ADVERTISEMENT

ಪ್ರತಿಭಟನೆ ಬೇಡವಾದರೆ ಜಿಲ್ಲಾಧಿಕಾರಿ ಮರಳುಗಾರಿಕೆಗೆ ಅನುಮತಿ ನೀಡಲಿ: ರಘುಪತಿ ಭಟ್‌

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2018, 13:52 IST
Last Updated 19 ಅಕ್ಟೋಬರ್ 2018, 13:52 IST
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಕೆ.ರಘುಪತು ಭಟ್‌ ಮಾತನಾಡಿದರು.ಪ್ರಜಾವಾಣಿ ಚಿತ್ರ
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಕೆ.ರಘುಪತು ಭಟ್‌ ಮಾತನಾಡಿದರು.ಪ್ರಜಾವಾಣಿ ಚಿತ್ರ   

ಉಡುಪಿ: ಮುಖ್ಯ ಮಂತ್ರಿ ಕುಮಾರ ಸ್ವಾಮಿ ಅ.15ರೊಳಗೆ ಮರುಳು ತೆಗೆಯಲು ಅನುಮತಿ ನೀಡುವಂತೆ ಆದೇಶ ನೀಡಿದರೂ, ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ಮರಳುಗಾರಿಕೆಗೆ ಅನುಮತಿ ನೀಡದಿರುವುದನ್ನು ವಿರೋಧಿಸಿ ಅ. 25ರಂದು ಜಿಲ್ಲಾಧಿಕಾರಿ ಕಚೇರಿಯ ಮುಂದೆ ಅನಿರ್ದಿಷ್ಟಾವಧಿ ಹಗಲು ರಾತ್ರಿ ಧರಣಿ ನಡೆಸಲಾಗುವುದು ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ತಿಳಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿಜಿಲ್ಲೆಯಲ್ಲಿ ಮರಳಿನ ಸಮಸ್ಯೆ ಗರಿಷ್ಟ ಮಟ್ಟವನ್ನು ತಲುಪಿದ್ದು ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಿದೆ.ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿ ಇರುವುದರಿಂದ ಧ್ವನಿವರ್ಧಕ ಬಳಸದೇ, ಮೆರವಣಿಗೆ, ಜಾಥಾ ನಡೆಸದೇ ಮೌನವಾಗಿ ಧರಣಿ ನಡೆಸಲಾಗುವುದು ಎಂದು ಹೇಳಿದರು.

ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ, ಆದ್ದರಿಂದ ಧರಣಿ, ಪ್ರತಿಭಟನೆ ಬೇಡ ಎಂದಾದರೇ ಜಿಲ್ಲಾಧಿಕಾರಿ ಅವರು ತಕ್ಷಣವೇ ಮರಳು ತೆಗೆಯುವುದಕ್ಕೆ ಅನುಮತಿ ನೀಡಲಿ ಎಂದು ಸವಾಲು ಹಾಕಿದರು.

ADVERTISEMENT

‘ನಾನು ವಿರೋಧ ಪಕ್ಷದಲ್ಲಿದ್ದರೂ ಮುಖ್ಯ ಮಂತ್ರಿ ಅವರನ್ನು ದೂರುವುದಿಲ್ಲ. ಅವರು ಮರುಳುಗಾರಿಕೆ ಆರಂಭಿಸಲು ಆದೇಶ ನೀಡಿದ್ದಾರೆ. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವೆ ಅವರೂ ಸಕರಾತ್ಮಕವಾಗಿ ಆದೇಶಿಸಿದ್ದಾರೆ. ಆದರೂ ಜಿಲ್ಲಾಧಿಕಾರಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಮರಳು ಲಭ್ಯತೆಯ ಪ್ರಮಾಣ ಗುರುತಿಸುವ ಬೆಥಮೆಟಿಕ್ ಸರ್ವೆ ಮಾಡಿಲ್ಲ, ವಿನಾಃ ಕಾರಣ ಹಸಿರು ನ್ಯಾಯಪೀಠ, ಕಾನೂನಿನ ನೆಪವೊಡ್ಡುತ್ತಿದ್ದಾರೆ’ ಎಂದು ಆರೋಪಿಸಿದರು.

ಸೀತಾ ನದಿಯಲ್ಲಿ 7 ಕಡೆ, ಸ್ವರ್ಣಾ ನದಿಯಲ್ಲಿ 2 ಕಡೆಗಳಲ್ಲಿ ಮರಳಿ ದಿಬ್ಬಗಳನ್ನು ಗುರುತಿಸಲಾಗಿದೆ. ಆದರೆ ಪಾಂಗಾಳ, ಉದ್ಯಾವರ, ಉಪ್ಪೂರು ಹೊಳೆಗಳಲ್ಲಿಯೂ ಸಾಕಷ್ಟು ಮರಳಿ ದಿಬ್ಬಗಳು ಮೇಲಕ್ಕೆ ಕಾಣುತ್ತಿವೆ. ಅಲ್ಲಿ ಯಾಕೆ ಮರಳು ತೆಗೆಯುವುದಕ್ಕೆ ಜಿಲ್ಲಾಧಿಕಾರಿ ಗುರುತಿಸುತ್ತಿಲ್ಲ ಎಂದವರು ಪ್ರಶ್ನಿಸಿದರು.

ಕೇವಲ 9 ಕಡೆಗಳಲ್ಲಿ 20 ರಿಂದ 30 ಮಂದಿ ಗುತ್ತಿಗೆದಾರರಿಗೆ ಮಾತ್ರ ಮರಳು ತೆಗೆಯುವುದಕ್ಕೆ ಅವಕಾಶ ಆಗಬಹುದು. ಆದರೆ ಜಿಲ್ಲೆಯಲ್ಲಿ 171 ಗುತ್ತಿಗೆದಾರರಿದ್ದಾರೆ. ಕಲವೇ ಜನರಿಗೆ ಮಾತ್ರ ಗುತ್ತಿಗೆ ನೀಡಿದರೇ ಉಳಿದ ಗುತ್ತಿಗೆದಾರರು ಅದಕ್ಕೆ ತಡೆಯಾಜ್ಞೆ ತರುವ ಸಾಧ್ಯತೆ ಇದೆ. ಆಗ ಸಮಸ್ಯೆ ಇನ್ನಷ್ಟು ಗಂಭೀರವಾಗುತ್ತದೆ. ಆದ್ದರಿಂದ ಗರಿಷ್ಟ ಪ್ರಮಾಣದಲ್ಲಿ ದಿಬ್ಬಗಳನ್ನು ಗುರುತಿಸಿ ಎಲ್ಲಾ ಗುತ್ತಿಗೆದಾರರಿಗೆ ಅನುಮತಿ ನೀಡಬೇಕು. ಪರಿಶಿಷ್ಟ ಜಾತಿ ಹಾಗೂ ಪಂಗಡವರು ತಮಗೂ ಗುತ್ತಿಗೆ ನೀಡಬೇಕು ಎಂದು ಕೇಳುತ್ತಿದ್ದಾರೆ. ಅವರಿಗೂ ಹೆಚ್ಚುವರಿ ದಿಬ್ಬಗಳನ್ನು ಗುರುತಿಸಿ ಅನುಮತಿ ನೀಡಲಿ ಎಂದು ಸಲಹೆ ಮಾಡಿದರು.

ಮರಳಿಗಾಗಿ ಹೋರಾಟ ಸಮಿತಿಯ ಎಂ.ಜಿ.ನಾಗೇಂದ್ರ, ಕರ್ನಾಟಕ ರಕ್ಷಣಾ ವೇದಿಕೆಯ ಅನ್ಸಾರ್ ಅಹಮ್ಮದ್, ಇಂಜಿನಿಯರ್ಸ್ ಎಸೋಸಿಯೇಶನ್ ನ ಗೋಪಾಲ್ ಭಟ್ ಉಡುಪಿ, ಪ್ರದೀಪ್ ಶೆಟ್ಟಿ ಬ್ರಹ್ಮಾವರ, ಗುರುರಾಜ ರಾವ್, ಬಿಲ್ಡರ್ಸ್ ಎಸೋಸಿಯೇಶನ್ ಸುದೇಶ್ ಶೆಟ್ಟಿ ಮುಂತಾದವರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.