ADVERTISEMENT

‘ಪ್ರತಿ ಮನೆಗೂ ತಲುಪಲಿ ಪೊಲೀಸ್‌ ಸೇವೆ’

‘ಮನೆ ಮನೆಗೆ ಪೊಲೀಸ್’ ಕಾರ್ಯಕ್ರಮಕ್ಕೆ ನ್ಯಾಯಾಧೀಶ ಕಿರಣ್ ಎಸ್. ಗಂಗಣ್ಣನವರ್ರಿಂದ ಚಾಲನೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2025, 6:57 IST
Last Updated 12 ಜುಲೈ 2025, 6:57 IST
‘ಮನೆ ಮನೆಗೆ ಪೊಲೀಸ್‌’ ಕಾರ್ಯಕ್ರಮಕ್ಕೆ ಉಡುಪಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಕಿರಣ್ ಎಸ್. ಗಂಗಣ್ಣನವರ್ ಶುಕ್ರವಾರ ಚಾಲನೆ ನೀಡಿದರು
‘ಮನೆ ಮನೆಗೆ ಪೊಲೀಸ್‌’ ಕಾರ್ಯಕ್ರಮಕ್ಕೆ ಉಡುಪಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಕಿರಣ್ ಎಸ್. ಗಂಗಣ್ಣನವರ್ ಶುಕ್ರವಾರ ಚಾಲನೆ ನೀಡಿದರು   

ಉಡುಪಿ: ಸಾರ್ವಜನಿಕರ ಸಮಸ್ಯೆ, ದೂರು ಆಲಿಸಲು ಪೊಲೀಸ್‌ ಸಿಬ್ಬಂದಿಯೇ ಮನೆ ಬಾಗಿಲಿಗೆ ಬರುವಂಥ ವಿನೂತನ ಪರಿಕಲ್ಪನೆಯಾದ ‘ಮನೆ ಮನೆಗೆ ಪೊಲೀಸ್‌’ ಕಾರ್ಯಕ್ರಮಕ್ಕೆ ಶುಕ್ರವಾರ ನಗರದಲ್ಲಿ ಚಾಲನೆ ನೀಡಲಾಯಿತು.

ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಕಿರಣ್ ಎಸ್. ಗಂಗಣ್ಣನವರ್ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಪೊಲೀಸ್ ಸೇವೆ ಪ್ರತಿ ಮನೆಗೂ ತಲುಪಲಿ. ಪೊಲೀಸ್ ತಂಡಗಳ ಈ ಕಾರ್ಯ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿಗಳಾದ ಸುಧಾಕರ ಎಸ್. ನಾಯ್ಕ, ಪರಮೇಶ್ವರ ಹೆಗಡೆ, ಡಿವೈಎಸ್‌ಪಿ ಪ್ರಭು ಡಿ.ಟಿ., ಪಿಎಸ್ಐಗಳಾದ ಭರತೇಶ್, ನಾರಾಯಣ, ಪ್ರಕಾಶ್ ಸಾಲಿಯಾನ್, ಹುಸೇನ್ ಸಾಬ್, ಸಿಬ್ಬಂದಿ ಭಾಗವಹಿಸಿದ್ದರು.

ADVERTISEMENT

ಉಡುಪಿ ನಗರ ಠಾಣೆ, ಮಣಿಪಾಲ, ಬ್ರಹ್ಮಾವರ ಮತ್ತು ಕೋಟ ಠಾಣೆಗಳಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ‘ಮನೆಮನೆ ಪೊಲೀಸ್’ ಅಭಿಯಾನ ಕೈಗೊಳ್ಳಲಾಯಿತು.

ಸೈಬರ್ ಅಪರಾಧ, ಮಾದಕ ವಸ್ತು‌, ಬಾಲಾಪರಾಧ, ಪೋಕ್ಸೊ ಕಾಯ್ದೆ, ಮನೆಯಿಂದ ಕಳ್ಳತನ, ಸರ ಕಳ್ಳತನ, ರಸ್ತೆ ಸಂಚಾರ ನಿಯಮ ಮುಂತಾದ ವಿಷಯಗಳ ಬಗ್ಗೆ ಈ ಅಭಿಯಾನದ ಅಂಗವಾಗಿ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತಿದೆ. ಮನೆಯಲ್ಲಿರುವವರ ಹೆಸರು, ಮೊಬೈಲ್ ಸಂಖ್ಯೆ ಪಡೆದುಕೊಳ್ಳಲಾಯಿತು. ಸಾರ್ವಜನಿಕರಿಂದ ದೂರು, ಕೋರಿಕೆಗಳನ್ನು ಸ್ವೀಕರಿಸಲಾಯಿತು.

ಅಭಿಯಾನದ ಅಂಗವಾಗಿ ಉಡುಪಿ ನಗರ ಠಾಣೆ ವ್ಯಾಪ್ತಿಯ 28, ಮಣಿಪಾಲ ಠಾಣೆ ವ್ಯಾಪ್ತಿಯ 45, ಬ್ರಹ್ಮಾವರ ಠಾಣೆ ವ್ಯಾಪ್ತಿಯ 30 ಮತ್ತು ಕೋಟ ಠಾಣೆ ವ್ಯಾಪ್ತಿಯ 25 ಮನೆಗಳಿಗೆ ಭೇಟಿ ನೀಡಲಾಗಿದೆ.

ಈ ಅರಿವು ಕಾರ್ಯಕ್ರಮದ ಅನುಷ್ಠಾನಕ್ಕಾಗಿ ಠಾಣೆಯಿಂದ ರಚಿಸಲಾಗಿರುವ ತಂಡದಲ್ಲಿ ಪಿಐ/ಪಿಎಸ್ಐ, ಎಎಸ್ಐ, ಮಹಿಳಾ ಮತ್ತು ಪುರುಷ ಸಿಬ್ಬಂದಿ ಇರಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.