ADVERTISEMENT

ಕುಂದಾಪುರದ ಪಂಚ ಗಂಗಾವಳಿ ಕಾಂಡ್ಲಾ ಪಾರಂಪರಿಕ ಜೀವವೈವಿಧ್ಯ ತಾಣ: ಅನಂತ ಹೆಗಡೆ

ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2021, 12:22 IST
Last Updated 20 ಫೆಬ್ರುವರಿ 2021, 12:22 IST
ಅನಂತ ಹೆಗಡೆ ಅಶೀಸರ, ಕರ್ನಾಟಕ ಜೀವವೈವಿಧ್ಯ ಮಂಡಳಿ ಅಧ್ಯಕ್ಷ
ಅನಂತ ಹೆಗಡೆ ಅಶೀಸರ, ಕರ್ನಾಟಕ ಜೀವವೈವಿಧ್ಯ ಮಂಡಳಿ ಅಧ್ಯಕ್ಷ   

ಉಡುಪಿ: ಕುಂದಾಪುರ ತಾಲ್ಲೂಕಿನ ಪಂಚ ಗಂಗಾವಳಿ ಅಳಿವೆ ತೀರದಲ್ಲಿರುವ 100 ಎಕ್ಟೇರ್ ಕಾಂಡ್ಲಾ ವನವನ್ನು ಪಾರಂಪರಿಕ ಜೀವವೈವಿಧ್ಯ ಪ್ರದೇಶವನ್ನಾಗಿ ಘೋಷಿಸಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ತಿಳಿಸಿದರು.

ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜೀವ ವೈವಿಧ್ಯ ಮಂಡಳಿ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ರಾಜ್ಯದಲ್ಲಿಯೇ ವಿಸ್ತಾರವಾದ ಕಾಂಡ್ಲಾವನ ಪಂಚ ಗಂಗಾವಳಿ ತೀರದಲ್ಲಿದ್ದು, ಈ ಪ್ರದೇಶವನ್ನು ಪಾರಂಪರಿಕ ಜೀವವೈವಿಧ್ಯ ತಾಣವಾಗಿಸಲು ತೀರ್ಮಾನಿಸಲಾಗಿದೆ. ಸಿಆರ್‌ಝೆಡ್‌ ಅಧಿಕಾರಿಗಳು ಹಾಗೂ ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ವರದಿ ಸಲ್ಲಿಸಿದ ಬಳಿಕ ಜೀವವೈವಿಧ್ಯ ಮಂಡಳಿಯ ಸಭೆಯಲ್ಲಿ ಘೋಷಿಸಲಾಗುವುದು ಎಂದರು.‌

ಮಂಗಗಳ ಹಾವಳಿಯಿಂದ ಬೆಳೆ ನಷ್ಟವಾದರೆ ರೈತರಿಗೆ ಪರಿಹಾರ ವಿತರಿಸಬೇಕು ಹಾಗೂ ಕಾಡಂಚಿನ ರೈತರಿಗೆ ಸೋಲಾರ್ ಬೇಲಿ ಅಳವಡಿಕೆಗೆ ಸಬ್ಸಿಡಿ ಪ್ರಮಾಣವನ್ನು ಶೇ 50 ರಿಂದ ಶೇ 100ಕ್ಕೆ ಹೆಚ್ಚಿಸಬೇಕು ಎಂದು ಮನವಿ ಮಾಡಲಾಗಿದ್ದು, ಬಜೆಟ್‌ನಲ್ಲಿ ಘೋಷಿಸುವಂತೆ ಒತ್ತಾಯಿಸಲಾಗಿದೆ. 10 ವರ್ಷದ ಹಿಂದೆ ಜಾರಿಯಲ್ಲಿದ್ದ ಕರಾವಳಿ ಹಸಿರು ಕವಚ ಯೋಜನೆಯನ್ನು ಮತ್ತೆ ಅನುಷ್ಠಾನಕ್ಕೆ ತರುವಂತೆ ಬಜೆಟ್‌ ಪೂರ್ವ ಸಭೆಯಲ್ಲಿ ಪ್ರಸ್ತಾಪಿಸಲಾಗಿದೆ ಎಂದು ಅಶೀಸರ ತಿಳಿಸಿದರು.

ADVERTISEMENT

ಪೇಜಾವರ ಸ್ಮೃತಿ ವನ

ಪೇಜಾವರ ಮಠದ ವಿಶ್ವೇಶತೀರ್ಥರ ಸ್ಮರಣಾರ್ಥ ಉಡುಪಿಯಲ್ಲಿ ‘ಪೇಜಾವರ ಸ್ಮೃತಿ ವನ’ ನಿರ್ಮಾಣಕ್ಕೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗಿದೆ. ಸರ್ಕಾರ ಕೂಡ ಸ್ಮೃತಿ ವನ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಿದ್ದು, ಸೂಕ್ತ ಜಾಗ ಗುರುತಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.