ಕಾರ್ಕಳ: ಹೆಲ್ಮೆಟ್ ಹಾಕದ ಕಾರಣಕ್ಕೆ ವಕೀಲ ಪ್ರೀತಂ ಮೇಲೆ ಚಿಕ್ಕಮಗಳೂರು ನಗರ ಠಾಣೆ ಪೊಲೀಸರು ಅಮಾನುಷವಾಗಿ ನಡೆಸಿರುವ ಹಲ್ಲೆ ಖಂಡನೀಯ ಎಂದು ಕಾರ್ಕಳ ವಕೀಲ ಸಂಘದ ವತಿಯಿಂದ ಕೋರ್ಟ್ ಆವರಣದಲ್ಲಿ ಭಾನುವಾರ ಕಾರ್ಕಳ ಬಾರ್ ಅಸೋಸಿಯೇಷನ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಹೆಲ್ಮೆಟ್ ಹಾಕದಿದ್ದರೆ ದಂಡ ಕಟ್ಟಿಸಿಕೊಳ್ಳಬೇಕಾದ ಪೊಲೀಸರು ಠಾಣೆಗೆ ಕರೆದೊಯ್ದು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವುದು ಖಂಡನಾರ್ಹ ಎಂದು ಕಾರ್ಕಳ ಬಾರ್ ಅಸೋಸಿಯೇಷನ್ ಅಧ್ಯಕ್ಷ ಸುನಿಲ್ ಕುಮಾರ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು.
ಪೊಲೀಸರ ಹಲ್ಲೆಯಿಂದ ವಕೀಲ ಪ್ರೀತಂ ಎದೆ, ಬೆನ್ನು, ಕೈಗಳಿಗೆ ಗಾಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿಗಳಾದ ಪೊಲೀಸರ ಮೇಲೆ 307 ಸೆಕ್ಷನ್ ಅಡಿ ದೂರು ದಾಖಲಾಗಿತ್ತು. ಆದರೂ ಅದೇ ದಿನ ಜಾಮೀನು ಪಡೆದು ಆರೋಪಿಗಳು ಹೊರಬಂದಿದ್ದಾರೆ. ಹೈಕೋರ್ಟ್ ಸರ್ಕಾರಿ ವಕೀಲನನ್ನು ನೇಮಿಸಿ ಆರೋಪಿತ ಪೊಲೀಸರ ವಿರುದ್ಧ ಕಾನೂನಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಂಘದ ಉಪಾಧ್ಯಕ್ಷ ಹರೀಶ್ ಅಧಿಕಾರಿ, ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್, ಹಿರಿಯ ವಕೀಲರಾದ ದಯಾನಂದ ನಾಯಕ್, ಮಣಿರಾಜ್ ಶೆಟ್ಟಿ, ರವೀಂದ್ರ ಮೊಯ್ಲಿ, ಪದ್ಮಪ್ರಸಾದ್ ಜೈನ್, ಜಿ.ಎಂ.ಭಟ್, ಸದಾನಂದ ಸಾಲಿಯಾನ್, ಶೇಖರ ಮಡಿವಾಳ, ರವೀಂದ್ರ ಮೊಯ್ಲಿ , ವಿಫುಲ್ ತೇಜ್, ರಾಘವೇಶ್ವರ ಕುಕ್ಕುಜೆ ಪ್ರತಿಭಟನೆಯಲ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.