ADVERTISEMENT

15ರಿಂದ ಸರ್ಕಾರಕ್ಕೆ ವರದಿ ಸಲ್ಲಿಕೆ ಇಲ್ಲ

ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2020, 12:03 IST
Last Updated 14 ಸೆಪ್ಟೆಂಬರ್ 2020, 12:03 IST

ಉಡುಪಿ: ವೇತನ ಪರಿಷ್ಕರಣೆ ಸೇರಿದಂತೆ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ12 ವರ್ಷಗಳಿಂದ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಾ ಬಂದರೂ ಸ್ಪಂದನ ಸಿಕ್ಕಿಲ್ಲ. ಹಾಗಾಗಿ, ಸೆ.15ರಿಂದ ಕೋವಿಡ್‌ ಹಾಗೂ ಕೋವಿಡೇತರ ವರದಿಗಳನ್ನು ಸರ್ಕಾರಕ್ಕೆ ಸಲ್ಲಿಸುವುದಿಲ್ಲ ಎಂದು ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಚ್.ಪ್ರಕಾಶ್‌ ಕುಮಾರ್ ಶೆಟ್ಟಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.15ರಿಂದ 20ರವರೆಗೆ ಸರ್ಕಾರಕ್ಕೆ ವರದಿ ಸಲ್ಲಿಸುವ ಕಾರ್ಯವನ್ನು ಸ್ಥಗಿತಗೊಳಿಸುತ್ತೇವೆ. ಬಳಿಕ ಸರ್ಕಾರದ ಸಭೆಗಳಿಗೆ ಹಾಜರಾಗುವುದಿಲ್ಲ. 21ರಿಂದ ತುರ್ತು ಸೇವೆ ಹೊರತುಪಡಿಸಿ ಉಳಿದೆಲ್ಲ ಸೇವೆಗಳಿಂದ ದೂರ ಉಳಿಯಲಿದ್ದೇವೆ. ಬಳಿಕ ಬೆಂಗಳೂರು ಚಲೊ ಜಾಥಾ ಮಾಡಲಿದ್ದು, ಅಲ್ಲಿ ಮುಂದಿನ ನಡೆಯನ್ನು ನಿರ್ಧರಿಸಲಾಗುವುದು ಎಂದರು.

‘ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ವೈದ್ಯರಿಗೆ ದ್ವಿಗುಣ ವೇತನ ನೀಡಲಾಗುತ್ತಿದೆ. 7ನೇ ವೇತನ ಶ್ರೇಣಿ ಜಾರಿ ಮಾಡಲಾಗಿದೆ. ಇದಕ್ಕೆ ನಮ್ಮ ಆಕ್ಷೇಪವಿಲ್ಲ. ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳಿಗೂ ವೇತನ ಪರಿಷ್ಕರಣೆ ಮಾಡಬೇಕು ಎಂಬುದಷ್ಟೆ ಪ್ರಮುಖ ಬೇಡಿಕೆ’ ಎಂದರು.

ADVERTISEMENT

‘ರಾಜ್ಯದಲ್ಲಿ 6,619 ವೈದ್ಯರ ಹುದ್ದೆಗಳಿದ್ದು, ಪ್ರಸ್ತುತ 4,798 ವೈದ್ಯರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. 1,000ಕ್ಕೂ ಹೆಚ್ಚು ವೈದ್ಯರ ಕೊರತೆಯಿದ್ದು, ಹೆಚ್ಚುವರಿ ಕಾರ್ಯಭಾರ ನಿಭಾಯಿಸುತ್ತಿದ್ದೇವೆ.6 ತಿಂಗಳಿನಿಂದ ಹಗಲಿರುಳು ಶ್ರಮಿಸುತ್ತಿದ್ದೇವೆ. 48 ಆರೋಗ್ಯ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದ್ದೇವೆ. ಆದರೂ, ಸರ್ಕಾರ ವೇತನ ನೀಡುವ ವಿಚಾರದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಹಲವು ವರ್ಷಗಳಿಂದ ವೈದ್ಯಾಧಿಕಾರಿಗಳ ಮೂಲ ವೇತನವನ್ನೇ ಪರಿಷ್ಕರಣೆ ಮಾಡಿಲ್ಲ’ ಎಂದು ಟೀಕಿಸಿದರು.

ಪಂಜಾಬ್‌, ಹರ್ಯಾಣ, ಬಿಹಾರ, ಅಸ್ಸಾಂ ಸೇರಿದಂತೆ 12 ರಾ‌ಜ್ಯಗಳಲ್ಲಿ ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ ಮಾದರಿಯ ವೇತನ ನೀಡಲಾಗುತ್ತಿದ್ದು, ರಾಜ್ಯದಲ್ಲೂ ಜಾರಿಯಾಗಬೇಕು. ಇಲ್ಲವಾದರೆ ಹಂತಹಂತವಾಗಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿಡಾ.ನರಸಿಂಹ ನಾಯಕ್‌, ಡಾ.ಗೋಪಾಲ್‌, ಉಮೇಶ್ ನಾಯಕ್‌, ಡಾ.ರಂಜಿತ್‌, ಡಾ.ಪ್ರತಾಪ್‌ ಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.