ADVERTISEMENT

ಉಡುಪಿ| ಅಯೋಧ್ಯೆ ಕುರಿತ ಸುಪ್ರೀಂ ಕೋರ್ಟ್‌ ತೀರ್ಪು ಗೌರವಿಸೋಣ

ಸಮಾಜಕ್ಕೆ ಧರ್ಮಗುರುಗಳು, ಸ್ವಾಮೀಜಿಗಳಿಂದ ಸಂದೇಶ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2019, 12:34 IST
Last Updated 9 ನವೆಂಬರ್ 2019, 12:34 IST
ಅಯೋಧ್ಯೆ
ಅಯೋಧ್ಯೆ   

ಉಡುಪಿ: ಸುಪ್ರೀಂಕೋರ್ಟ್‌ನಿಂದ ಹೊರಬಿದ್ದ ಅಯೋಧ್ಯೆ ತೀರ್ಪಿಗೆ ಗಣ್ಯರು, ರಾಜಕೀಯ ವ್ಯಕ್ತಿಗಳು, ಮಠಾಧೀಶರು, ಧಾರ್ಮಿಕ ಮುಖಂಡರು ಪ್ರತಿಕ್ರಿಯೆ ನೀಡಿದ್ದಾರೆ. ತೀರ್ಪಿಗೆ ಎಲ್ಲರೂ ಸಹಮತ ವ್ಯಕ್ತಪಡಿಸಿದ್ದು, ಶಾಂತಿ ಕಾಪಾಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಅಯೋಧ್ಯೆ ವಿಚಾರವಾಗಿ ಶತಮಾನದ ಸುಧೀರ್ಘ ಕಾನೂನು ಹೋರಾಟಕ್ಕೆ ಸುಪ್ರೀಂಕೋರ್ಟ್‌ ಅಂತಿಮ ತೆರೆ ಎಳೆದಿದೆ. ಸಂಭ್ರಮದ ವಿಚಾರ ಎಂದರೆ ಎಲ್ಲ ರಾಜಕೀಯ ಪಕ್ಷಗಳು ತೀರ್ಪನ್ನು ಮುಕ್ತವಾಗಿ ಸ್ವಾಗತಿಸಿವೆ. ಭಾರತದೆಲ್ಲೆಡೆ ತೀರ್ಪಿನ ಸ್ವೀಕೃತಿ ಭಾವನೆ ಕಾಣುತ್ತಿದೆ. ತೀರ್ಪು ಗೆಲುವು ಮತ್ತು ಸೋಲು ಎಂಬುದಕ್ಕಿಂತ ನ್ಯಾಯಮಂಥನದಿಂದ ಬಂದ ಸಾತ್ವಿಕ ಸಂವಿಧಾನದ ಪರಮೋಚ್ಛ ನಿರ್ಣಯವಾಗಿದೆ. ತೀರ್ಪನ್ನು ಎಲ್ಲರೂ ಗೌರವಿಸಬೇಕು.

–ಕೋಟ ಶ್ರೀನಿವಾಸ ಪೂಜಾರಿ, ಮುಜರಾಯಿ ಸಚಿವ

ADVERTISEMENT

***

‘ಭಕ್ತರ ಭಕ್ತಿಯ ಫಲ’

ಜನರು ನ್ಯಾಯಾಲಯದ ಮೇಲಿಟ್ಟ ನಿರೀಕ್ಷೆ, ಭರವಸೆ ಈಡೇರಿದೆ. ರಾಮಮಂದಿರ ನಿರ್ಮಾಣಕ್ಕೆ ಉತ್ತಮ ವಾತಾವರಣ ಮೂಡಿದೆ. ಉಡುಪಿಯಲ್ಲಿ ಕಳೆದೆರಡು ವರ್ಷಗಳಿಂದ ನಡೆಯುತ್ತಿದ್ದ ಅಖಂಡ ಭಜನೆ, ಭಕ್ತರ ಭಕ್ತಿಯು ನ್ಯಾಯಾಲಯದ ನ್ಯಾಯ ತೀರ್ಮಾನಕ್ಕೆ ವರದಾನವಾಗಿದೆ. ತೀರ್ಪಿನ ಹಿನ್ನೆಲೆಯಲ್ಲಿ ಶಾಂತಿ, ಸೌಹಾರ್ದ ಕಾಪಾಡಲು ಕೈಗೊಂಡ ಕ್ರಮ ಶ್ಲಾಘನೀಯ. ರಾಮ ರಹೀಂರ ಪರಸ್ಪರ ಸಹಕಾರದಿಂದ ದೇಶಕ್ಕೆ ಒಳಿತಾಗಲಿ. ಈ ನಿಟ್ಟಿನಲ್ಲಿ ಶ್ರೀಕೃಷ್ಣಮುಖ್ಯಪ್ರಾಣರಿಗೆ ಪ್ರಾರ್ಥನೆ ಸಲ್ಲಿಸಲಾಗುವುದು.

–ವಿದ್ಯಾಧೀಶ ಸ್ವಾಮೀಜಿ, ಪರ್ಯಾಯ ಪಲಿಮಾರು ಮಠ

***

‘ಶಾಂತಿಗೆ ಭಂಗ ಬೇಡ’

ಸ್ಥಳೀಯ ಸಮಸ್ಯೆಯಾಗಿದ್ದಅಯೋಧ್ಯೆ ವಿವಾದದಲ್ಲಿರಾಜಕೀಯ ಪ್ರವೇಶಿಸಿದ ಬಳಿಕ ವಿವಾದ ರಾಷ್ಟ್ರೀಯ ವಿಷಯವಾಗಿದೆ. ಇಂತಹ ಮಹತ್ವದ ವಿಚಾರಗಳ ಬಗ್ಗೆ ರಾಷ್ಟ್ರ ಮಟ್ಟದ ಸಂಘಟನೆಗಳು, ಒಕ್ಕೂಟಗಳು ಪ್ರತಿಕ್ರಿಯೆ ನೀಡಲಿವೆ. ಈಗಾಗಲೇ ಅಯೋಧ್ಯೆ ತೀರ್ಪಿನ ಕುರಿತು ನಿಲುವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಗಿದೆ. ಜಿಲ್ಲೆಯ ಮಟ್ಟದಲ್ಲಿ ಮುಸ್ಲಿಂ ಸಂಘಟನೆಗಳು ಪ್ರತ್ಯೇಕ ಅಭಿಪ್ರಾಯ ನೀಡುವ ಅಗತ್ಯವಿಲ್ಲ. ಸುಪ್ರೀಂ ತೀರ್ಪಿಗೆ ಭಾವನಾತ್ಮಕವಾಗಿ ಪ್ರತಿಕ್ರಿಯಿಸದೆ ಗೌರವಿಸಿ ಮುಂದಿನ ಕಾನೂನು ಹೆಜ್ಜೆ ಇಡುತ್ತೇವೆ. ಮುಖ್ಯವಾಗಿ ಮಂದಿರ ಮಸೀದಿಗಳಿಗಿಂತಲೂ ಪವಿತ್ರ ಹಾಗೂ ಅಮೂಲ್ಯವಾದದ್ದು ಜೀವ. ಈಗಾಗಲೇ ಈ ವಿವಾದದ ಹೆಸರಿನಲ್ಲಿ ಹಲವು ಜೀವ ಹಾನಿಯಾಗಿದೆ. ಇನ್ನಾದರೂ ಕಡಿವಾಣ ಬೀಳಬೇಕು. ಸಮಾಜದ ಸ್ವಾಸ್ಥ್ಯಕ್ಕೆ ಭಂಗತರುವ ಕೆಲಸಕ್ಕೆ ಕೈ ಹಾಕಬಾರದು.

-ಮುಹಮ್ಮದ್ ಯಾಸೀನ್ ಮಲ್ಪೆ,ಉಡುಪಿ ಮುಸ್ಲಿಮ್ ಒಕ್ಕೂಟಅಧ್ಯಕ್ಷ

***

ಸತ್ಯಕ್ಕೆ ಸಂದ ಜಯ: ಪುತ್ತಿಗೆ ಶ್ರೀ

ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ ತೀರ್ಪಿನಿಂದ ಸಂತೋಷವಾಗಿದೆ. ಇದು ಸತ್ಯಕ್ಕೆ ಸಂದ ಜಯ. ಉತ್ತಮ ತೀರ್ಪು ಬಂದಿದೆ. ಈ ತೀರ್ಪು ಮುಂದೆ ದೇಶದಲ್ಲಿ ಶಾಂತಿ, ಸೌಹಾರ್ದತೆ ನೆಲೆಸಲು ಕಾರಣವಾಗಲಿ.

–ಸುಗುಣೇಂದ್ರತೀರ್ಥ ಸ್ವಾಮೀಜಿ, ಪುತ್ತಿಗೆ ಮಠದ

***

ತೀರ್ಪು ಸ್ವಾಗತಾರ್ಹ: ಕಾಂಗ್ರೆಸ್‌

ದಶಕಗಳ ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ವಿವಾದವು ಕೊನೆಯಾಗಿದೆ. ಸಂವಿಧಾನದ ಮೇಲೆ ಭರವಸೆ ಇರುವ ಕಾಂಗ್ರೆಸ್ ಪಕ್ಷ ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸುತ್ತದೆ. ಐತಿಹಾಸಿಕ ತೀರ್ಪು ಹಿಂದೂ ಮುಸ್ಲಿಮರ ನಡುವೆ ಭಾಂಧವ್ಯ ಬೆಸೆಯಲು ಸಹಕಾರಿಯಾಗಲಿದೆ. ಶಾಂತಿ ಸೌಹಾರ್ದತೆ ಕಾಪಾಡಲು ಕೈಜೋಡಿಸೋಣ.

– ಅಶೋಕ್ ಕುಮಾರ್ ಕೊಡವೂರು,ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.