ADVERTISEMENT

ಹೆಬ್ರಿಯಲ್ಲಿ ಲೋಕಾಯುಕ್ತ ಜನಸಂಪರ್ಕ ಸಭೆ: ಅಹವಾಲು ಸ್ವೀಕಾರ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2025, 4:54 IST
Last Updated 21 ಆಗಸ್ಟ್ 2025, 4:54 IST
ಹೆಬ್ರಿಯಲ್ಲಿ ನಡೆದ ಲೋಕಾಯುಕ್ತ ಜನಸಂಪರ್ಕ ಸಭೆಯಲ್ಲಿ  ಸಾಮಾಜಿಕ ಕಾರ್ಯಕರ್ತ ನಿತೀಶ್ ಎಸ್. ಪಿ. ಅವರು ಅಹವಾಲು ನೀಡಿದರು
ಹೆಬ್ರಿಯಲ್ಲಿ ನಡೆದ ಲೋಕಾಯುಕ್ತ ಜನಸಂಪರ್ಕ ಸಭೆಯಲ್ಲಿ  ಸಾಮಾಜಿಕ ಕಾರ್ಯಕರ್ತ ನಿತೀಶ್ ಎಸ್. ಪಿ. ಅವರು ಅಹವಾಲು ನೀಡಿದರು   

ಹೆಬ್ರಿ: ಚಾರದಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ  ಪ್ರತಿ ವರ್ಷ  ರಸ್ತೆ ಹಾಳಾಗುತ್ತಿದೆ.  ಪ್ರತಿ ವರ್ಷ ಚರಂಡಿ ದುರಸ್ತಿ ಕಾರ್ಯ ನಡೆದಾಗ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುತ್ತಿದೆ.ಒಮ್ಮೆ ಸರಿಯಾಗಿ ದುರಸ್ತಿ ಮಾಡಿ ಸೂಕ್ತ ಕ್ರಮ ಕೈಗೊಳ್ಳಲು  ಪಿಡಬ್ಲ್ಯುಡಿ ಇಲಾಖೆ ವಿಫಲವಾಗಿದೆ. ಸಮರ್ಪಕ ಚರಂಡಿ ವ್ಯವಸ್ಥೆ ಮಾಡಿ ಹತ್ತಾರು ಕಡೆ  ರಸ್ತೆ ಹಾಳಾಗುವುದನ್ನು ತಪ್ಪಿಸಬೇಕೆಂದು ಸಾಮಾಜಿಕ ಕಾರ್ಯಕರ್ತ ನಿತೀಶ್ ಎಸ್.ಪಿ ಆಗ್ರಹಿಸಿದರು.

ಹೆಬ್ರಿ ತಾಲ್ಲೂಕು ಆಡಳಿತದಲ್ಲಿ ಬುಧವಾರ ನಡೆದ ಲೋಕಾಯುಕ್ತ ಜನ ಸಂಪರ್ಕಯಲ್ಲಿ  ಅವರು ಮನವಿ ನೀಡಿದರು.

ಲೋಕಾಯುಕ್ತ ಎಸ್‌.ಪಿ. ಕುಮಾರ್ ಮಾತನಾಡಿ, ಕಾನೂನು ಚೌಕಟ್ಟಿನಲ್ಲಿ, ಯಾರನ್ನು ಸತಾಯಿಸದೆ, ಶೀಘ್ರದಲ್ಲಿ  ಎಲ್ಲರ ಕೆಲಸವನ್ನು  ಮಾಡಿಕೊಡುವುದು ಆದ್ಯ ಕರ್ತವ್ಯವಾಗಿದೆ. ಸಾರ್ವಜನಿಕರಿಂದ ದೂರು ಬಂದಲ್ಲಿ  ನಾವು ಸಂಬಂಧಪಟ್ಟವರ ವಿರುದ್ಧ ಕ್ರಮ ಜರುಗಿಸುತ್ತೇವೆ. ಎಲ್ಲರಿಗೂ ಉತ್ತಮ ಸೇವೆ ನೀಡಿ ಎಂದರು.

ADVERTISEMENT

ಅಂಗನವಾಡಿಗಳಲ್ಲಿ, ಹಾಸ್ಟೆಲ್‌ಗಳಲ್ಲಿ ಬಳಸುವ ಆಹಾರ ಉತ್ಪಾದಕ ವಸ್ತುಗಳು  ಗುಣಮಟ್ಟದಾಗಿರಬೇಕು.  ಗುಣಮಟ್ಟದ ಕೊರತೆ ಇದ್ದಾಗ  ವಾಪಸ್ ಕಳುಹಿಸಬೇಕು. ಅವಧಿ ಮುಗಿದ ವಸ್ತುಗಳನ್ನು ಬಳಸಿದರೆ  ಸೂಕ್ತ ಕ್ರಮ ಜರುಗಿಸುತ್ತೇವೆ. ಏನು ನೀಡಿದರು  ಗುಣಮಟ್ಟದಾಗಿರಲಿ ಎಂದು ಎಸ್. ಪಿ ಕುಮಾರ್ ತಿಳಿಸಿದರು.

ಸಭೆಯಲ್ಲಿ ಡಿವೈಎಸ್ಪಿ  ಮಂಜುನಾಥ್ ಶಂಕ್ರಳ್ಳಿ, ಇನ್‌ಸ್ಪೆಕ್ಟರ್ ರಾಜೇಂದ್ರ ನಾಯ್ಕ್, ಹೆಬ್ರಿ ತಹಶೀಲ್ದಾ  ಎಸ್. ಎ. ಪ್ರಸಾದ್, ಹೆಬ್ರಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ವಿಜಯಾ, ಹೆಬ್ರಿ ಪಿಎಸ್ಐ ರವಿ ಬಿ.ಕೆ., ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

ಗೈರು ಹಾಜರಿಗೆ ನೋಟಿಸ್ : ಸಭೆಗೆ ಪಿಡಬ್ಲ್ಯುಡಿ ಇಲಾಖೆಯ ಎಂಜಿನಿಯರ್‌ಗಳು  ಗೈರು ಹಾಜರಾಗಿದ್ದರು. ಅದನ್ನು ಗಮನಿಸಿದ ಲೋಕಾಯುಕ್ತ ಅಧಿಕಾರಿಗಳು ಇವಾಗ  ಹೆಚ್ಚು ಸಮಸ್ಯೆ ಇರುತ್ತದೆ ಎಂದು ಗೊತ್ತಿದ್ದರೂ  ಇಲಾಖೆಯವರು ಗೈರು ಹಾಜರಾಗಿರುವುದು ಸರಿಯಲ್ಲ. ಅವರಿಗೆ ನೋಟಿಸ್ ನೀಡಿ ಎಂದರು.

‘ಬಿಲ್ ಹಣ ಮರುಪಾವತಿ ನಿಯಮ’

ಆಸ್ಪತ್ರೆಗಳಲ್ಲಿ ಯಾವುದೇ ರೀತಿಯ ಔಷಧಿಗಳು ದೊರೆಯದಿದ್ದಾಗ ಬಿಪಿಎಲ್ ಕಾರ್ಡ್ ಹೊಂದಿದ ರೋಗಿಯು  ಹೊರಗಿನಿಂದ ತಂದಾಗ ಅದನ್ನು ಮರುಪಾವತಿ ಮಾಡಬೇಕೆಂಬ ನಿಯಮವಿದೆ. ಯಾವುದೇ ಆಸ್ಪತ್ರೆ ಅದನ್ನು ಮಾಡುತ್ತಿಲ್ಲ. ಜನರಿಗೆ ಗೊತ್ತಿಲ್ಲದಾಗ ಅದನ್ನು ತಿಳಿಯಪಡಿಸುವುದು  ಸಾರ್ವಜನಿಕ ಆಸ್ಪತ್ರೆಯವರ ಕರ್ತವ್ಯ ಎಂದು ಆರೋಗ್ಯ ಇಲಾಖೆಯವರಿಗೆ ಎಸ್‌ಪಿ ತಿಳಿಸಿದರು. ಯಾರಾದರೂ ಲೋಕಾಯುಕ್ತದ ಹೆಸರಿನಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಕಿರುಕುಳ ನೀಡಿದರೆ ಅಂಥವರ ಬಗ್ಗೆ ಗಮನಕ್ಕೆ ತಂದರೆ ಸೂಕ್ತ ಕ್ರಮ ಜರುಗಿಸುತ್ತೇವೆ ಎಂದು  ಲೋಕಾಯುಕ್ತ ಡಿವೈಎಸ್ಪಿ ಮಂಜುನಾಥ ಶಂಕ್ರಳ್ಳಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.