ADVERTISEMENT

ಕುಂದಾಪುರ: ಕುಂದೇಶ್ವರ ಲಕ್ಷ ದೀಪೋತ್ಸವ ಸಂಪನ್ನ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2025, 5:48 IST
Last Updated 22 ನವೆಂಬರ್ 2025, 5:48 IST
ಕುಂದಾಪುರ ನಗರದ ಪೇಟೆಗಳು ಕುಂದೇಶ್ವರ ದೀಪೋತ್ಸವ ಸಂಭ್ರಮಕ್ಕಾಗಿ ಅಲಂಕಾರಗೊಂಡಿರುವುದು
ಕುಂದಾಪುರ ನಗರದ ಪೇಟೆಗಳು ಕುಂದೇಶ್ವರ ದೀಪೋತ್ಸವ ಸಂಭ್ರಮಕ್ಕಾಗಿ ಅಲಂಕಾರಗೊಂಡಿರುವುದು   

ಕುಂದಾಪುರ: ಇಲ್ಲಿನ ಶ್ರೀಕುಂದೇಶ್ವರ ದೇವಸ್ಥಾನದ ಕಾರ್ತಿಕ ಅಮಾವಾಸ್ಯೆಯ ಲಕ್ಷ ದೀಪೋತ್ಸವ ಬುಧವಾರ ಸಂಭ್ರಮದಿಂದ ನಡೆಯಿತು.

ಬೆಳಿಗ್ಗೆ ಖುತ್ವೀಜರಿಂದ ಬ್ರಹ್ಮಕಲಶ ಸ್ಥಾಪನೆ, ಕಲಾಭಿವೃದ್ಧಿ ಹೋಮ, ಶತರುದ್ರಾಭಿಷೇಕ ಹೋಮ, ಮಹಾಪೂಜೆ ಹಾಗೂ ಪ್ರಸಾದ ವಿತರಣೆ ಜರುಗಿತು. ತಾಲ್ಲೂಕಿನ ವಿವಿಧ ಭಜನಾ ಒಕ್ಕೂಟಗಳಿಂದ ಸೂರ್ಯೋದಯದಿಂದ ಸೂರ್ಯಾಸ್ತಮಾನದವರೆಗೆ ಭಜನಾ ಸಂಕೀರ್ತನೆ ಹಾಗೂ ಕುಣಿತ ಭಜನೆ ಸೇವೆ ನಡೆದವು.

ಸಂಜೆ ಶ್ರೀಕುಂದೇಶ್ವರ ಸನ್ನಿಧಿಯಲ್ಲಿ ರಂಗಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ, ಲಕ್ಷ ದೀಪೋತ್ಸವ, ಪುಷ್ಪಕ ರಥದಲ್ಲಿ ಶ್ರೀದೇವರ ಪುರ ಮೆರವಣಿಗೆ, ಕಟ್ಟೆ ಪೂಜೆ ಹಾಗೂ ಕೆರೆದೀಪ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ADVERTISEMENT

ಶ್ರೀದೇವರ ಪುರ ಮೆರವಣಿಗೆಯಲ್ಲಿ ಪಂಚವಾದ್ಯ, ತಟ್ಟಿರಾಯ ಸಹಿತ ವಿವಿಧ ಕಲಾಪ್ರಕಾರ ತಂಡಗಳು ಇದ್ದವು. ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯುಕ್ತ ನೃತ್ಯ ವಿದೂಷಿ ಪ್ರವೀತಾ ಅಶೋಕ ಅವರ ನಿರ್ದೇಶನದಲ್ಲಿ ನೃತ್ಯ ವಸಂತ ನಾಟ್ಯಾಲಯದ ಕಲಾವಿದರಿಂದ ‘ನೃತ್ಯ ಸಿಂಚನ’, ಯಕ್ಷ ಪಲ್ಲವಿ (ರಿ) ಯಕ್ಷಗಾನ ಮಂಡಳಿ ಮಾಳಕೋಡ್ ಅವರಿಂದ ಯಕ್ಷ-ಗಾನ-ವೈಭವ ಕಾರ್ಯಕ್ರಮ ನಡೆಯಿತು.

ದೇವರ ಕಟ್ಟೆ ಪೂಜೆ ನಡೆಯುವ ವಿವಿಧ ಕಡೆಗಳಲ್ಲಿ ತಳಿರು-ತೋರಣ ಕಟ್ಟಿ, ಬಣ್ಣ ಬಣ್ಣದ ದೀಪಾಲಂಕಾರ ಮಾಡಲಾಗಿತ್ತು. ನಗರದ ವಿವಿಧ ಕಡೆಗಳಲ್ಲಿ ವಿವಿಧ ಸಂಘಟನೆಗಳಿಂದ ಯಕ್ಷಗಾನ, ರಸಸಂಜೆ, ನಾಟ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ನಗರದ ಕಟ್ಟಡಗಳನ್ನು ವಿದ್ಯುತ್ ದೀಪಾಲಂಕಾರಗಳಿಂದ ಅಲಂಕರಿಸಲಾಗಿತ್ತು. ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಬಂದಿದ್ದ ಭಕ್ತರು ಕುಂದೇಶ್ವರನ ದರ್ಶನ ಪಡೆದು, ದೀಪೋತ್ಸವದ ಸಂಭ್ರಮ ಅನುಭವಿಸಿದರು.

ಕುಂದಾಪುರ ಉಪ ವಿಭಾಗದ ಡಿವೈಎಸ್‌ಪಿ ಎಚ್.ಡಿ.ಕುಲಕರ್ಣಿ ಅವರ ಮಾರ್ಗದರ್ಶನದಲ್ಲಿ, ಇನ್ಸ್‌ಪೆಕ್ಟರ್‌ಗಳಾದ ಜಯರಾಂ ಗೌಡ ಹಾಗೂ ಸಂತೋಷ್ ಕಾಯ್ಕಿಣಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಪೊಲೀಸ್ ಉಪ ನಿರೀಕ್ಷಕರಾದ ನಂಜಾ ನಾಯ್ಕ್, ನೂತನ್, ಪುಷ್ಪಾ, ನಾಸೀರ್ ಹುಸೇನ್ ಕರ್ತವ್ಯದಲ್ಲಿ ಇದ್ದರು.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಾಸುದೇವ ಯಡಿಯಾಳ, ಸದಸ್ಯರಾದ ಸತೀಶ್ ಗಾಣಿಗ, ಜಿ.ಎಸ್. ಭಟ್, ನಾಗರಾಜ್ ನಾಯ್ಕ್, ವಿಠಲ ಕಾಂಚನ್, ದಿನೇಶ್, ಗಿರಿಜಾ ಉದಯ್ ಹವಾಲ್ದಾರ್, ಸೀಮಾ ಚಂದ್ರ ಪೂಜಾರಿ, ರಾಜಶೇಖರ ಮಂಜರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.