ADVERTISEMENT

ಗ್ರಾಮ ಪಂಚಾಯತ್‌ ಸದಸ್ಯರ ಅನರ್ಹತೆ ಕುರಿತ ಪ್ರಶ್ನೆಗೆ ಸಚಿವ ಖರ್ಗೆ ಉತ್ತರ

​ಪ್ರಜಾವಾಣಿ ವಾರ್ತೆ
Published 13 ಜುಲೈ 2023, 13:21 IST
Last Updated 13 ಜುಲೈ 2023, 13:21 IST
ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ   

ಕುಂದಾಪುರ: ಪಂಚಾಯಿತಿ ಸದಸ್ಯರು ಆಸ್ತಿ ವಿವರವನ್ನು ಸಕಾಲದಲ್ಲಿ ಸಲ್ಲಿಸಿಲ್ಲ ಎನ್ನುವ ಕಾರಣಕ್ಕೆ ಸದಸ್ಯತ್ವ ಅನರ್ಹಗೊಳಿಸಿದ ವಿಚಾರದಲ್ಲಿ ವಿಧಾನ ಪರಿಷತ್ ಕಲಾಪದ ವೇಳೆ ಕೇಳಿದ ಪ್ರಶ್ನೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಉತ್ತರ ನೀಡಿದ್ದಾರೆ.

ಸದಸ್ಯರ ಆಸ್ತಿ ಹೊಣೆಗಾರಿಕೆ ಘೋಷಣೆ ವಿಚಾರದಲ್ಲಿ ₹2 ಲಕ್ಷಕ್ಕಿಂತ ಹೆಚ್ಚಿನ ಚರ ಮತ್ತು ಸ್ಥಿರ ಆಸ್ತಿ ಹೊಂದಿರುವ ಬಗ್ಗೆ ರಾಜ್ಯ ಚುನಾವಣಾ ಆಯೋಗದ ಮುಂದೆ ಘೋಷಣೆ ಮಾಡುವುದು ಅನಿವಾರ್ಯ ಎಂದು ತಮ್ಮ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತಿ ಸದಸ್ಯನು ತನ್ನ ಪದವಿ ಅವಧಿ ಪ್ರಾರಂಭವಾದ ದಿನದಿಂದ 3 ತಿಂಗಳ ಒಳಗೆ ಮತ್ತು ಪ್ರತಿ ಕ್ಯಾಲೆಂಡರ್ ವರ್ಷದಲ್ಲಿ ಸದಸ್ಯರ ಅಧಿಕಾರವಧಿ ಮುಗಿಯುವ ತನಕ, ಆರ್ಥಿಕ ವರ್ಷ ಮುಕ್ತಾಯವಾದ ಒಂದು ತಿಂಗಳ ಒಳಗೆ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ಮೂಲಕ ಆಸ್ತಿ ವಿವರ ದಾಖಲಿಸತಕ್ಕದ್ದು ಎಂಬ ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ ಪ್ರಕರಣ ‘43ಬಿ’ಯನ್ನು ಉಲ್ಲೇಖಿಸಿ ಸಚಿವ ಪ್ರಿಯಾಂಕ್ ಖರ್ಗೆ ಉತ್ತರ ನೀಡಿದ್ದಾರೆ.

ADVERTISEMENT

ವಿಧಾನಪರಿಷತ್‌ ಕಲಾಪದ ಶೂನ್ಯ ವೇಳೆಯಲ್ಲಿ ನೂತನವಾಗಿ ಆಯ್ಕೆಯಾದ ಗ್ರಾಮ ಪಂಚಾಯಿತಿ ಸದಸ್ಯರು ಆಯ್ಕೆಯಾದ 3 ತಿಂಗಳ ಒಳಗೆ ಚುನಾವಣಾ ಆಯೋಗಕ್ಕೆ ಆಸ್ತಿ ವಿವರ ಸಲ್ಲಿಸದೇ ಇದ್ದರೆ ಸದಸ್ಯತ್ವ ಅನರ್ಹಗೊಳಿಸಲಾಗುವುದು ಎಂದು ಉಚ್ಚ ನ್ಯಾಯಾಲಯ ಮತ್ತು ಸರ್ಕಾರ ಅಭಿಪ್ರಾಯ ಪಟ್ಟ ಹಿನ್ನೆಲೆಯಲ್ಲಿ, ಅವರನ್ನು ಕೂಡಲೇ ಸದಸ್ಯ ಸ್ಥಾನದಿಂದ ತೆಗೆದುಹಾಕದಂತೆ ಒತ್ತಾಯಿಸಿದ್ದ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು, ಗ್ರಾಮ ಪಂಚಾಯಿತಿಯ ಅಂದಾಜು 93 ಸಾವಿರಕ್ಕೂ ಮಿಕ್ಕಿರುವ ಸದಸ್ಯರಲ್ಲಿ ಶೇ 50ರಷ್ಟು ಮಹಿಳೆಯರು, ಶೇ 25ರಷ್ಟು ಪರಿಶಿಷ್ಟ ಜಾತಿ ಮತ್ತು ಪಂಗಡದವರು, ಹಿಂದುಳಿದ ವರ್ಗ, ಸಾಮಾನ್ಯ ಸೇರಿದಂತೆ ಬಹುತೇಕ ಬಡವರೇ ಇದ್ದಾರೆ.

ಅನೇಕರಿಗೆ ಅನುಭವದ ಕೊರತೆಯಿದ್ದು, ಸಕಾಲದಲ್ಲಿ ಆಸ್ತಿ ವಿವರ ಸಲ್ಲಿಸದಿರುವ ಸದಸ್ಯರ ಸದಸ್ಯತ್ವ ರದ್ದು ಮಾಡಲು ನಿರ್ಧರಿಸಿದರೆ ಸಂವಿಧಾನದ 73ನೇ ತಿದ್ದುಪಡಿಯ ಒಟ್ಟು ಆಶಯಕ್ಕೆ ಧಕ್ಕೆ ಬರುತ್ತದೆ. ಗ್ರಾಮ ಪಂಚಾಯಿತಿ ಸದಸ್ಯರಾಗಿ ಜನರ ಮಧ್ಯೆ ಕೆಲಸ ಮಾಡಿಕೊಂಡು ಸದಸ್ಯತ್ವದ ಜವಾಬ್ದಾರಿ ನಿರ್ವಹಿಸುವ ಅನೇಕರು ಬಿ.ಪಿ.ಎಲ್ ಕುಟುಂಬಕ್ಕೆ ಸೇರಿದವರಾಗಿದ್ದು, ಇಂತಹ ಸಂದರ್ಭದಲ್ಲಿ ಕಡ್ಡಾಯ ಆಸ್ತಿ ವಿವರ ಘೋಷಣೆ ಎನ್ನುವುದನ್ನು ರದ್ದು ಪಡಿಸಬೇಕೆಂದು ಸರ್ಕಾರವನ್ನು ಆಗ್ರಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.