ADVERTISEMENT

ಧರ್ಮಾಧ್ಯಕ್ಷರಾಗಿ ಲೆಸ್ಲಿ ಕ್ಲಿಫರ್ಡ್ ಡಿಸೋಜಾ ನೇಮಕ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2026, 7:42 IST
Last Updated 1 ಫೆಬ್ರುವರಿ 2026, 7:42 IST
ಲೆಸ್ಲಿ ಕ್ಲಿಫರ್ಡ್ ಡಿಸೋಜಾ
ಲೆಸ್ಲಿ ಕ್ಲಿಫರ್ಡ್ ಡಿಸೋಜಾ   

ಉಡುಪಿ: ಪೋಪ್ ಲಿಯೋ XIV ಅವರು ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಅವರನ್ನು ಉಡುಪಿ ಧರ್ಮಪ್ರಾಂತ್ಯದ ನೂತನ ಧರ್ಮಾಧ್ಯಕ್ಷರಾಗಿ (ಬಿಷಪ್‌) ನೇಮಕ ಮಾಡಿದ್ದಾರೆ. ಪ್ರಸ್ತುತ ಅವರು ಶಿರ್ವದ ಆರೋಗ್ಯ ಮಾತಾ ದೇವಾಲಯದ ಧರ್ಮಗುರುಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

1962ರ ಆಗಸ್ಟ್ 19ರಂದು ಉಡುಪಿ ಜಿಲ್ಲೆಯ ಉಚ್ಚಿಲ (ಎರ್ಮಾಳ್) ಗ್ರಾಮದಲ್ಲಿ ಲಾರೆನ್ಸ್ ಡಿಸೋಜಾ ಮತ್ತು ಸಿಸಿಲಿಯಾ ದಂಪತಿ ಪುತ್ರರಾಗಿ ಜನಿಸಿದ ಲೆಸ್ಲಿ ಕ್ಲಿಫರ್ಡ್ ಅವರು ಪ್ರಾಥಮಿಕ ಶಿಕ್ಷಣವನ್ನು ಉಚ್ಚಿಲದ ಸರಸ್ವತಿ ಮಂದಿರ ಹೈಯರ್ ಪ್ರೈಮರಿ ಶಾಲೆಯಲ್ಲಿ ಪಡೆದಿದ್ದರು. ಬಳಿಕ ಎರ್ಮಾಳಿನ ಸರ್ಕಾರಿ ಮೀನುಗಾರಿಕಾ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ ಪೂರ್ಣಗೊಳಿಸಿದ್ದರು. ಅದಮಾರಿನ ಪೂರ್ಣ ಪ್ರಜ್ಞಾ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಪಡೆಿದ್ದರು.

ಲೆಸ್ಲಿ ಅವರು ಮಂಗಳೂರು ಸಂತ ಜೋಸೆಫ್ ಅಂತರ-ಧರ್ಮಪ್ರಾಂತ್ಯ ಸೆಮಿನರಿಯಲ್ಲಿ ತತ್ವಶಾಸ್ತ್ರ ಅಧ್ಯಯನ ಮಾಡುವಾಗ ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ. ಪದವಿ ಪಡೆದರು. ನಂತರ ರೋಮ್‌ನ ಪಾಂಟಿಫಿಕಲ್ ಉರ್ಬಾನಿಯಾನಾ ವಿಶ್ವವಿದ್ಯಾಲಯದಿಂದ ಧರ್ಮಶಾಸ್ತ್ರದಲ್ಲಿ ಬ್ಯಾಚುಲರ್ ಪದವಿ ಪಡೆದಿದ್ದರು. ಮೈಸೂರು ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ., ಬೆಂಗಳೂರು ಮನೋವಿಜ್ಞಾನ ಮತ್ತು ತರಬೇತಿ ಸಂಸ್ಥೆಯಿಂದ ಡೆಪ್ತ್ ಸೈಕಾಲಜಿ ಮತ್ತು ಫಾರ್ಮೇಷನ್ ಡಿಪ್ಲೊಮಾವನ್ನೂ ಪಡೆದಿದ್ದಾರೆ. ಬಳಿಕ ಬೆಲ್ಜಿಯಂನ ಲುವೇನ್ನ ಕ್ಯಾಥೊಲಿಕ್ ವಿಶ್ವವಿದ್ಯಾಲಯದಿಂದ ಧರ್ಮಶಾಸ್ತ್ರದಲ್ಲಿ ಲಿಸೆನ್ಸಿಯೇಟ್ ಹಾಗೂ ನೈತಿಕ ಧರ್ಮಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ.

ADVERTISEMENT

ಲೆಸ್ಲಿ ಅವರು 1990ರ ಮೇ 10ರಂದು ಮಂಗಳೂರು ಧರ್ಮಪ್ರಾಂತ್ಯದಲ್ಲಿ ಯಾಜಕರಾಗಿ, ಅನಂತರ ಕುಂದಾಪುರದ ಹೋಲಿ ರೋಸರಿ ದೇವಾಲಯದಲ್ಲಿ ಸಹಾಯಕ ಧರ್ಮಗುರುವಾಗಿ ಹಾಗೂ ಮಂಗಳೂರಿನ ಕುಲಶೇಖರದ ಹೋಲಿ ಕ್ರಾಸ್ ದೇವಾಲಯದಲ್ಲೂ ಕಾರ್ಯನಿರ್ವಹಿಸಿದ್ದರು ಎಂದು ಧರ್ಮಪ್ರಾಂತ್ಯದ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.