ADVERTISEMENT

ಮಹಾ ಶಿವರಾತ್ರಿ: ಎಲ್ಲೆಲ್ಲೂ ಶಿವನಾಮ ಸ್ಮರಣೆ

ಬನ್ನಂಜೆ ಮಹಾಲಿಂಗೇಶ್ವರ, ಚಂದ್ರಮೌಳೇಶ್ವರ, ಅನಂತೇಶ್ವರ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ರಥೋತ್ಸವ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2021, 16:05 IST
Last Updated 10 ಮಾರ್ಚ್ 2021, 16:05 IST
ಉಡುಪಿಯ ಬನ್ನಂಜೆ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಅಂಗವಾಗಿ ವಿಶೇಷ ಪೂಜೆಗಳು ನಡೆಯುತ್ತಿವೆ.
ಉಡುಪಿಯ ಬನ್ನಂಜೆ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಅಂಗವಾಗಿ ವಿಶೇಷ ಪೂಜೆಗಳು ನಡೆಯುತ್ತಿವೆ.   

ಉಡುಪಿ: ಜಿಲ್ಲೆಯಲ್ಲಿ ಮಹಾಶಿವರಾತ್ರಿ ಹಬ್ಬದ ಸಂಭ್ರಮ ಕಳೆಗಟ್ಟುತ್ತಿದೆ. ಶಿವನ ದೇವಾಲಯಗಳು ತಳಿರು ತೋರಣ ಹೂವಿನ ಅಲಂಕಾರಗಳಿಂದ ಸಿಂಗಾರ ಗೊಂಡಿವೆ. ಭಕ್ತರು ಮಂಜುನಾಥನ ನಾಮಸ್ಮರಣೆಯಲ್ಲಿ ತೊಡಗಿದ್ದಾರೆ. ಎಲ್ಲೆಡೆ ಓಂಕಾರ ಝೇಂಕರಿಸುತ್ತಿದೆ.

ಉಡುಪಿಯ ಇತಿಹಾಸ ಪ್ರಸಿದ್ಧ ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಅಂಗವಾಗಿ ಮೂರು ದಿನಗಳ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಶಿವರಾತ್ರಿಯ ದಿನ ರಥೋತ್ಸವ ಇಲ್ಲಿನ ವಿಶೇಷ.

ಬುಧವಾರ ಬೆಳಿಗ್ಗೆ ಫಲಾನ್ಯಾಸ ದೇವತಾ ಪ್ರಾರ್ಥನೆ, ಗಣಪತಿ ಪೂಜೆ, ಪುಣ್ಯಾಹ ವಾಚನ, ಆದ್ಯಗಣಯಾಗ, ಪಂಚಾಮೃತಾದಿ ಅಭಿಷೇಕಗಳು ನಡೆದವು. ಮಧ್ಯಾಹ್ನ ಅಲಂಕಾರ ಪೂಜೆ, ಮಹಾಪೂಜೆ, ರಾತ್ರಿ ದೀಪಾರಾಧನೆ ನರವೇರಿತು.

ADVERTISEMENT

ಶಿವರಾತ್ರಿ ದಿನವಾದ ಗುರುವಾರ ಬೆಳಿಗ್ಗೆ ಪಂಚಾಮೃತಾಭಿಷೇಕ, ನಾಳಿಕೇರಾಭಿಷೇಕ, ಶರರುದ್ರ ಪಾರಾಯಣ, ನವಕ ಪ್ರದಾನ ಹೋಮ, ಕಲಶಾಭಿಷೇಕ, ಅಲಂಕಾರ ಪೂಜೆ, ಸಹಸ್ರ ನಾಮಾರ್ಚನೆ, ಬಿಲ್ವಾರ್ಚನೆ ನಡೆಯಲಿದೆ. ಸಂಜೆ 5ರಿಂದ ಶಿವರಾತ್ರಿ ಅರ್ಘ್ಯಪ್ರಧಾನಾಧಿಗಳು ನಡೆಯಲಿದ್ದು, ನಂದಿಕೋಣ, ರಕ್ತೇಶ್ವರಿ, ಬೊಬ್ಬರ್ಯ ದೈವಗಳಿಗೆ ವಾರ್ಷಿಕ ಪೂಜೆ ನಡೆಯಲಿದೆ.

ರಾತ್ರಿ 7.30ಕ್ಕೆ ಉತ್ಸವದ ಬಲಿಯೊಂದಿಗೆ ವೈಭವದ ರಥೋತ್ಸವ ನೆರವೇರಲಿದೆ. ರಾತ್ರಿ 10ಕ್ಕೆ ಮಹಾ ರಂಗಪೂಜೆಗೆ ಚಾಲನೆ ಸಿಗಲಿದೆ. ಬಳಿಕ ಜಾಗರಣೆ ನಡೆಯಲಿದೆ. ಮಾರ್ಚ್‌ 12ರಂದು ನೈರ್ಮಾಲ್ಯ ವಿಸರ್ಜನೆ, ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು ಕಳೆಗಟ್ಟಿದ್ದು, ಬುಧವಾರ ವಿದ್ವಾನ್ ಶ್ರೀಧರ ರಾವ್ ಅವರ ಶಿಷ್ಯರಿಂದ ಭರತನಾಟ್ಯ ನಡೆಯಿತು. ಗುರುವಾರ ರಾತ್ರಿ 9ಕ್ಕೆ ‘ಭೀಷ್ಮ ಪ್ರತಿಜ್ಞೆ’ ಯಕ್ಷಗಾನ ಬಯಲಾಟ ಪ್ರಸಂಗ ನಡೆಯಲಿದೆ.

ಉಡುಪಿಯ ರಥಬೀದಿಯಲ್ಲಿರುವ ಅನಂತೇಶ್ವರ ಹಾಗೂ ಚಂದ್ರಮೌಳೀಶ್ವರ ದೇಗುಲಗಳಲ್ಲೂ ಶಿವರಾತ್ರಿ ಸಂಭ್ರಮ ಜೋರಾಗಿದೆ. ದೇವಸ್ಥಾನಗಳಿಗೆ ಹೂಗಳಿಂದ ಅಲಂಕಾರ ಮಾಡಲಾಗಿದೆ. ಮಾರ್ಚ್‌ 16ರವರೆಗೆ ಶಿವರಾತ್ರಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಮಾರ್ಚ್‌ 15ರಂದು ಸಂಜೆ 5.30ಕ್ಕೆ ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ಮಹಾ ರಥೋತ್ಸವ ನೆರವೇರಲಿದೆ.

ಕೊಡವೂರು ಶಂಕರನಾರಾಯಣ ದೇಗುಲಗಳಲ್ಲಿ ವಿಶೇಷ ಪೂಜೆ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.