ಬ್ರಹ್ಮಾವರ: ಸಮಾಜದಲ್ಲಿ ಉನ್ನತ ಮಟ್ಟದ ಜೀವನ ನಡೆಸಲು ಇಂದು ಸಾವಿರಾರು ಉತ್ತಮ ದಾರಿಗಳಿವೆ. ಈ ತರಬೇತಿಯ ಉಪಯೋಗವನ್ನು ಬಳಸಿ ಮನಃಪರಿವರ್ತನೆಗೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ ಜೈಲುವಾಸಿಗಳಿಗೆ ಸಲಹೆ ನೀಡಿದರು.
ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ, ಜಿಲ್ಲಾ ಕೌಶಲಾಭಿವೃದ್ಧಿ ಇಲಾಖೆ, ಜಿಲ್ಲಾ ಕಾರಾಗೃಹ ಮತ್ತು ಬ್ರಹ್ಮಾವರ ರುಡ್‌ಸೆಟ್ ಸಂಸ್ಥೆ ಆಶ್ರಯದಲ್ಲಿ 6 ದಿನ ಉಡುಪಿ ಜಿಲ್ಲೆಯ ಕಾರಾಗೃಹ ವಾಸಿಗಳಿಗೆ ನಡೆದ ಉದ್ಯಮಶೀಲತಾ ಅಭಿವೃದ್ಧಿ ತರಬೇತಿಯ ಸಮಾರೋಪದಲ್ಲಿ ಅವರು ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.
ಜೀವನದಲ್ಲಿ ತಪ್ಪು ಮಾಡುವುದು ಸಹಜ. ತಿದ್ದಿ ನಡೆಯುವುದು ಮನುಜ ಧರ್ಮ. ಹೊಸ ಬದುಕನ್ನು ರೂಪಿಸಿಕೊಳ್ಳಲು ರುಡ್‌ಸೆಟ್ ಸಂಸ್ಥೆಯು ತರಬೇತಿ ಮೂಲಕ ಅವಕಾಶ ಮಾಡಿಕೊಟ್ಟಿದೆ. ಕಾರಾಗೃಹದಿಂದ ಬಿಡುಗಡೆಯಾದ ನಂತರ ಸಮಾಜದಲ್ಲಿ ಉನ್ನತ ವ್ಯಕ್ತಿಗಳಾಗಿ ಬದುಕು ರೂಪಿಸಿಕೊಳ್ಳಲು ಹಲವಾರು ಅವಕಾಶಗಳಿವೆ. ಹೊಸ ವ್ಯಕ್ತಿಯಾಗಿ, ಹೊಸ ಕನಸುಗಳೊಂದಿಗೆ ಜೀವನ ಆರಂಭಿಸಿ ಎಂದರು.
ಉಡುಪಿ ಜಿಲ್ಲಾ ಕಾರಾಗೃಹ ಅಧೀಕ್ಷಕ ವಿಜಯಕುಮಾರ ಚವ್ಹಾಣ್ ಮಾತನಾಡಿ, ತರಬೇತಿಯು ಬದುಕನ್ನು ರೂಪಿಸಲು ಉತ್ತಮ ವೇದಿಕೆಯಾಗಿದೆ. ಹೊಸ ಆಯಾಮಗಳೊಂದಿಗೆ ಭವಿಷ್ಯದಲ್ಲಿ ಗೌರವಯುತ ವ್ಯಕ್ತಿಗಳಾಗಿ ಬದುಕು ಕಟ್ಟಿಕೊಳ್ಳಬೇಕು ಎಂದು ಹೇಳಿದರು.
ಬ್ರಹ್ಮಾವರ ರುಡ್‌ಸೆಟ್ ಸಂಸ್ಥೆಯ ನಿರ್ದೇಶಕ ಬೊಮ್ಮಯ್ಯ ಎಂ. ಮಾತನಾಡಿ, ತರಬೇತಿ ಜೈಲುವಾಸಿಗಳ ಮನಃಪರಿವರ್ತನೆ ಮಾಡುವುದರ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ತರಬೇತಿ ನೀಡಲಾಗಿದೆ. ಸ್ವ- ಉದ್ಯೋಗ ಮಾಡಬಲ್ಲೆ ಎಂಬ ಆತ್ಮ ವಿಶ್ವಾಸ ತುಂಬಿದ್ದೇವೆ. ಮುಂದಿನ ದಿನಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ನಿರುದ್ಯೋಗ ಹೊಗಲಾಡಿಸಲು ರುಡ್‌ಸೆಟ್ ಸಂಸ್ಥೆಯ ಮೂಲಕ ಉತ್ತಮ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.
ಉಡುಪಿ ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಅರುಣ್ ಬಿ. ಭಾಗವಹಿಸಿದ್ದರು.
ರುಡ್‌ಸೆಟ್ ಸಂಸ್ಥೆಯ ಕಚೇರಿ ಸಹಾಯಕ ಶಾಂತಪ್ಪ ನಿರೂಪಿಸಿದರು. ಉಪನ್ಯಾಸಕ ಸಂತೋಷ ಶೆಟ್ಟಿ ಸ್ವಾಗತಿಸಿದರು. ಜಿಲ್ಲಾ ಕಾರಾಗೃಹದ ವಾರ್ಡರ್ ರೇಷ್ಮಾ ನಾಯಕ್ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.