ADVERTISEMENT

ಮನೆಗೆ ಹೋಗಲು ಬಿಡಿ: ಎಂಐಟಿ ವಿದ್ಯಾರ್ಥಿಗಳ ಆಗ್ರಹ

ಕ್ಯಾಂಪಸ್‌ನಲ್ಲಿ ಸೋಂಕು ಹೆಚ್ಚಳ: ಭೀತಿಗೊಳಗಾದ ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2021, 16:27 IST
Last Updated 19 ಮಾರ್ಚ್ 2021, 16:27 IST
ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಎದುರು ಪೋಷಕರೊಂದಿಗೆ ಮನೆಗೆ ತೆರಳುತ್ತಿರುವ ವಿದ್ಯಾರ್ಥಿಗಳು.
ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಎದುರು ಪೋಷಕರೊಂದಿಗೆ ಮನೆಗೆ ತೆರಳುತ್ತಿರುವ ವಿದ್ಯಾರ್ಥಿಗಳು.   

ಉಡುಪಿ: ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಹೆಚ್ಚಿನ ವಿದ್ಯಾರ್ಥಿಗಳಲ್ಲಿ ಕೋವಿಡ್‌–19 ದೃಢಪಟ್ಟ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕಾಲೇಜು ಪರಿಸರವನ್ನು ಕಂಟೈನ್‌ಮೆಂಟ್‌ ವಲಯವಾಗಿ ಘೋಷಿಸಿದೆ. ಸೋಂಕಿನ ಭೀತಿಗೆ ಸಿಲುಕಿರುವ ನೂರಾರು ವಿದ್ಯಾರ್ಥಿಗಳು ಮುಖ್ಯದ್ವಾರದ ಬಳಿ ಜಮಾಯಿಸಿ, ಮನೆಗೆ ತೆರಳುವಂತೆ ಅವಕಾಶ ನೀಡಬೇಕು ಎಂದು ಆಡಳಿತ ಮಂಡಳಿಯನ್ನು ಒತ್ತಾಯಿಸಿದರು.

ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಕಾರುಗಳಲ್ಲಿ ಬಂದಿದ್ದ ಕೆಲ ಪೋಷಕರು, ಮಕ್ಕಳನ್ನು ಕಳುಹಿಸುವಂತೆ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿ ಜತೆ ವಾಗ್ವಾದ ನಡೆದು ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಸ್ಥಳಕ್ಕೆ ಧಾವಿಸಿದ ಪೊಲೀಸರು ಕಂಟೈನ್‌ಮೆಂಟ್‌ ಪ್ರದೇಶವಾಗಿರುವುದರಿಂದ ವಿದ್ಯಾರ್ಥಿಗಳು ಕ್ಯಾಂಪಸ್ ಬಿಟ್ಟು ಹೊರಬರುವಂತಿಲ್ಲ. ಕೋವಿಡ್‌ ನೆಗೆಟಿವ್ ವರದಿ ಬಂದ ವಿದ್ಯಾರ್ಥಿಗಳನ್ನು ಮನೆಗೆ ತೆರಳಲು ಅವಕಾಶ ನೀಡಲಾಗುವುದು ಎಂದು ಮನವರಿಕೆ ಮಾಡಿಕೊಟ್ಟರು.

ಹೊರ ರಾಜ್ಯ ಹಾಗೂ ವಿದೇಶಗಳಿಗೆ ತೆರಳಲು ಕೋವಿಡ್‌ ನೆಗೆಟಿವ್ ಪ್ರಮಾಣಪತ್ರ ಅಗತ್ಯವಿರುವುದರಿಂದ ಕೋವಿಡ್‌ ಪ್ರಮಾಣಪತ್ರದೊಂದಿಗೆ ತೆರಳಿದರೆ ಒಳಿತು ಎಂದು ಕಾಲೇಜು ಆಡಳಿತ ಮಂಡಳಿಯು ಮನವೊಲಿಸಿದ ಬಳಿಕ ವಿದ್ಯಾರ್ಥಿಗಳು ಕ್ಯಾಂಪಸ್‌ಗೆ ತೆರಳಿದರು.

ADVERTISEMENT

ಎಂಐಟಿಯಲ್ಲಿ 5,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕೋವಿಡ್‌ ಪರೀಕ್ಷೆ ನಡೆಯತ್ತಿದ್ದು, ನೆಗೆಟಿವ್ ವರದಿ ಬಂದವರಿಗೆ ಮನೆಗೆ ಕಳುಹಿಸಲಾಗುತ್ತಿದೆ. ಈ ಮಧ್ಯೆ ಮಾಹೆ ವಿವಿ ವ್ಯಾಪ್ತಿಗೊಳಪಟ್ಟ 12 ವಿಭಾಗಗಳ ಸಿಬ್ಬಂದಿಗೆ ಮನೆಯಿಂದಲೇ ಕಾರ್ಯನಿರ್ವಹಿಸುವಂತೆ ಮಾಹೆ ರಿಜಿಸ್ಟ್ರಾರ್‌ ಡಾ.ನಾರಾಯಣ ಸಭಾಹಿತ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.