ADVERTISEMENT

ಮಂದಾರ್ತಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ 42 ಜೋಡಿಗಳು

​ಪ್ರಜಾವಾಣಿ ವಾರ್ತೆ
Published 8 ಮೇ 2025, 15:34 IST
Last Updated 8 ಮೇ 2025, 15:34 IST
ದೇವಸ್ಥಾನದ ವತಿಯಿಂದ ವಧುವಿಗೆ ಕರಿಮಣಿ, ಧಾರೆ ಸೀರೆಯನ್ನು ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಎಚ್.ಧನಂಜಯ ಶೆಟ್ಟಿ ವಿತರಿಸಿದರು
ದೇವಸ್ಥಾನದ ವತಿಯಿಂದ ವಧುವಿಗೆ ಕರಿಮಣಿ, ಧಾರೆ ಸೀರೆಯನ್ನು ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಎಚ್.ಧನಂಜಯ ಶೆಟ್ಟಿ ವಿತರಿಸಿದರು   

ಮಂದಾರ್ತಿ(ಬ್ರಹ್ಮಾವರ): ಮಂದಾರ್ತಿ ದುರ್ಗಾಪರಮೇಶ್ವರಿ ದೇವಸ್ಥಾನದ ಎದುರುಗಡೆ ಹಾಕಿದ ಸುಸಜ್ಜಿತ ಮಂಟಪದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ಹಾಗೂ ವ್ಯವಸ್ಥಾಪನಾ ಸಮಿತಿ ಸದಸ್ಯ ಶ್ರೀಪತಿ ಅಡಿಗ ಅವರ ಪೌರೋಹಿತ್ಯದಲ್ಲಿ, ಅರ್ಚಕ ವೃಂದದ ಸಹಯೋಗದಲ್ಲಿ 42 ಜೋಡಿಗಳು ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ದೇವಸ್ಥಾನದ ವತಿಯಿಂದ ಬುಧವಾರ ನಡೆದ 23ನೇ ವರ್ಷದ ಸಾಮೂಹಿಕ ವಿವಾಹದಲ್ಲಿ ವಧುವಿಗೆ ಕರಿಮಣಿ ಹಾಗೂ ಧಾರೆ ಸೀರೆ, ವರನಿಗೆ ಕುರ್ತಾ ಪೈಜಾಮವನ್ನು ಉಚಿತವಾಗಿ ನೀಡಲಾಯಿತು. ಮದುವೆಯಾದ ಪರಿಶಿಷ್ಟ ಜಾತಿ ಮತ್ತು ಪಂಗಡದ ವಧು–ವರರಿಗೆ ಸರ್ಕಾರದ ವತಿಯಿಂದ ₹50 ಸಾವಿರ ಪ್ರೋತ್ಸಾಹಧನ ಸಿಗುವ ವ್ಯವಸ್ಥೆ ಮಾಡಲಾಗಿತ್ತು.

ಕುಂದಾಪುರ ತಾಲ್ಲೂಕಿನ 15 ಜೋಡಿ, ಬ್ರಹ್ಮಾವರದಿಂದ 10, ಉಡುಪಿ ತಾಲ್ಲೂಕಿನ 5 ಜೋಡಿ, ಕಾರ್ಕಳದಿಂದ 5, ಬೈಂದೂರಿನಿಂದ 2, ತೀರ್ಥಹಳ್ಳಿಯಿಂದ 2 ಮತ್ತು ಶಿವಮೊಗ್ಗ, ಹೊಸನಗರ, ಕೊಪ್ಪ ತಾಲ್ಲೂಕಿನಿಂದ ತಲಾ ಒಂದು ಜೋಡಿ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಕ್ಷೇತ್ರದಲ್ಲಿ ಇದುವರೆಗೆ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಒಟ್ಟು 7,330 ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಗ್ರಾಮ ಆಡಳಿತಾಧಿಕಾರಿ ಬಿ.ಶರತ್‌ ಶೆಟ್ಟಿ ವಿವಾಹ ನೋಂದಣಿಗೆ ಕ್ರಮ ವಹಿಸಿದ್ದರು.

ADVERTISEMENT

ಮದುವೆ ಕಾರ್ಯಕ್ರಮಕ್ಕೆ ವಧು–ವರರ ಕಡೆಯಿಂದ ಬಂದಿದ್ದ ಬಂಧುಗಳಿಗೆ ದೇವಸ್ಥಾನದ ವತಿಯಿಂದ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

ಶಾಸಕ ಕಿರಣ್‌ ಕುಮಾರ್‌ ಕೊಡ್ಗಿ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಚ್.ಧನಂಜಯ ಶೆಟ್ಟಿ, ಕಾರ್ಯನಿರ್ವಹಣಾಧಿಕಾರಿ ಜಯಮ್ಮ, ಅನುವಂಶಿಕ ಮೊಕ್ತೇಸರರಾದ ಎಚ್‌.ಪ್ರಭಾಕರ ಶೆಟ್ಟಿ, ಶಂಭು ಶೆಟ್ಟಿ, ಆರ್‌.ಶ್ರಣಿವಾಸ ಶೆಟ್ಟಿ, ಎಚ್‌.ಜಯರಾಮ ಶೆಟ್ಟಿ, ಶೇಡಿಕೊಡ್ಲು ವಿಠಲ ಶೆಟ್ಟಿ, ಭಾಸ್ಕರ ಶೆಟ್ಟಿ ಶೇಡಿಕೊಡ್ಲು, ಕೆ.ಗಣಪಯ್ಯ ಶೆಟ್ಟಿ, ಉದಯ ಭಾಸ್ಕರ ಶೆಟ್ಟಿ, ಹೆಗ್ಗುಂಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಕೃಷ್ಣ ದೇವಾಡಿಗ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಯ ಮೇಲ್ವಿಚಾರಕಿ ಮಾಲತಿ ಶೆಟ್ಟಿ, ಪ್ರದೀಪ ಶೆಟ್ಟಿ ಇದ್ದರು.

ಮಂದಾರ್ತಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಬುಧವಾರ 42 ಜೋಡಿಗಳು ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.