
ಉಡುಪಿ: ‘ಮಧ್ವ ಸಿದ್ಧಾಂತವು ಅಂತರ್ಯಾಮಿ ತತ್ವವನ್ನು ಮೊತ್ತ ಮೊದಲಿಗೆ ಪರಿಚಯಿಸಿದೆ. ಅದರಂತೆ ಕೃಷ್ಣನು ನಮ್ಮಲ್ಲಿ ಅಂತರ್ಯಾಮಿಯಾಗಿರುತ್ತಾನೆ’ ಎಂದು ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.
ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪರ್ಯಾಯ ಮಂಗಳೋತ್ಸವ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಯಾವುದೇ ವ್ಯಕ್ತಿ ಮುಂದೆ ಬರಬೇಕಾದರೆ ಗಾಡ್ ಫಾದರ್ ಇರಬೇಕು. ಇಲ್ಲದಿದ್ದರೆ ಯಾರೂ ಮುಂದೆ ಬರಲು ಸಾಧ್ಯವಾಗದು. ನಮ್ಮ ಸಾಧನೆಗೆ ಅದಮಾರು ಮಠದ ವಿಶ್ವಪ್ರಿಯ ತೀರ್ಥ ಶ್ರೀಪಾದರು ಜೊತೆಗಿದ್ದು, ಪ್ರೋತ್ಸಾಹಿಸಿದ್ದಾರೆ. ಅವರೇ ನಮಗೆ ಗಾಡ್ ಫಾದರ್’ ಎಂದರು.
‘ವಿಶ್ವಪ್ರಿಯತೀರ್ಥರ ಸಹಕಾರದಿಂದ ನಮ್ಮ ಪರ್ಯಾಯ ವಿಶ್ವಪ್ರಿಯ ಪರ್ಯಾಯವಾಗಿದೆ ಎಂದು ಹೇಳಿದರು.
ಅದಮಾರು ಮಠದ ವಿಶ್ವಪ್ರಿಯ ತೀರ್ಥ ಶ್ರೀಪಾದರು ಮಾತನಾಡಿ, ‘ಯಾರೂ ಕದಿಯಲಾಗದ ಸಂಪತ್ತು ಎಂದರೆ ಜ್ಞಾನ ಸಂಪತ್ತು. ಅದನ್ನು ಸಂಪಾದಿಸಿದವರು ಕೊರಗುವ ಕಾಲ ಬಾರದು’ ಎಂದು ತಿಳಿಸಿದರು.
‘ಭಗವದ್ಗೀತೆಯನ್ನು ಪ್ರತಿಯೊಬ್ಬರೂ ಓದಬೇಕು ಆದರೆ ದುರ್ದೈವವೆಂದರೆ ನಮ್ಮ ರಾಜ್ಯದ ಶಾಲೆಗಳಲ್ಲಿ ಅದನ್ನು ಕಲಿಸುತ್ತಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಕೃಷ್ಣದೇವರಿಗೆ ಭಗವದ್ಗೀತೆಯ ಪುಸ್ತಕದಲ್ಲಿ ತುಲಾಭಾರ ಮಾಡಲಾಯಿತು. ಪರ್ಯಾಯ ಪುತ್ತಿಗೆ ಮಠದ ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.
ಮಾಹೆ ಸಹ ಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಯಶ್‌ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಪ್ರಸಾದ್ ರಾಜ್ ಕಾಂಚನ್, ಡಾ. ಕೃಷ್ಣ ಪ್ರಸಾದ್, ನರಸಿಂಹ ಆಚಾರ್, ಪುತ್ತಿಗೆ ಮಠದ ಅಂತರರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನಾಚಾರ್ಯ ಉಪಸ್ಥಿತರಿದ್ದರು. ಮಾಜಿ ಶಾಸಕ ರಘುಪತಿ ಭಟ್ ಸ್ವಾಗತಿಸಿದರು.
ಭಗವದ್ಗೀತೆಯ ಶ್ಲೋಕಗಳ ಪಾರಾಯಣ ಕೃಷ್ಣ ವೇಷ ಧರಿಸಿ ಚಿಣ್ಣರು ಭಾಗಿ
ಶ್ರೀಕೃಷ್ಣನು ಜೀವನದ ದಾರಿಯನ್ನು ತೋರಿಸಿದ್ದಾನೆ ಅದರಲ್ಲಿ ನಡೆಯುವುದು ನಮ್ಮ ಕರ್ತವ್ಯ. ಪುತ್ತಿಗೆ ಶ್ರೀಗಳು ವಿದೇಶಗಳಲ್ಲಿ ಧರ್ಮ ಪ್ರಚಾರ ಮಾಡುವ ಮಹತ್ಕಾರ್ಯ ಮಾಡಿದ್ದಾರೆ
-ಶ್ರೀಪಾದ್ ನಾಯಕ್ ಕೇಂದ್ರ ವಿದ್ಯುತ್ ಮತ್ತು ನವೀಕರಿಸಬಹುದಾದ ಇಂಧನ ಇಲಾಖೆಯ ರಾಜ್ಯ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.