ADVERTISEMENT

ಹಾಲು ಹಾಕಲು ಹೊರಟಿದ್ದ ಮಹಿಳೆ ಮೇಲೆ ಚಿರತೆ ದಾಳಿ

ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ: ಚಿರತೆ ಸೆರೆಗೆ ಗ್ರಾಮದವರ ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2019, 19:00 IST
Last Updated 4 ಮಾರ್ಚ್ 2019, 19:00 IST
ಚಿರತೆದಾಳಿಯಿಂದ ಗಾಯಗೊಂಡು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರೇಮಾ ಬಾಂದಿ.
ಚಿರತೆದಾಳಿಯಿಂದ ಗಾಯಗೊಂಡು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರೇಮಾ ಬಾಂದಿ.   

ಉಡುಪಿ: ಕುಂದಾಪುರ ತಾಲ್ಲೂಕಿನ ಜಪ್ತಿ ಸಮೀಪದ ಸುಬ್ಬಣ್ಣನ ಕೆರೆ ಬಳಿ ಸೋಮವಾರ ಬೆಳಿಗ್ಗೆ ಡೇರಿಗೆ ಹಾಲು ತೆಗೆದುಕೊಂಡು ಹೋಗುವಾಗ ಪ್ರೇಮಾ ಬಾಂದಿ ಎಂಬುವರ ಮೇಲೆ ಚಿರತೆ ದಾಳಿ ನಡೆಸಿದೆ. ತೀವ್ರವಾಗಿ ಗಾಯಗೊಂಡ ಮಹಿಳೆಗೆ ಅಜ್ಜರಕಾಡು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಚಿರತೆ ದಾಳಿಯಿಂದ ಕುತ್ತಿಗೆ ಹಾಗೂ ಮುಖದ ಭಾಗಕ್ಕೆ ಗಂಭೀರ ಗಾಯವಾಗಿದ್ದು, ಕುತ್ತಿಗೆ ಭಾಗದಲ್ಲಿ ಹೊಲಿಗೆ ಹಾಕಲಾಗಿದೆ. ಪ್ರಾಣಾಪಾಯವಿಲ್ಲ, ಗುಣಮುಖರಾದ ತಕ್ಷಣ ಆಸ್ಪತ್ರೆಯಿಂದ ಬಿಡುಗಡೆ ಮಾಡುವುದಾಗಿ ವೈದ್ಯರು ತಿಳಿಸಿದರು.

ಚಿರತೆ ದಾಳಿ ಕುರಿತು ಮಾತನಾಡಿದ ಪ್ರೇಮಾ ‘ಬೆಳಿಗ್ಗೆ ಕಾಡುದಾರಿಯಲ್ಲಿ ಹಾಲು ತೆಗೆದುಕೊಂಡು ಹೋಗುವಾಗ ಪೊದೆಯಲ್ಲಿ ಅವಿತಿದ್ದ ಚಿರತೆ ಏಕಾಏಕಿ ಮೈಮೇಲೆ ಎರಗಿತು. ಕುತ್ತಿಗೆ ಹಾಗೂ ಕಿವಿಯ ಮಾಂಸಖಂಡದ ಮೇಲೆ ಉಗುರಿನಿಂದ ದಾಳಿ ನಡಸಿತು. ಬಳಿಕ ಚಿರತೆ ಕಾಡಿನೊಳಗೆ ಪರಾರಿಯಾಯಿತು ಎಂದು ಘಟನೆಯನ್ನು ವಿವರಿಸಿದರು.

ADVERTISEMENT

ಚಿರತೆ ಹಾರಿದ ರಭಸಕ್ಕೆ ಕೆಳಗೆ ಬಿದ್ದು ಕೈ, ಕಾಲು ಮಂಡಿ ತರಚಿತು. ಕೆಲಹೊತ್ತು ಸ್ಥಳದಲ್ಲೇ ಸುಧಾರಿಸಿಕೊಂಡು ವಾಪಸ್‌ ಮನೆಗೆ ಹೋಗುವಾಗ ಪರಿಚಿತರೊಬ್ಬರು, ಚಿರತೆ ದಾಳಿಯ ಸುದ್ದಿ ತಿಳಿದು ಕುಂದಾಪುರ ಆಸ್ಪತ್ರೆಗೆ ಕರೆದೊಯ್ದರು. ಬಳಿಕ ಉಡುಪಿ ಜಿಲ್ಲಾ ಆಸ್ಪತ್ರೆಗೆ ಕರೆತರಲಾಯಿತು ಎಂದು ಪ್ರೇಮಾ ಮಾಹಿತಿ ನೀಡಿದರು.

ಪ್ರತಿದಿನ ತಾಯಿಯೇ ಜಪ್ತಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಹಾಲು ಹಾಕಲು ಹೋಗುತ್ತಿದ್ದರು. ಸೋಮವಾರ ನಾನು ಹೋಗಿದ್ದೆ. ಈ ಸಂದರ್ಭ ಚಿರತೆ ನಡೆಸಿದೆ ಎನ್ನುತ್ತಾರೆ ಪ್ರೇಮಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.