
ಉಡುಪಿ: ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಶ್ರೀಪಾದರು ಸನ್ಯಾಸಾಶ್ರಮ ಸ್ವೀಕರಿಸಿ 50 ವರ್ಷ ಪೂರೈಸಿರುವ ನಿಟ್ಟಿನಲ್ಲಿ ಪಾರ್ಥ ಸಾರಥಿ ಸುವರ್ಣ ರಥ ಸಮರ್ಪಣೋತ್ಸವ ಇದೇ 26 ರಂದು, ಪ್ರಥಮ ರಥೋತ್ಸವ ಮತ್ತು ಉದ್ಘಾಟನೆ 27 ರಂದು ನಡೆಯಲಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾಹಿತಿ ನೀಡಿದ ಸುಗುಣೇಂದ್ರ ತೀರ್ಥ ಶ್ರೀಪಾದರು, 26 ರಂದು ಮಧ್ಯಾಹ್ನ 3.30 ರಿಂದ ಸುವರ್ಣ ರಥದ ಮೆರವಣಿಯು ನಗರದ ಜೋಡುಕಟ್ಟೆಯಿಂದ ನಡೆಯಲಿದೆ. ಬಳಿಕ ಕೃಷ್ಣ ಮಠದ ರಾಜಾಂಗಣದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಮಂತ್ರಾಲಯ ಶ್ರೀ ರಾಘವೇಂದ್ರ ಮಠದ ಪೀಠಾಧಿಪತಿ ಸುಬುಧೇಂದ್ರತೀರ್ಥ ಶ್ರೀಪಾದರು ಸುವರ್ಣ ರಥವನ್ನು ಬರಮಾಡಿಕೊಳ್ಳಲಿದ್ದಾರೆ ಎಂದರು.
27 ರಂದು ಸಂಜೆ 6 ಗಂಟೆಗೆ ಸುವರ್ಣ ರಥದ ಪ್ರಥಮ ರಥೋತ್ಸವವು ರಥಬೀದಿಯಲ್ಲಿ ನಡೆಯಲಿದ್ದು, ಅದಮಾರು ಮಠದ ವಿಶ್ವಪ್ರಿಯ ತೀರ್ಥ ಶ್ರೀಪಾದರು ರಥೋತ್ಸವಕ್ಕೆ ಚಾಲನೆ ನೀಡಲಿದ್ದಾರೆ ಎಂದು ವಿವರಿಸಿದರು. ಇದೇ 28ರಂದು ಕೋಟಿ ತುಳಸಿ ಅರ್ಚನೆ ಮತ್ತು 30 ರಂದು ಮಠದ ರಾಜಾಂಗಣದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ನಡೆಯಲಿದೆ ಎಂದು ಹೇಳಿದರು.
ಪರ್ಯಾಯ ಪುತ್ತಿಗೆ ಮಠದ ಸುಶ್ರೀಂದ್ರ ತೀರ್ಥ ಸ್ವಾಮೀಜಿ, ಮಠದ ಅಂತರರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನಾಚಾರ್ಯ ಉಪಸ್ಥಿತರಿದ್ದರು.