ADVERTISEMENT

ಮಾಧ್ಯಮ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ: ಅನುಮತಿ ಕಡ್ಡಾಯ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2023, 13:59 IST
Last Updated 1 ಏಪ್ರಿಲ್ 2023, 13:59 IST
ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ಎಂಸಿಎಂಸಿ ಕಚೇರಿಗೆ ಶನಿವಾರ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಭೇಟಿನೀಡಿ ಪರಿಶೀಲನೆ ನಡೆಸಿದರು
ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ಎಂಸಿಎಂಸಿ ಕಚೇರಿಗೆ ಶನಿವಾರ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಭೇಟಿನೀಡಿ ಪರಿಶೀಲನೆ ನಡೆಸಿದರು   

ಉಡುಪಿ: ಜಿಲ್ಲೆಯಲ್ಲಿ ಮಾದರಿ ಚುನಾವಣಾ ನೀತಿ ಸಂಹಿತೆಯು ಜಾರಿಯಲಿದ್ದು ಈ ಅವಧಿಯಲ್ಲಿ ಪತ್ರಿಕೆಗಳು, ದೃಶ್ಯ ಮಾಧ್ಯಮ, ಕೇಬಲ್ ಟಿವಿ, ಪೇಸ್‌ಬುಕ್, ವಾಟ್ಸ ಆ್ಯಪ್ ಸೇರಿದಂತೆ ಸೋಷಿಯಲ್ ಮೀಡಿಯಾಗಳಲ್ಲಿ ಯಾವುದೇ ರಾಜಕೀಯ ಪಕ್ಷ ಅಥವಾ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಯ ಪರವಾಗಿ ಜಾಹೀರಾತುಗಳನ್ನು ಪ್ರಕಟಿಸಲು ಜಿಲ್ಲಾ ಎಂಸಿಎಂಸಿ ಸಮಿತಿಯ ಅನುಮತಿ ಕಡ್ಡಾಯವಾಗಿದೆ.

ಸಮಿತಿಯ ಅನುಮತಿ ಪಡೆಯದೆ ಜಾಹೀರಾತು ಪ್ರಕಟಿಸಿದಲ್ಲಿ ಸಂಬಂಧಪಟ್ಟವರ ವಿರುದ್ದ ಪ್ರಜಾಪ್ರತಿನಿಧಿ ಕಾಯ್ದೆಯನ್ವಯ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಎಚ್ಚರಿಕೆ ನೀಡಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿನ ಎಂಸಿಎಂಸಿ ಕಚೇರಿಗೆ ಭೇಟಿ ನೀಡಿ ಮಾತನಾಡಿದ ಜಿಲ್ಲಾಧಿಕಾರಿ ಕೂರ್ಮಾರಾವ್, ಅಭ್ಯರ್ಥಿಗಳು ಮಾಧ್ಯಮ, ಪತ್ರಿಕೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತುಗಳನ್ನು ಪ್ರಕಟಿಸುವ ಮುನ್ನ ಅನುಮತಿ ಪಡೆಯಬೇಕು. ಜಿಲ್ಲಾ ಎಂಸಿಎಂಸಿ ಸಮಿತಿಗೆ ಜಾಹೀರಾತು ಪ್ರಕಟಣೆ ಕೋರಿ ಲಿಖಿತ ಅರ್ಜಿಯನ್ನು ಸಲ್ಲಿಸಬೇಕು. ಅನುಮತಿ ಪಡೆದ ನಂತರವೇ ಜಾಹೀರಾತು ಪ್ರಕಟಿಸಬೇಕು ಎಂದು ಹೇಳಿದರು.

ADVERTISEMENT

ಚುನಾವಣಾ ಪ್ರಚಾರಕ್ಕಾಗಿ ಮುದ್ರಣಗೊಂಡ ಕರಪತ್ರಗಳ ಮೇಲೆ ಮುದ್ರಣ ಮಾಡಿದ ಮುದ್ರಕರ ಹೆಸರು ಹಾಗೂ ವಿಳಾಸ, ಪ್ರತಿಗಳ ಸಂಖ್ಯೆ ಸೇರಿದಂತೆ ಇತರ ಮಾಹಿತಿಗಳನ್ನು ಕಡ್ಡಾಯವಾಗಿ ಮುದ್ರಣ ಮಾಡಬೇಕು ಎಂದರು.

ಮುದ್ರಣ ಕುರಿತ ಮಾಹಿತಿಯನ್ನು ನಿಗದಿತ ನಮೂನೆಯಲ್ಲಿ 3 ದಿನಗಳ ಒಳಗೆ ಹಾಗೂ ಸಾಮಗ್ರಿಯ ಪ್ರತಿಯನ್ನು ಕಡ್ಡಾಯವಾಗಿ ಜಿಲ್ಲಾಧಿಕಾರಿ ಕಚೇರಿಗೆ ಒದಗಿಸಬೇಕು. ನಿಯಮ ಉಲ್ಲಂಘನೆಯು ಪ್ರಜಾಪ್ರತಿನಿಧಿ ಕಾಯ್ದೆಯ ಉಲ್ಲಂಘನೆಯಾಗಲಿದೆ ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾ ಎಂಸಿಎಂಸಿ ಕಚೇರಿಯನ್ನು ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಮೊದಲನೆ ಮಹಡಿಯಲ್ಲಿ ತೆರೆಯಲಾಗಿದ್ದು, ಜಾಹೀರಾತು ಪ್ರಕಟಣೆ ಮಾಡಲು ಅನುಮತಿ ಪಡೆಯಲು ಕಚೇರಿಯನ್ನು ಸಂಪರ್ಕಿಸಬಹುದು ಎಂದರು.

ಈ ಸಂದರ್ಭ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್. ವೀಣಾ, ಜಿಲ್ಲಾ ಎಂಸಿಎಂಸಿ ಸಮಿತಿಯ ನೋಡೆಲ್ ಅಧಿಕಾರಿ ಮತ್ತು ಜಿಲ್ಲಾ ವಾರ್ತಾಧಿಕಾರಿ ಬಿ.ಮಂಜುನಾಥ್, ಮೇಲ್ವಿಚಾರಕರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.