ADVERTISEMENT

ಬ್ರಹ್ಮಾವರ | ತಿಮರೋಡಿ ಬಂಧನ: ಬೆಂಬಲಿಗರ ಜಮಾವಣೆ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2025, 5:15 IST
Last Updated 22 ಆಗಸ್ಟ್ 2025, 5:15 IST
ಮಹೇಶ್ ಶೆಟ್ಟಿ ತಿಮರೋಡಿ ಬೆಂಬಲಿಗರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆಯಿತು
ಮಹೇಶ್ ಶೆಟ್ಟಿ ತಿಮರೋಡಿ ಬೆಂಬಲಿಗರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆಯಿತು   

ಬ್ರಹ್ಮಾವರ: ಸೌಜನ್ಯಾ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಬಂಧನದ ಸುದ್ದಿ ತಿಳಿಯುತ್ತಿದ್ದಂತೆ ಬ್ರಹ್ಮಾವರ ಸಹಿತ ಸುತ್ತಮುತ್ತ ಊರಿನ ಅವರ ಬೆಂಬಲಿಗರು ಠಾಣೆ ಸಮೀಪ ಜಮಾಯಿಸಿದ್ದು ಕಂಡುಬಂತು.

ಸಂಜೆಯ ವೇಳೆಗೆ ಅವರನ್ನು ಬಂಧಿಸಿ, ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗಂಟೆಗೂ ಅಧಿಕ ಕಾಲ ಆರೋಗ್ಯ ತಪಾಸಣೆಗೆ ಒಳಪಡಿಸಲಾಯಿತು. ನಂತರ ಬ್ರಹ್ಮಾವರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ಬ್ರಹ್ಮಾವರ ಪೊಲೀಸ್‌ ಠಾಣೆ, ಸಮುದಾಯ ಆಸ್ಪತ್ರೆ ಮತ್ತು ನ್ಯಾಯಾಲಯ ಪರಿಸರದಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಬ್ರಹ್ಮಾವರ ಠಾಣೆಗೆ ಸಂಪರ್ಕಿಸುವ ಸರ್ವಿಸ್‌ ರಸ್ತೆ, ಬೋರ್ಡ್‌ ಶಾಲೆಯ ರಸ್ತೆಯನ್ನು ಬೆಳಿಗ್ಗೆಯಿಂದಲೇ ಬಂದ್‌ ಮಾಡಲಾಗಿತ್ತು. ಠಾಣೆಯ ಸುತ್ತಮುತ್ತ ಪೊಲೀಸರನ್ನು ನಿಯೋಜಿಸಿ ಠಾಣೆಗೆ ಯಾರೂ ಬಾರದಂತೆ ಬಿಗಿ ಬಂದೋಬಸ್ತ್‌ ಮಾಡಲಾಗಿತ್ತು. ಸ್ಥಳೀಯರಿಗೂ ರಸ್ತೆಯಲ್ಲಿ ಪ್ರವೇಶವನ್ನು ನಿಷೇಧಿಸಲಾಗಿತ್ತು.

ADVERTISEMENT

ಈ ಮಧ್ಯೆ ಮಹೇಶ್‌ ಶೆಟ್ಟಿ ಅವರ ಬೆಂಬಲಿಗರು ಮತ್ತು ಅವರ ಪರ ವಕೀಲರಿಗೆ ಠಾಣೆಗೆ ಪ್ರವೇಶ ನಿರಾಕರಿಸಿದ್ದಕ್ಕೆ ಪೊಲೀಸರು ಮತ್ತು ಬೆಂಬಲಿಗರ ಮಧ್ಯೆ ಮಾತಿನ ಚಕಮಕಿ ನಡೆಯಿತು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಾಹನಕ್ಕೆ ಹಾನಿಯಾಗಿರುವುದು

ಪೊಲೀಸ್‌ ವಾಹನಕ್ಕೆ ಗುದ್ದಿದ ಕಾರು

ಕಾರ್ಕಳ: ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಪೊಲೀಸರು ಬ್ರಹ್ಮಾವರಕ್ಕೆ ಕರೆದೊಯುತ್ತಿದ್ದ ವೇಳೆ ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ವಾಹನಕ್ಕೆ ತಿಮರೋಡಿ ಬೆಂಬಲಿಗರ ಕಾರು ಗುದ್ದಿದ ಘಟನೆ ತಾಲ್ಲೂಕಿನ ಹೊಸ್ಮಾರಿನಲ್ಲಿ ನಡೆದಿದೆ. ತಿಮರೋಡಿ ಅವರನ್ನು ಬ್ರಹ್ಮಾವರ ಪೊಲೀಸರು ಉಜಿರೆಯಿಂದ ವಶಕ್ಕೆ ಪಡೆದು ಬ್ರಹ್ಮಾವರಕ್ಕೆ ಕರೆದೊಯ್ಯುತ್ತಿದ್ದ ವೇಳೆ ಅವರ ಕಾರಿನ ಹಿಂದೆ ಬರುತ್ತಿದ್ದ ಬೆಂಬಲಿಗರನ್ನು ಬರಬೇಡಿ ಎಂದು ಎಚ್ಚರಿಕೆ ನೀಡಿದರೂ ಅದನ್ನು ನಿರ್ಲಕ್ಷಿಸಿ ಹಿಂಬಾಲಿಸಿಕೊಂಡು ಬಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಾಹನಕ್ಕೆ ಗುದ್ದಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ ಎಂದು ದೂರಲಾಗಿದೆ.

ಕಾರನ್ನು ವಶಕ್ಕೆ ಪಡೆದು ಅದರಲ್ಲಿದ್ದ ಬೆಳ್ತಂಗಡಿ ತಾಲ್ಲೂಕಿನ ಸೃಜನ್ ಎಲ್ . ಹಿತೇಶ್ ಸಹನ್ ಎಂಬುವವರನ್ನು ಕಾರ್ಕಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಅವರ ವಿರುದ್ಧ ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.  ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ನ್ಯಾಯಾಲಯವು ಅವರಿಗೆ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.