ADVERTISEMENT

ಉಡುಪಿ: ಕಸದಲ್ಲರಳಿದೆ ಪ್ರಾಣಿ, ಪಕ್ಷಿ ಪ್ರಪಂಚ

ನವೀನ್ ಕುಮಾರ್ ಜಿ.
Published 19 ಮಾರ್ಚ್ 2025, 6:55 IST
Last Updated 19 ಮಾರ್ಚ್ 2025, 6:55 IST
ಜ್ಯೋತಿ ಆಚಾರ್ಯ
ಜ್ಯೋತಿ ಆಚಾರ್ಯ   

ಉಡುಪಿ: ಹಸಿರು ಗಿಡಗಳ ನಡುವೆ ಕೊಕ್ಕರೆ, ನವಿಲು, ಗಿಳಿ, ಬಾತುಕೋಳಿಗಳ ಸಾಲು... ಪಕ್ಕದಲ್ಲೇ ಜಿರಾಫೆ, ಮೊಲ, ಆಮೆಗಳ ಹಿಂಡು...

ಇದು ಯಾವುದೋ ಮೃಗಾಲಯದ ನೋಟವಲ್ಲ. ಕಾರ್ಕಳ ತಾಲ್ಲೂಕಿನ ಹಿರಿಯಂಗಡಿಯ ಜ್ಯೋತಿ ಆಚಾರ್ಯ ಅವರ ಮನೆಯಂಗಳದಲ್ಲಿ ಕಂಗೊಳಿಸುತ್ತಿರುವ ಕಲಾಕೃತಿಗಳು.

ಕಲಾಕೃತಿ ಎಂದಾಗ ಇದು ಯಾವುದೇ ಶಿಲೆ, ಮರ, ಮಣ್ಣಿನಿಂದ ನಿರ್ಮಿಸಿದ್ದಲ್ಲ. ನಾವೆಲ್ಲ ಬಳಸಿ ಬಿಸಾಡುವ ಪ್ಲಾಸ್ಟಿಕ್‌ ಬಾಟಲಿ, ಕ್ಯಾನ್‌, ಸೀಸೆಗಳಲ್ಲೇ ಇವರು ಕಲಾ ಪ್ರೌಢಿಮೆ ಮೆರೆದಿದ್ದಾರೆ.

ADVERTISEMENT

ರೂಪ, ಬಣ್ಣಗಳಿಂದ ಒಂದೇ ನೋಟಕ್ಕೆ ನೋಡುಗರ ಗಮನ ಸೆಳೆಯುವ ಇಂತಹ ಕಲಾಕೃತಿಗಳ ಹಿಂದೆ ಜ್ಯೋತಿ ಅವರ ಅಪಾರ ಪರಿಶ್ರಮ ಹಾಗೂ ಪರಿಸರದ ಬಗೆಗಿನ ಕಾಳಜಿ ಇದೆ.

ಆರಂಭದಲ್ಲಿ ಮನೆಯಲ್ಲಿದ್ದ ಉಪಯೋಗ ಶೂನ್ಯ ಬಾಟಲಿಗಳಿಂದ ಕಲಾಕೃತಿ ರಚಿಸಲು ಆರಂಭಿಸಿದ ಜ್ಯೋತಿ ಅವರು ಅನಂತರ ರಸ್ತೆ ಬದಿಯಲ್ಲಿ ಸಿಗುವ ಬಾಟಲಿಗಳನ್ನೂ ಹೆಕ್ಕಿ ತಂದು ಅವುಗಳಿಗೆ ಜೀವ ಕಳೆ ತುಂಬಿದ್ದಾರೆ. ಈಗ ಅವರ ಆಪ್ತರು ತಮ್ಮ ಮನೆಗಳಲ್ಲಿನ ಬಾಟಲಿ, ಕ್ಯಾನ್‌ಗಳನ್ನು ತಂದು ಜ್ಯೋತಿ ಅವರಿಗೆ ನೀಡುತ್ತಿದ್ದಾರೆ.

ಜ್ಯೋತಿ ಅವರ ಮನೆಯ ಹೂದೋಟದಲ್ಲಿ ಕಂಗೊಳಿಸುತ್ತಿವೆ ಕಲಾಕೃತಿಗಳು

ನೀರಿನ ಬಾಟಲಿ, ಜ್ಯೂಸ್‌ ಬಾಟಲಿ, ಹಾರ್ಪಿಕ್‌, ಶ್ಯಾಂಪೂ, ಅಡುಗೆ ಕ್ಯಾನ್‌ ಹೀಗೆ ಎಲ್ಲಾ ಬಗೆಯ ಬಾಟಲಿಗಳಲ್ಲೂ ಜ್ಯೋತಿ ಅವರ ಕಲಾ ಕುಸುಮಗಳು ಅರಳಿವೆ. ಅಷ್ಟೇ ಅಲ್ಲದೆ ಬಿಯರ್ ಬಾಟಲಿಗಳಲ್ಲೂ ಬಗೆ ಬಗೆಯ ಕಲಾಕೃತಿಗಳನ್ನೂ ಮೂಡಿಸಿದ್ದಾರೆ.

ತಾವು ರಚಿಸಿರುವ ಕಲಾಕೃತಿಗಳನ್ನು ಸ್ಥಳೀಯವಾಗಿ ಕೆಲವೆಡೆ ‍ಪ್ರದರ್ಶನಕ್ಕೂ ಇಟ್ಟಿದ್ದಾರೆ. ಪ್ರದರ್ಶನಕ್ಕಾಗಿ ಕಲಾಕೃತಿಗಳನ್ನು ಪ್ಯಾಕ್‌ ಮಾಡಿ ತೆಗೆದುಕೊಂಡು ಹೋದರೆ ಅವುಗಳು ಹಾಳಾಗುತ್ತವೆ. ಬಣ್ಣವೂ ಮಾಸುತ್ತದೆ ಆ ಕಾರಣಕ್ಕೆ ಕಲಾಕೃತಿಗಳನ್ನು ಪ್ರದರ್ಶನಕ್ಕಿರಿಸಲು ಈಗ ಮನಸ್ಸು ಮಾಡುತ್ತಿಲ್ಲ ಎನ್ನುತ್ತಾರೆ ಜ್ಯೋತಿ ಆಚಾರ್ಯ.

ಎಳವೆಯಿಂದಲೇ ಕರಕುಶಲ ಕಲೆಯಲ್ಲಿ ಆಸಕ್ತಿ ಇತ್ತು. ನಾಲ್ಕೈದು ವರ್ಷಗಳ ಹಿಂದೆಯಷ್ಟೇ ಪ್ಲಾಸ್ಟಿಕ್‌ ಬಾಟಲಿಗಳಿಂದ ಕಲಾಕೃತಿ ರಚಿಸಲು ಮುಂದಾದೆ. ಪರಿಶ್ರಮ ಹೆಚ್ಚಿದ್ದರೂ ಕಲಾಕೃತಿಯೊಂದು ಪರಿಪೂರ್ಣಗೊಂಡಾಗ ಮನಸ್ಸಿಗೆ ಖುಷಿ ಸಿಗುತ್ತದೆ ಎಂದೂ ಹೇಳುತ್ತಾರೆ.

ಬಾಟಲಿಯಲ್ಲರಳಿದ ಜಿಂಕೆ

5 ಲೀಟರ್‌ ಕ್ಯಾನ್‌ ಸಿಗುವುದು ಅಪರೂಪ. ಅಂತಹ ಕ್ಯಾನ್‌ಗಳು ಸಿಕ್ಕಿದರೆ ಪ್ರಾಣಿಗಳ ಪ್ರತಿಕೃತಿ ನಿರ್ಮಿಸಲು ಅನುಕೂಲವಾಗುತ್ತದೆ. ಒಂದು ಕಲಾಕೃತಿಯನ್ನು ಹಲವು ಹಂತಗಳಲ್ಲಿ ಮಾಡಬೇಕಾಗುತ್ತದೆ. ಪ್ಲಾಸ್ಟಿಕ್‌ ಮೇಲೆ ಬಣ್ಣ ನಿಲ್ಲುವುದಿಲ್ಲ ಅದಕ್ಕಾಗಿ ಆರಂಭದಲ್ಲಿ ಬಾಟಲಿಗೆ ಪ್ರೈಮರ್‌ ಕೊಟ್ಟು, ಬಳಿಕ ಬಣ್ಣ ಕೊಡುತ್ತೇನೆ. ಕೆಲವು ಕಲಾಕೃತಿಗಳಿಗೆ ಪ್ಲಾಸ್ಟಿಕ್ ಬಾಟಲಿಯೊಂದಿಗೆ ವಾಲ್ ಪುಟ್ಟಿಯನ್ನೂ ಬಳಸಿದ್ದೇನೆ ಎಂದೂ ಅವರು ವಿವರಿಸುತ್ತಾರೆ.

ಟೈಮ್‌ ಪಾಸ್‌ಗೆ ಆರಂಭಿಸಿದ ಹವ್ಯಾಸ ಇದು, ಎಲ್ಲರ ಪ್ರೋತ್ಸಾಹ ಸಿಕ್ಕಿದ ಮೇಲೆ ಇನ್ನಷ್ಟು ಕಲಾಕೃತಿಗಳನ್ನು ರಚಿಸುವ ಉಮ್ಮಸ್ಸು ಉಂಟಾಯಿತು ಎನ್ನುತ್ತಾರೆ ಅವರು. ಪತಿ ಸುಬ್ರಹ್ಮಣ್ಯ ಆಚಾರ್ಯ ಅವರ ಸಹಕಾರದಿಂದ ಇದೆಲ್ಲ ಸಾಧ್ಯವಾಯಿತು ಎನ್ನಲು ಅವರು ಮರೆಯುವುದಿಲ್ಲ.

ಬಗೆ ಬಗೆ ಕಲಾಕೃತಿ

‘ಆನ್‌ಲೈನ್‌ ತರಗತಿಗೆ ಬೇಡಿಕೆ ಇದೆ’

ಪ್ಲಾಸ್ಟಿಕ್‌ ಬಾಟಲಿಗಳಿಂದ ಕಲಾಕೃತಿ ರಚಿಸುವ ಕುರಿತು ಆನ್‌ಲೈನ್ ತರಗತಿ ನಡೆಸುವಂತೆ ಹಲವರು ಒತ್ತಾಯಿಸುತ್ತಿದ್ದಾರೆ. ಕಲಾಕೃತಿ ರಚಿಸುವುದರ ಜೊತೆಗೆ ವಿಡಿಯೊ ಮಾಡುವುದು ಮತ್ತು ಅದನ್ನು ಎಡಿಟ್‌ ಮಾಡುವುದು ಸಾಧ್ಯವಿಲ್ಲ. ಈ ಕಾರಣಕ್ಕೆ ಆನ್‌ಲೈನ್‌ ಕ್ಲಾಸ್‌ ಆರಂಭಿಸುವತ್ತ ಚಿತ್ತ ಹರಿಸಿಲ್ಲ ಎನ್ನುತ್ತಾರೆ ಜ್ಯೋತಿ. ಆಸಕ್ತಿ ಇರುವ ಮಕ್ಕಳು ನಮ್ಮ ಮನೆಗೆ ಬಂದರೆ ಬಾಟಲಿಯಿಂದ ಕಲಾಕೃತಿ ರಚಿಸುವ ಕಲೆಯನ್ನು ಕಲಿಸಿಕೊಡುತ್ತೇನೆ ಎಂದೂ ಹೇಳುತ್ತಾರೆ ಅವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.