ADVERTISEMENT

ಸಮುದ್ರ ತೀರಕ್ಕೆ ಬಂದು ಚಿಕ್ಕಿ ತಿಂದು ಹೋದಂತೆ: ಯಶ್‌ಪಾಲ್ ಲೇವಡಿ

​ಪ್ರಜಾವಾಣಿ ವಾರ್ತೆ
Published 22 ಜುಲೈ 2024, 4:09 IST
Last Updated 22 ಜುಲೈ 2024, 4:09 IST
ಯಶ್‌ಪಾಲ್‌ ಸುವರ್ಣ
ಯಶ್‌ಪಾಲ್‌ ಸುವರ್ಣ   

ಉಡುಪಿ: ಜಿಲ್ಲೆಯ ಜನರ ತೀವ್ರ ಆಕ್ರೋಶದ ಬಳಿಕ ಒಲ್ಲದ ಮನಸ್ಸಿನಿಂದ ಕಾಟಾಚಾರಕ್ಕೆ ಉಡುಪಿಗೆ ಬಂದ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರು ಅಧಿಕಾರಿಗಳೊಡನೆ ನಡೆಸಿದ ಪ್ರಾಕೃತಿಕ ವಿಕೋಪದ ಹಾನಿ ವೀಕ್ಷಣೆ, ಸಮುದ್ರ ತೀರಕ್ಕೆ ವಿಹಾರಕ್ಕೆ ಬಂದು ಚಿಕ್ಕಿ ತಿಂದಂತಾಗಿದೆ ಎಂದು ಶಾಸಕ ಯಶ್‌ಪಾಲ್‌ ಸುವರ್ಣ ಲೇವಡಿ ಮಾಡಿದ್ದಾರೆ.

ಉಡುಪಿ ಜಿಲ್ಲೆಯ ಎಲ್ಲಾ 5 ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರು ಇದ್ದಾರೆ ಎಂಬ ಏಕೈಕ ಕಾರಣದಿಂದ ಸ್ಥಳೀಯ ಶಾಸಕರುಗಳಿಗೆ ಯಾವುದೇ ಮಾಹಿತಿ ನೀಡದೆ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆಯ ಪ್ರಹಸನ ನಡೆಸಿದ್ದಾರೆ ಎಂದು ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.

ಸ್ಥಳೀಯ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಿಲ್ಲಾ ಉಸ್ತುವಾರಿ ಸಚಿವರು ಹಾನಿಯ ಬಗ್ಗೆ ಸಭೆ ನಡೆಸಿ, ಸೂಕ್ತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಯಾವುದೇ ಕ್ರಮ ವಹಿಸಿಲ್ಲ ಎಂದು ಹೇಳಿದರು.

ADVERTISEMENT

ಉಸ್ತುವಾರಿ ಸಚಿವರು ಈಗಾಗಲೇ ಹಲವು ಬಾರಿ ಘೋಷಿಸಿರುವ ಕಡಲ್ಕೊರೆತ ತಡೆಗೆ ₹5 ಕೋಟಿ ಅನುದಾನ, ಪರ್ಯಾಯ ಮಹೋತ್ಸವಕ್ಕೆ ₹10 ಕೋಟಿ ವಿಶೇಷ ಅನುದಾನ ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

ತೇಜೋವಧೆಗೆ ಯತ್ನ: ಮುಡಾ ಅಕ್ರಮ ನಿವೇಶನ ಹಂಚಿಕೆ, ವಾಲ್ಮೀಕಿ ನಿಗಮದ ಅಕ್ರಮ ಹಣ ವರ್ಗಾವಣೆ ಹಗರಣ ಬಯಲಿಗೆ ಬಂದು ಸಚಿವರೊಬ್ಬರ ರಾಜೀನಾಮೆಯಿಂದ ರಾಜ್ಯ ಸರ್ಕಾರದ ಬುಡವೇ ಅಲುಗಾಡುವ ಸ್ಥಿತಿ ನಿರ್ಮಾಣವಾಗಿದ್ದು ಹತಾಶೆಗೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ಸರ್ಕಾರದ ಅವಧಿಯ ಸಚಿವರ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಯಶ್‌ಪಾಲ್‌ ಸುವರ್ಣ ಹೇಳಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಚಿವರಾಗಿದ್ದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಸುನಿಲ್ ಕುಮಾರ್ ವಿರುದ್ಧ ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.