ಉಡುಪಿ: ಕೃಷ್ಣಮಠದಲ್ಲಿ ಸೋಮವಾರ ಶ್ರದ್ಧಾ ಭಕ್ತಿಯಿಂದ ಮಧ್ವಜಯಂತಿಯನ್ನು ಆಚರಿಸಲಾಯಿತು. ಸಂಜೆ 4ಕ್ಕೆ ಪಲಿಮಾರು ಮಠದಲ್ಲಿದ್ದ ಋಷಿಕೇಷ ತೀರ್ಥರು ರಚಿಸಿರುವ 700 ವರ್ಷಗಳಷ್ಟು ಹಳೆಯದಾದ ಸರ್ವಮೂಲಗ್ರಂಥಗಳ ಹಸ್ತಪ್ರತಿಗಳಿಗೆ ಪೂಜೆ ಸಲ್ಲಿಸಿ ಬಳಿಕ, ದೇವರ ಮುಂಭಾಗ ಪ್ರಾರ್ಥನೆ ಸಲ್ಲಿಸಿ ಚಿನ್ನದ ಪಾಲಕಿಯಲ್ಲಿ ಸರ್ವಮೂಲ ಗ್ರಂಥಗಳನ್ನು ರಥಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು.
ಈ ಸಂದರ್ಭ ಪರ್ಯಾಯ ಅದಮಾರು ಮಠದ ಹಿರಿಯ ಯತಿಗಳಾದ ವಿಶ್ವಪ್ರಿಯ ತೀರ್ಥ ಸ್ವಾಮೀಜಿ, ಈಶಪ್ರಿಯ ತೀರ್ಥ ಸ್ವಾಮೀಜಿ, ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಸ್ವಾಮೀಜಿ, ಪಲಿಮಾರು ಮಠದ ವಿದ್ಯಾಧೀಶ ತೀರ್ಥ ಸ್ವಾಮೀಜಿ, ಕಿರಿಯ ಯತಿ ವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು.
ಬಳಿಕ ರಾಜಾಂಗಣದ ನರಹರಿ ತೀರ್ಥ ವೇದಿಕೆಯಲ್ಲಿ ಮಧ್ವಜಯಂತಿ ಪ್ರಯುಕ್ತ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಶರನ್ನವರಾತ್ರಿ ಆರಂಭದಿಂದಲೂ ಪ್ರತಿದಿನ ರಾಜಾಂಗಣದಲ್ಲಿ 13 ವಿದ್ವಾಂಸದರಿಂದ ಮಧ್ವಚಾರ್ಯರ ಜೀವನ ಚರಿತ್ರೆಯನ್ನೊಳಗೊಂಡ ಮಧ್ವವಿಜಯ ಪಾರಾಯಣದ ಸಮರ್ಪಣಾ ಕಾರ್ಯಕ್ರಮ ನೆರವೇರಿತು. ಶತವಧಾನಿ ರಾಮನಾಥ ಆಚಾರ್ಯರು ಉಪನ್ಯಾಸ ನೀಡಿ, ಭಾಗವತ ತಾತ್ಪರ್ಯ ಚಿಂತನೆ ತಿಳಿಸಿದರು.
ಬಳಿಕ ಅಷ್ಠಮಠದ ಯತಿಗಳು ಕಾರ್ಯಕ್ರಮ ಉದ್ಘಾಟಿಸಿ ಮಧ್ವಾಚಾರ್ಯರ ಕುರಿತು ಸಂದೇಶಗಳನ್ನು ನೀಡಿದರು. ಈಶಪ್ರಿಯ ತೀರ್ಥ ಸ್ವಾಮೀಜಿ ಮಾತನಾಡಿ, ‘ಆಚಾರ್ಯರನ್ನು ಎಷ್ಟು ತಿಳಿಯಲು ಯತ್ನಿಸಿದರೂ ಮುಗಿಯುವುದಿಲ್ಲ, ತಿಳಿದಷ್ಟು ತೀರದಷ್ಟು ಜ್ಞಾನದ ಸಂಪತ್ತು ವೇದಗಳು ಎಂದರು.
ಭಗವತ್ ತತ್ವ, ಚಿಂತನೆಗಳಿಗೆ ಕೊನೆ ಇಲ್ಲ. ಆಚಾರ್ಯರ ಮಾರ್ಗದರ್ಶನದಲ್ಲಿ ಕೊನೆಯವರೆಗೂ ಜ್ಞಾನವನ್ನು ಅರಿಯುವ ಕೆಲಸ ಮಾಡಬೇಕು. ಭಗವಂತ ಸಿಗಬೇಕಾದರೆ, ಆಚಾರ್ಯರ ಮಾರ್ಗ ತುಳಿಯಬೇಕು, ಶಾಸ್ತ್ರಗಳ ಅಧ್ಯಯನ ಮಾಡಬೇಕು ಎಂದರು.
ನವರಾತ್ರಿಯ ಸಂದರ್ಭ ವಿದ್ವಾಂಸರೆಲ್ಲ ಸೇರಿ ಸರ್ವಮೂಲ ಗ್ರಂಥಗಳನ್ನು ಪಾರಾಯಣದ ಮೂಲಕ ಭಕ್ತರಿಗೆ ಜ್ಞಾನವನ್ನು ಹಂಚಿದ್ದಾರೆ. ಭಗವಂತನ ಚಿಂತನೆಗಳು ಎಲ್ಲರಿಗೂ ತಲುಪಿ ಶ್ರೇಯಸ್ಸು ಉಂಟಾಗಲಿ ಎಂದು ಈಶಪ್ರಿಯ ತೀರ್ಥರು ಹಾರೈಸಿದರು.
ಕಾರ್ಯಕ್ರಮದಲ್ಲಿ 180ಕ್ಕೂ ಅಧಿಕ ಭತ್ತದ ತಳಿಗಳನ್ನು 50 ವರ್ಷಗಳಿಂದ ಬೆಳೆದು ಸಂರಕ್ಷಿಸುತ್ತಿರುವ ಬೆಳ್ತಂಗಡಿ ತಾಲ್ಲೂಕಿನ ಬಂಗಾಡಿಯ ಬಿ.ಕೆ.ದೇವರಾವ್ ದಂಪತಿಗಳನ್ನು ಪರ್ಯಾಯ ಅದಮಾರು ಈಶಪ್ರಿಯತೀರ್ಥ ಶ್ರೀಗಳು ಸನ್ಮಾನಿಸಿದರು. ವಿಶೇಷ ಭತ್ತದ ತಳಿಗಳನ್ನು ಮಠದಲ್ಲಿ ಪ್ರದರ್ಶನಕ್ಕಿಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.