ಕಾಪು (ಪಡುಬಿದ್ರಿ): ಕಾಪು ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಪ್ರಯುಕ್ತ ಲೋಕಕಲ್ಯಾಣಾರ್ಥ ಮತ್ತು ಸಾನ್ನಿಧ್ಯ ವೃದ್ಧಿಗಾಗಿ ನಡೆಯುತ್ತಿರುವ ನವದುರ್ಗಾ ಲೇಖನ ಯಜ್ಞದಲ್ಲಿ ಮಂಡ್ಯ ಜಿಲ್ಲಾಧಿಕಾರಿ ಕುಮಾರ್ ಅವರು ಕುಟುಂಬ ಸಮೇತರಾಗಿ ಭಾನುವಾರ ಪಾಲ್ಗೊಂಡರು.
ಪ್ರತಿಯೊಬ್ಬರೂ ಶಾಶ್ವತ ಪೂಜೆಯಾಗಿ 9 ಶಿಲಾಸೇವೆಯೊಂದಿಗೆ ‘ಕಾಪುವಿನ ಅಮ್ಮನ ಮಕ್ಕಳು’ ತಂಡಕ್ಕೆ ಸೇರ್ಪಡೆಯಾದರು. ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಪ್ರಾರ್ಥಿಸಿ ಅಮ್ಮನ ಅನುಗ್ರಹ ಪ್ರಸಾದ ನೀಡಿ ಗೌರವಿಸಿದರು.
ನಂತರ ಜೀರ್ಣೋದ್ಧಾರ ಕಾಮಗಾರಿ ವೀಕ್ಷಿಸಿ ಮಾತನಾಡಿದ ಅವರು, ಆರು ತಿಂಗಳ ಹಿಂದೆಯಷ್ಟೇ ದೇವಳಕ್ಕೆ ಭೇಟಿ ನೀಡಿದ್ದೆ, ನಾನು ಈ ಜಿಲ್ಲೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಕೆಲಸವನ್ನು ನಿರ್ವಹಿಸುತ್ತಿದ್ದಾಗಲೂ ಕೂಡ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದೆ ಎಂದರು.
ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ರು ಹೇಳಿದಂತೆ ನಾವು ಕುಟುಂಬದ ಎಲ್ಲ ಸದಸ್ಯರು ನವದುರ್ಗಾ ಲೇಖನವನ್ನು ಒಂಬತ್ತು ದಿನಗಳ ಕಾಲ ಬರೆದಿದ್ದೆವು, ಅದನ್ನ ಸ್ವತಃ ನಾವೇ ಅರ್ಪಿಸಬೇಕೆಂದು ಕ್ಷೇತ್ರಕ್ಕೆ ಬಂದಿದ್ದೇವೆ ಎಂದರು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರತ್ನಾಕರ ಶೆಟ್ಟಿ ನಡಿಕೆರೆ, ಅಭಿವೃದ್ಧಿ ಸಮಿತಿಯ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯಾ, ನವದುರ್ಗಾ ಲೇಖನ ಯಜ್ಞ ಸಮಿತಿಯ ಪ್ರಧಾನ ಕಾರ್ಯದರ್ಶಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಯೋಗೀಶ್ ವಿ. ಶೆಟ್ಟಿ, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಶೇಖರ ಸಾಲ್ಯಾನ್, ಸಂಚಾಲಕಿ ಗೀತಾಂಜಲಿ ಎಂ. ಸುವರ್ಣ, ಸಾವಿತ್ರಿ ಗಣೇಶ್, ಗೋವರ್ಧನ್ ಸೇರಿಗಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.