೇಡಿಕೆ ಇದ್ದರೂ, ಹೊಸ ರೂಟ್‌ ಹಾಗೂ ಬಸ್‌ಗಳನ್ನು ಬರಮಾಡಿಕೊಳ್ಳುವ ಧೈರ್ಯಕ್ಕೆ ಯಾರು ಮುಂದಾಗುತ್ತಿಲ್ಲ.

ಶಕ್ತಿ ತುಂಬಿದ ಗ್ಯಾರಂಟಿ ಯೋಜನೆ: ಶಕ್ತಿ ಯೋಜನೆಯಡಿಯಡಿ ಈವರೆಗೆ ಉಭಯ ತಾಲ್ಲೂಕಿನ 1,10,99,961 ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದು, ₹39,30,02,325 ರಿಯಾಯಿತಿ ಪಡೆದಿದ್ದಾರೆ.

ಸಿಬ್ಬಂದಿ ಕೊರತೆ: ಈ ಹಿಂದೆ ಶಾಸಕರಾಗಿದ್ದ ಕೆ.ಗೋಪಾಲ ಪೂಜಾರಿ, ಬಿ.ಎಂ.ಸುಕುಮಾರ ಶೆಟ್ಟಿ, ವಿಧಾನಪರಿಷತ್ ಸಭಾಪತಿಯಾಗಿದ್ದ ಕೆ.ಪ್ರತಾಪ್‌ಚಂದ್ರ ಶೆಟ್ಟಿ ಸೇರಿದಂತೆ, ಹಾಲಿ ಜನಪ್ರತಿನಿಧಿಗಳು ಬೈಂದೂರು ಹಾಗೂ ಕುಂದಾಪುರ ವಿಧಾನಸಭಾ ಕ್ಷೇತ್ರದ ಗ್ರಾಮೀಣ ಭಾಗಗಳಿಗೆ ಸರ್ಕಾರಿ ಸಾರಿಗೆ ಸಂಪರ್ಕ ಕಲ್ಪಿಸುವಂತೆ ಅಧಿವೇಶನ ಮನವಿ ಮಾಡಿದ್ದು, ಹೋರಾಟದ ಎಚ್ಚರಿಕೆಯನ್ನೂ ನೀಡಿದ್ದಾರೆ.

ವಿದ್ಯಾರ್ಥಿ, ಕಾರ್ಮಿಕರ ಸಂಘಟನೆಗಳು ಪ್ರತಿಭಟನೆ ಮಾಡಿ ಸರ್ಕಾರದ ಗಮನ ಸೆಳೆಯುವ ಪ್ರಯತ್ನವನ್ನೂ ಮಾಡಿದೆ. ಆದರೆ, ಜಾಗ ಹಾಗೂ ಸಿಬ್ಬಂದಿ ಕೊರತೆಯಿಂದಾಗಿ ಯಾವ ಬೇಡಿಕೆಗಳು ಪರಿಗಣನೆಯಾಗಿಲ್ಲ. ಪ್ರತಿಭಟನಾಕಾರರ ಹಾಗೂ ಜನಪ್ರತಿನಿಧಿಗಳ ಕಣ್ಣೊರೆಸಲು ಒಂದಷ್ಟು ದಿನ ಇದ್ದ ಬಸ್‌ಗಳನ್ನೇ ಆಚೆ-ಈಚೆ ಓಡಿಸಿ, ಕಾವು ಕಡಿಮೆಯಾದಂತೆ ಮತ್ತದೆ ಹಳೆಯ ವ್ಯವಸ್ಥೆಗೆ ಹೊಂದಿಕೊಳ್ಳಬೇಕಾದ ಧರ್ಮ ಸಂಕಟ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗಿದೆ.

ಕೆಲವು ಪರ್ಮಿಟ್ ಇರುವ ಮಾರ್ಗಗಳಲ್ಲೂ ಬಸ್ ಸಂಚಾರ ಪುನಾರಂಭ ಮಾಡಲು ಸಿಬ್ಬಂದಿ ಕೊರತೆಯಿದೆ. ಈಗಾಗಲೇ 45 ಸಿಬ್ಬಂದಿ ಕೊರತೆಯಿದೆ. ರಜೆಗೆಂದು ಊರಿಗೆ ಹೋದವರು, ನಿಯಮಿತವಾಗಿ ಮರಳಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುತ್ತಿಲ್ಲ ಎನ್ನುವ ದೂರುಗಳು ಇದೆ. ಅಪ್ರೆಂಟಿಸ್‌ಗಾಗಿ ಒಂದಷ್ಟು ಮಂದಿ ಬರುತ್ತಿದ್ದರೂ, ಕಡಿಮೆ ಶಿಷ್ಯವೇತನ ಎನ್ನುವ ಕಾರಣಕ್ಕಾಗಿ ಈ ಸಂಖ್ಯೆಯೂ ಇಳಿಮುಖವಾಗುತ್ತಿದೆ. ತಾಲ್ಲೂಕಿನಲ್ಲಿ ಇರುವ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳನ್ನು ಒಜೆಟಿ ತರಬೇತಿಗೆ ಹೊಂದಿಸಿಕೊಳ್ಳುವ ಅವಕಾಶವಿದ್ದರೂ, ಇಲಾಖೆ ಈವರೆಗೂ ಈ ಬಗ್ಗೆ ಯಾವುದೇ ಗಂಭೀರ ಕಾರ್ಯಕ್ರಮ ರೂಪಿಸಿಕೊಂಡಿಲ್ಲ.

ಕಾಯಂ ಸಿಬ್ಬಂದಿ ಬದಲು, ಏಜೆನ್ಸಿ ಮೂಲಕ ವಾರ್ಷಿಕ ಗುತ್ತಿಗೆ ಆಧಾರದಲ್ಲಿ ಸಿಬ್ಬಂದಿ ಸೇವೆ ಪಡೆದುಕೊಳ್ಳುವ ಕಾರಣದಿಂದ ಅನಧಿಕೃತ ಗೈರಿಗೆ ಕಡಿವಾಣವೇ ಇಲ್ಲದಂತಾಗಿದೆ. ಹೊಸದಾಗಿ 2 ಸಾವಿರ ಮಂದಿಯ ನೇಮಕಾತಿ ಆಗಲಿದ್ದು, ಇದಕ್ಕಾಗಿ 25 ಸಾವಿರ ಮಂದಿಯ ಚಾಲನಾ ಪರೀಕ್ಷೆ ನಡೆಯುತ್ತಿದೆ. ಇದು ಪೂರ್ಣವಾದ ಬಳಿಕ ಚಾಲಕ, ನಿರ್ವಾಹಕರು ದೊರೆಯಬಹುದು. ಹಾಗಿದ್ದರೂ ಸ್ಥಳೀಯರಲ್ಲದೆ, ಹೊರ ಭಾಗದವರೇ ತುಂಬಿಕೊಂಡರೇ, ಈ ಸಮಸ್ಯೆಗಳಿಗೆ ಮುಕ್ತಿ ಇಲ್ಲ ಎನ್ನುವುದು ಇಲ್ಲಿನ ಸಿಬ್ಬಂದಿ ಮಾತು.

ತುಂಬಿ ತುಳುಕುತ್ತಿರುವ ಕುಂದಾಪುರ ಡಿಪೊ ಜನರ ಬೇಡಿಕೆ ಈಡೇರಿಕೆ ವಿಫಲ ಆದಾಯವಿದ್ದರೂ, ವ್ಯವಸ್ಥೆ ಇಲ್ಲ; ವಿದ್ಯಾರ್ಥಿಗಳಿಗೆ ಸಮಸ್ಯೆ
ಪ್ರಮುಖ ಧಾರ್ಮಿಕ ಕೇಂದ್ರಗಳು ಹಾಗೂ ಪ್ರವಾಸಿ ತಾಣಗಳನ್ನು ಹೊಂದಿರುವ ಬೈಂದೂರು ವಿಧಾನಸಭಾ ಕ್ಷೇತ್ರದ ಸಂಪರ್ಕ ವಿಸ್ತರಣೆಗೆ ಅಗತ್ಯವಾಗಿರುವ ಡಿಪೊ ನಿರ್ಮಾಣಕ್ಕಾಗಿ ಸಂಬಂಧಪಟ್ಟ ಇಲಾಖೆಗಳ ಜತೆ ಚರ್ಚಿಸಲಾಗುವುದು
ಗುರುರಾಜ್ ಗಂಟಿಹೊಳೆ ಶಾಸಕ ಬೈಂದೂರು.
ಬೈಂದೂರಿನಲ್ಲಿ ಡಿಪೊ ಆದಲ್ಲಿ ಕುಂದಾಪುರದ ಭಾರ ಕಡಿಮೆಯಾಗುವುದರ ಜೊತೆಗೆ ಇನ್ನಷ್ಟು ಜನರಿಗೆ ಸರ್ಕಾರಿ ಬಸ್ ಸೌಕರ್ಯ ದೊರೆಯಲಿದೆ. ಡಿಪೊ ನಿರ್ಮಾಣಕ್ಕಾಗಿ ಕನಿಷ್ಟ 5ಎಕರೆ ಜಾಗದ ಅವಶ್ಯಕತೆಯಿದ್ದು ಜಾಗ ದೊರಕಿದ್ದಲ್ಲಿ ಪ್ರಸ್ತಾವನೆ ಸಲ್ಲಿಸಬಹುದು
ಉದಯ ಶೆಟ್ಟಿ ವ್ಯವಸ್ಥಾಪಕ ಕುಂದಾಪುರ ಡಿಪೊ
ನಾನು ಶಾಸಕ ಹಾಗೂ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷನಾಗಿದ್ದ ವೇಳೆ ಬೈಂದೂರಿಗೆ ಸುಸಜ್ಜಿತ ಬಸ್‌ ನಿಲ್ದಾಣಕ್ಕೆ ಅನುದಾನ ಮಂಜೂರಾತಿ ಆಗಿತ್ತು. ಜಿಲ್ಲೆಯ ಬಹುತೇಕ ಗ್ರಾಮೀಣ ಭಾಗಗಳಿಗೆ ಬೇಡಿಕೆಗೆ ಅನುಗುಣವಾಗಿ ಖಾಸಗಿಯವರ ವಿರೋಧವಿದ್ದರೂ ಸರ್ಕಾರಿ ಬಸ್‌ಗಳ ಓಡಾಟ ನಡೆಸಲಾಗಿತ್ತು. ಜಿಲ್ಲೆಯ ಜನಪ್ರತಿನಿಧಿಗಳು ಈ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ
ಕೆ.ಗೋಪಾಲ ಪೂಜಾರಿ ಮಾಜಿ ಶಾಸಕ ಬೈಂದೂರು.
ಬೈಂದೂರಿಗೆ ಬೇಕು ಡಿಪೊ
ಕೊಲ್ಲೂರು ಮರವಂತೆ ಮಾರಣಕಟ್ಟೆ ಸೋಮೇಶ್ವರ ಸೇರಿದಂತೆ ಹಲವು ಪ್ರಮುಖ ಧಾರ್ಮಿಕ ಹಾಗೂ ಪ್ರವಾಸಿ ತಾಣವನ್ನು ಹೊಂದಿರುವ ಬೈಂದೂರಿನಲ್ಲಿ ಹೊಸದಾಗಿ ಕೆಎಸ್‌ಆರ್‌ಟಿಸಿ ಡಿಪೊ ಪ್ರಾರಂಭಿಸಿದಲ್ಲಿ ಕುಂದಾಪುರ ಡಿಪೊದ ಒತ್ತಡ ಕಡಿಮೆಯಾಗಿ ಜನರ ಬೇಡಿಕೆಗಳಿಗೆ ಪರಿಹಾರ ದೊರೆತು ಸಂಸ್ಥೆಯ ಆದಾಯವೂ ಹೆಚ್ಚಾಗುತ್ತದೆ ಎನ್ನುವ ವ್ಯವಹಾರಿಕ ಲೆಕ್ಕಾಚಾರಗಳಿವೆ. ಮಂಗಳೂರು ವಿಭಾಗಕ್ಕೆ ಸೇರಿರುವ ಉಡುಪಿ ಜಿಲ್ಲೆಯಲ್ಲಿ ಉಡುಪಿ ಹಾಗೂ ಕುಂದಾಪುರದಲ್ಲಿ ಮಾತ್ರ ಡಿಪೊಗಳಿವೆ. ಬೈಂದೂರಿನಲ್ಲಿ ಕೋಟ್ಯಾಂತರ ರೂ. ವೆಚ್ಚದಲ್ಲಿ ಸುಸಜ್ಜಿತ ಸರ್ಕಾರಿ ಬಸ್‌ ನಿಲ್ದಾಣವಾಗಿದ್ದರೂ 6-7 ವರ್ಷಗಳಿಂದ ಉದ್ಘಾಟನೆಯಾಗದೆ ನನೆಗುದಿಗೆ ಬಿದ್ದಿತ್ತು. ಫೆಬ್ರವರಿ ತಿಂಗಳಲ್ಲಿ ಇದರ ಉದ್ಘಾಟನೆಯಾಗಲಿದೆ ಎನ್ನುವ ನಿರೀಕ್ಷೆಗಳಿವೆ. ನಿಲ್ದಾಣದಲ್ಲಿನ ಸ್ಟಾಲ್ ಹೋಟೆಲ್‌ಗಳಿಗೆ ಟೆಂಡರ್ ಕರೆದಿದೆ. ಬೆಳೆಯುತ್ತಿರುವ ಬೈಂದೂರಿನಲ್ಲಿ ಡಿಪೊ ಆದರೆ ಗ್ರಾಮಾಂತರ ಪ್ರದೇಶಗಳಿಗೆ ಇನ್ನಷ್ಟು ಸಾರಿಗೆ ಸೌಲಭ್ಯ ನೀಡಬಹುದು. ಕೊಲ್ಲೂರಿನಂತಹ ಧಾರ್ಮಿಕ ಕೇಂದ್ರವನ್ನು ಬೆಸೆಯಬಹುದು. ಕುಂದಾಪುರ ಡಿಪೊ ಮೇಲಿರುವ ಒತ್ತಡವೂ ಕಡಿಮೆಯಾಗಲಿದೆ ಎನ್ನುವ ಆಶಾವಾದಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.