ADVERTISEMENT

13 ವರ್ಷ ನಿರಂತರ ಶೇ 18 ಡಿವಿಡೆಂಡ್: ಯಶ್‌ಪಾಲ್ ಸುವರ್ಣ

ಮಹಾಲಕ್ಷ್ಮೀ ಬ್ಯಾಂಕಿನ 44ನೇ ವಾರ್ಷಿಕ ಮಹಾಸಭೆ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2022, 13:12 IST
Last Updated 9 ಆಗಸ್ಟ್ 2022, 13:12 IST
ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್‌ನ 2021-22ರ ಆರ್ಥಿಕ ವರ್ಷದ 44ನೇ ವಾರ್ಷಿಕ ಮಹಾಸಭೆಯಲ್ಲಿ ಕಾಮನ್‌ವೆಲ್ತ್ ಕಂಚಿನ ಪದಕ ವಿಜೇತ ಗುರುರಾಜ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.
ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್‌ನ 2021-22ರ ಆರ್ಥಿಕ ವರ್ಷದ 44ನೇ ವಾರ್ಷಿಕ ಮಹಾಸಭೆಯಲ್ಲಿ ಕಾಮನ್‌ವೆಲ್ತ್ ಕಂಚಿನ ಪದಕ ವಿಜೇತ ಗುರುರಾಜ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.   

ಉಡುಪಿ: ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್‌ನ 2021-22ರ ಆರ್ಥಿಕ ವರ್ಷದ 44ನೇ ವಾರ್ಷಿಕ ಮಹಾಸಭೆ ಮಂಗಳವಾರ ಬ್ಯಾಂಕಿನ ಅಧ್ಯಕ್ಷರಾದ ಯಶ್‍ಪಾಲ್ ಸುವರ್ಣ ಅಧ್ಯಕ್ಷತೆಯಲ್ಲಿ ನಗರದ ಪುರಭವನದಲ್ಲಿ ಜರುಗಿತು.

ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ನಿರಂತರ 13 ವರ್ಷಗಳಿಂದ ಶೇ 18 ಡಿವಿಡೆಂಡ್ ಘೋಷಣೆಯ ಮೂಲಕ ಕರಾವಳಿ ಭಾಗದ ಪಟ್ಟಣ ಸಹಕಾರಿ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಬ್ಯಾಂಕ್ ಎಲ್ಲಾ ಕ್ಷೇತ್ರಗಳಲ್ಲೂ ಗಣನೀಯ ಪ್ರಗತಿ ಸಾಧಿಸಿದ್ದು, ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಗ್ರಾಹಕ ಸ್ನೇಹಿಯಾಗಿ ವ್ಯವಹಾರ ನಡೆಸುತ್ತಿದೆ ಎಂದು ಯಶ್‌ಪಾಲ್ ಸುವರ್ಣ ಸಂತಸ ವ್ಯಕ್ತಪಡಿಸಿದರು.

ವಿಶೇಷವಾಗಿ ಸಣ್ಣ ಉದ್ದಿಮೆದಾರರಿಗೆ ಶೇ 8 ಬಡ್ಡಿದರದಲ್ಲಿ ವಿಶೇಷ ಮಾನ್ಸೂನ್ ಸಾಲ ಯೋಜನೆ, ಮಹಿಳಾ ಮೀನುಗಾರರ ಸ್ವಸಹಾಯ ಸಂಘಗಳಿಗೆ ಶೂನ್ಯ ಬಡ್ಡಿದರದ ಸಾಲ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಸಬ್ಸಿಡಿಯನ್ನು ಗ್ರಾಹಕರ ಖಾತೆಗೆ ಜಮೆ ಮಾಡಲು ಕಾರ್ಯಪ್ರವೃತ್ತವಾಗಿರುವುದಾಗಿ ತಿಳಿಸಿದರು.

ADVERTISEMENT

ಮಹಾಲಕ್ಷ್ಮೀ ಪ್ಲಾಟಿನಂ ಉಳಿತಾಯ ಖಾತೆಯಲ್ಲಿ ಕನಿಷ್ಠ 5 ಲಕ್ಷ ಠೇವಣಿಯ ಮೇಲೆ ಶೇ 4.75, ಗೋಲ್ಡ್ ಉಳಿತಾಯ ಖಾತೆಯಲ್ಲಿ ಕನಿಷ್ಠ ₹ 2 ಲಕ್ಷ ಠೇವಣಿಯ ಮೇಲೆ ಶೇ 4.25 ಬಡ್ಡಿದರ ಹಾಗೂ ಸಂಘ ಸಂಸ್ಥೆಗಳಿಗೆ ಶೇ 0.5 ಹೆಚ್ಚುವರಿ ಬಡ್ಡಿ ನೀಡಲಾಗುತ್ತಿದೆ. ವಿದ್ಯಾರ್ಥಿಗಳಿಗಾಗಿ ಶೂನ್ಯ ಬ್ಯಾಲೆನ್ಸ್ ಮಹಾಲಕ್ಷ್ಮೀ ವಿದ್ಯಾ ಸಿರಿ ಉಳಿತಾಯ ಖಾತೆಯ ಸೌಲಭ್ಯ ಒದಗಿಸಲಾಗಿದೆ. ಮುಂಧೆ ಬ್ಯಾಂಕಿನ ಕಾರ್ಯಕ್ಷೇತ್ರವನ್ನು ಕರ್ನಾಟಕ ರಾಜ್ಯದಾದ್ಯಂತ ವಿಸ್ತರಿಸುವ ಬಗ್ಗೆ ಆಡಳಿತ ಮಂಡಳಿ ಯೋಜನೆ ರೂಪಿಸಿರುವುದಾಗಿ ಯಶ್‌ಪಾಲ್ ತಿಳಿಸಿದರು.

ಈ ಸಂದರ್ಭದಲ್ಲಿ ಕಾಮನ್‍ವೆಲ್ತ್ ಗೇಮ್ಸ್ ಪದಕ ವಿಜೇತ ಗುರುರಾಜ್ ಪೂಜಾರಿ, ಮೈಸೂರು ಇಲೆಕ್ಟ್ರಿಕಲ್ ಇಂಡಸ್ಟ್ರೀಸ್ ನೂತನ ಅಧ್ಯಕ್ಷರಾದ ಉದಯ ಕುಮಾರ್ ಶೆಟ್ಟಿ ಕಿದಿಯೂರು, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ನಿರ್ದೇಶಕ ಎಸ್‌.ಕೆ.ಮಂಜುನಾಥ, ಮಲ್ಪೆ ಯಾಂತ್ರಿಕ (ಟ್ರಾಲ್) ದೋಣಿ ಸಹಕಾರಿ ಸಂಘದ ಅಧ್ಯಕ್ಷ ರಾಮಚಂದ್ರ ಕುಂದರ್, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625 ಅಂಕಗಳಿಸಿದ ಪುನೀತ್ ನಾಯ್ಕ್, ಕಾನೂನು ವಿಭಾಗದ ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ರ‍್ಯಾಂಕ್ ಪಡೆದ ನಮ್ರತಾ ಅವರನ್ನು ಸನ್ಮಾನಿಸಲಾಯಿತು.

ಆಜಾದಿ ಕಾ ಅಮೃತ್ ಮಹೋತ್ಸವ ಹಿನ್ನೆಲೆಯಲ್ಲಿ ನಿವೃತ್ತ ಸೇನಾನಿಗಳನ್ನು ಗೌರವಿಸಲು ಆ.31 ರವರೆಗೆ ಮಾಜಿ ಸೈನಿಕರಿಗೆ ನಿರಖು ಠೇವಣಿಗಳ ಮೇಲೆ ಶೇ 1 ಅಧಿಕ ಬಡ್ಡಿ ನೀಡಲಾಗುವುದು ಎಂದು ಯಶ್‌ಪಾಲ್ ಘೋಷಿಸಿದರು.

ಸಮಾರಂಭದಲ್ಲಿ ಉದ್ಯಮಿ ಜಿ.ಶಂಕರ್, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ. ಕುಂದರ್, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾದ ಜಯಕರ ಶೆಟ್ಟಿ ಇಂದ್ರಾಳಿ, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಸುವರ್ಣ, ಮತ್ಸ್ಯೋದ್ಯಮಿಗಳಾದ ಹರಿಯಪ್ಪ ಕೋಟ್ಯಾನ್, ಅನಂದ ಪಿ. ಸುವರ್ಣ, ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಯ ಡಾ. ರೋಷನ್ ಕುಮಾರ್ ಶೆಟ್ಟಿ, ಬ್ಯಾಂಕಿನ ನಿರ್ದೇಶಕ ವೆಂಕಟರಮಣ ಕಿದಿಯೂರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.