ಕುಂದಾಪುರ ಸಮೀಪದ ಗಂಗೊಳ್ಳಿಯಲ್ಲಿ ದೋಣಿ ದುರಂತದಲ್ಲಿ ಮೃತರಾದವರ ಕುಟುಂಬಕ್ಕೆ ಸಚಿವ ಮಂಕಾಳ ವೈದ್ಯ ಪರಿಹಾರದ ಚೆಕ್ ವಿತರಿಸಿದರು
ಕುಂದಾಪುರ: ಗಂಗೊಳ್ಳಿಯಲ್ಲಿ ನಡೆದ ನಾಡ ದೋಣಿ ದುರಂತದಲ್ಲಿ ಮೃತಪಟ್ಟ ಮೀನುಗಾರರ ಕುಟುಂಬಗಳಿಗೆ ರಾಜ್ಯ ಸರ್ಕಾರದಿಂದ ತಲಾ ₹10 ಲಕ್ಷ ಪರಿಹಾರ ವಿತರಿಸಲಾಗಿದೆ ಎಂದು ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ತಿಳಿಸಿದ್ದಾರೆ.
ದೋಣಿ ದುರಂತದಲ್ಲಿ ಮೃತಪಟ್ಟ ಸಿಪಾಯಿ ಸುರೇಶ್ ಖಾರ್ವಿ, ಜಗನ್ನಾಥ ಖಾರ್ವಿ, ಲೋಹಿತ್ ಖಾರ್ವಿ ಅವರ ಮನೆಗಳಿಗೆ ಶನಿವಾರ ಭೇಟಿ ನೀಡಿ ಸರ್ಕಾರದಿಂದ ನೀಡಲಾದ ಪರಿಹಾರದ ಚೆಕ್ ವಿತರಿಸಿ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಸುರಕ್ಷತೆಯ ದೃಷ್ಟಿಯಿಂದ ಮಳೆಗಾಲದಲ್ಲಿ ಮೀನುಗಾರರು ಮೀನುಗಾರಿಕೆಗೆ ಹೋಗದಿರುವುದು ಒಳ್ಳೆಯದು. ಹೋಗುವುದಿದ್ದರೂ ಎಚ್ಚರ ವಹಿಸಬೇಕು. ಕಡ್ಡಾಯವಾಗಿ ಲೈಫ್ ಜಾಕೆಟ್ ಧರಿಸಬೇಕು. ಗಂಗೊಳ್ಳಿ ಬಂದರಿನಲ್ಲಿ ಕುಸಿದ ಜೆಟ್ಟಿಯ ಅವಶೇಷಗಳನ್ನು ತೆರವು ಮಾಡಲಾಗುತ್ತಿದ್ದು, ಇದನ್ನು ದುರಸ್ತಿ ಪಡಿಸಲು ಅಂದಾಜು ಪಟ್ಟಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಗಂಗೊಳ್ಳಿ ಬಂದರಿನಲ್ಲಿ ಮೂಲಭೂತ ಸೌಲಭ್ಯಕ್ಕಾಗಿ ₹ 20 ಕೋಟಿ ರೂಪಾಯಿ ಮಂಜೂರಾಗಿ ಟೆಂಡರ್ ಆಗಿದೆ. ಅಳಿವೆಯಲ್ಲಿ ಹೂಳು ತೆಗೆಯುವ ಬಗ್ಗೆ ಹಾಗೂ ಬ್ರೇಕ್ ವಾಟರ್ ವಿಸ್ತರಣೆ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದರು.
ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಗಂಗೊಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಂತಿ ಖಾರ್ವಿ, ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕ ವಿವೇಕ, ಅಧಿಕಾರಿಗಳಾದ ಕುಮಾರಸ್ವಾಮಿ, ಆಶಾ, ಕುಂದಾಪುರ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್, ಜಿ.ಪಂ. ಮಾಜಿ ಅಧ್ಯಕ್ಷ ಎಸ್.ರಾಜು ಪೂಜಾರಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಪ್ರಮುಖರಾದ ಎಸ್.ಪ್ರಕಾಶ್ಚಂದ್ರ ಶೆಟ್ಟಿ, ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು, ಅರವಿಂದ ಪೂಜಾರಿ, ಮೀನುಗಾರ ಮುಖಂಡರು, ಗ್ರಾಮ ಪಂಚಾಯಿತಿ ಸದಸ್ಯರು, ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರು, ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.