ಉಡುಪಿ: ‘ಸಂಸ್ಕೃತದ ಶ್ರೇಷ್ಠ ಕೃತಿಗಳು ಕನ್ನಡಕ್ಕೆ ಹಾಗೂ ಕನ್ನಡದ ಕೃತಿಗಳು ಸಂಸ್ಕೃತ ಭಾಷೆಗೆ ಅನುವಾದವಾಗಬೇಕು’ ಎಂದು ಲೇಖಕ ಎಚ್.ವಿ. ನಾಗರಾಜ್ ಹೇಳಿದರು.
ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಆಶ್ರಯದಲ್ಲಿ ನಗರದ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಶನಿವಾರ ಹಮ್ಮಿಕೊಂಡಿದ್ದ 2025ನೇ ಸಾಲಿನ ಸೇಡಿಯಾಪು ಪ್ರಶಸ್ತಿ ಹಾಗೂ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ನೂರು ವರ್ಷಗಳ ಹಿಂದೆಯೇ ಸಂಸ್ಕೃತದ ಕೃತಿಗಳು ಜರ್ಮನ್ ಭಾಷೆಗೆ ಭಾಷಾಂತರಗೊಂಡಿದ್ದವು. ಛಂದಶಾಸ್ತ್ರ ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಪಟ್ಟ ಸಂಸ್ಕೃತದ ಮಹತ್ವದ ಕೃತಿಗಳು ಇನ್ನೂ ಕನ್ನಡಕ್ಕೆ ಬಂದಿಲ್ಲ ಎಂದರು.
ಕನ್ನಡ ಮತ್ತು ಸಂಸ್ಕೃತದ ಮಹತ್ವದ ಕೃತಿಗಳು ಇಂಗ್ಲಿಷ್ ಭಾಷೆಗೂ ಅನುವಾದವಾಗುವ ಮೂಲಕ ನಮ್ಮ ಶ್ರೇಷ್ಠ ಕೃತಿಗಳ ಪರಿಚಯ ಜಗತ್ತಿಗಾಗಬೇಕು ಎಂದು ಪ್ರತಿಪಾದಿಸಿದ ಅವರು, ಸೇಡಿಯಾಪು ಕೃಷ್ಣಭಟ್ಟ ಅವರು ಭಾರತೀಯ ಛಂದಶಾಸ್ತ್ರಕ್ಕೆ ನೀಡಿದ ಕೊಡುಗೆ ಅಪಾರ ಎಂದರು.
ಲೇಖಕಿ ಪ್ರಜ್ಞಾ ಮತ್ತಿಹಳ್ಳಿ ಮಾತನಾಡಿ, ಲೇಖಕರು ಕೃತಿ ರಚನೆ ವೇಳೆ ಪಾತ್ರದೊಳಗೆ ಇಳಿಯುವ ಮೂಲಕ ಏಕಜನ್ಮದಲ್ಲಿ ಬಹುಜನ್ಮದ ಸುಖವನ್ನು ಅನುಭವಿಸುತ್ತಾರೆ ಎಂದು ಹೇಳಿದರು.
ಅನ್ನ ಸಂಪಾದನೆಯಷ್ಟೇ ಬದುಕಲ್ಲ. ಅಭಿರುಚಿ, ಹವ್ಯಾಸಗಳು ಇರಬೇಕು. ಇಲ್ಲದಿದ್ದರೆ ನಿಕೃಷ್ಟ ಬದುಕು ನಮ್ಮದಾಗುತ್ತದೆ. ಕಡೆಂಗೋಡ್ಲು ಶಂಕರ ಭಟ್ಟರು ತಮ್ಮ ಜೀವನದ ಕಡೇ ಕ್ಷಣದವರೆಗೆ ಬರೆದು ಬದುಕಿದವರು. ಅವರ ಬದುಕು ನಮಗೆಲ್ಲರಿಗೂ ಮಾರ್ಗದರ್ಶಕ ಎಂದರು.
ಸೇಡಿಯಾಪು ಮತ್ತು ಕಡೆಗೋಡ್ಲು ಅವರು ಶಾಸ್ತ್ರ ಮತ್ತು ಕಾವ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದವರು. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರಪಾದೆಕಲ್ಲು ವಿಷ್ಣು ಭಟ್, ವಿದ್ವಾಂಸ
ಎಂಜಿಎಂ ಸಂಧ್ಯಾ ಕಾಲೇಜು ಪ್ರಾಂಶುಪಾಲ ದೇವಿದಾಸ್ ಎಸ್. ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು. ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಆಡಳಿತಾಧಿಕಾರಿ ಶ್ರೀಧರ್ ಆರ್. ಪೈ, ಸೇಡಿಯಾಪು ಪ್ರಶಸ್ತಿ ಸಮಿತಿಯ ಎಸ್.ಜೆ.ಭಟ್, ಪ್ರಾಧ್ಯಾಪಕ ಎಚ್. ಮಹೇಶ್ ಭಟ್ ಭಾಗವಹಿಸಿದ್ದರು.
ಪ್ರಜ್ಞಾ ಮತ್ತಿಹಳ್ಳಿ ಅವರ ‘ಬೆಳದಿಂಗಳ ಸೋನೆಮಳೆ’ ಕೃತಿಯನ್ನು ಎಂಜಿಎಂ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಪುತ್ತಿ ವಸಂತ ಕುಮಾರ್ ಪರಿಚಯಿಸಿದರು. ಎಚ್.ವಿ. ನಾಗರಾಜ್ ಅವರಿಗೆ ಸೇಡಿಯಾಪು ಹಾಗೂ ಪ್ರಜ್ಞಾ ಮತ್ತಿಹಳ್ಳಿ ಅವರಿಗೆ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಬಿ. ಜಗದೀಶ್ ಶೆಟ್ಟಿ ಸ್ವಾಗತಿಸಿದರು. ಅರುಣ್ ಕುಮಾರ್ ಎಸ್.ಆರ್. ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.