ADVERTISEMENT

ಉಡುಪಿ: ಸಂಭ್ರಮದ ಮೊಂತಿ ಫೆಸ್ತ್

ಭತ್ತದ ತೆನೆಯಿಂದ ಸಿಹಿ ಖಾದ್ಯ ತಯಾರಿಸಿ ಕುಟುಂಬ ಸದಸ್ಯರ ಜತೆ ಭೋಜನ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2022, 12:35 IST
Last Updated 8 ಸೆಪ್ಟೆಂಬರ್ 2022, 12:35 IST
ಉಡುಪಿಯ ಚರ್ಚ್‌ನಲ್ಲಿ ಗುರುವಾರ ಮೊಂತಿ ಫೆಸ್ತ್ ಹಬ್ಬವನ್ನು ಕ್ರೆಸ್ತರು ಭಕ್ತಿ ಭಾವದಿಂದ ಆಚರಿಸಿದರು.
ಉಡುಪಿಯ ಚರ್ಚ್‌ನಲ್ಲಿ ಗುರುವಾರ ಮೊಂತಿ ಫೆಸ್ತ್ ಹಬ್ಬವನ್ನು ಕ್ರೆಸ್ತರು ಭಕ್ತಿ ಭಾವದಿಂದ ಆಚರಿಸಿದರು.   

ಉಡುಪಿ: ಕನ್ಯಾ ಮರಿಯಮ್ಮನವರ ಜನ್ಮದಿನವಾಗಿ ಆಚರಿಸುವ ಮೊಂತಿ ಫೆಸ್ತ್ ಹಬ್ಬವನ್ನು ಗುರುವಾರ ಜಿಲ್ಲೆಯಾದ್ಯಂತ ಕ್ರೆಸ್ತರು ಭಕ್ತಿ ಭಾವದಿಂದ ಆಚರಿಸಿದರು.

ಮಕ್ಕಳು ಚರ್ಚ್‌ಗಳಿಗೆ ತೆರಳಿ ಮರಿಯಮ್ಮನವರ ಮೂರ್ತಿಗೆ ಹೂ ಸಮರ್ಪಿಸಿದರು. ಧರ್ಮಗುರುಗಳು, ಆಯಾ ಊರಿನ ಗುರಿಕಾರರು ಹೊಲಗಳಿಂದ ಆರಿಸಿ ತಂದ ಭತ್ತದ ತೆನೆಯನ್ನು ಮೆರವಣಿಗೆಯಲ್ಲಿ ಚರ್ಚ್‌ಗೆ ಕೊಂಡೊಯ್ದು ಆಶೀರ್ವದಿಸಿದ ಬಳಿಕ ಪವಿತ್ರ ಬಲಿ ಪೂಜೆ ನಡೆಯಿತು.

ಬಲಿ ಪೂಜೆಯಲ್ಲಿ ಧರ್ಮಗುರುಗುಳು ಕುಟುಂಬ ಜೀವನ ಹಾಗೂ ಸಮಾಜದಲ್ಲಿ ಮಹಿಳೆಯ ಸ್ಥಾನಮಾನದ ಕುರಿತು ಪ್ರವಚನ ನೀಡಿದರು. ನಂತರ ಭತ್ತದ ತೆನೆಗಳನ್ನು ಎಲ್ಲರಿಗೂ ವಿತರಿಸಲಾಯಿತು.‌ ಹೂ ಕೊಂಡು ಹೋಗಿದ್ದ ಮಕ್ಕಳಿಗೆ ಹಾಗೂ ಭಕ್ತರಿಗೆ ಸಿಹಿ ಹಾಗೂ ಕಬ್ಬು ಹಂಚಲಾಯಿತು.

ADVERTISEMENT

ತೆನೆ ಹಬ್ಬವನ್ನು ಹಿಂದಿನಿಂದಲೂ ಕೌಟುಂಬಿಕ ಹಬ್ಬವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಚರ್ಚ್‌ನಿಂದ ಮನೆಗೆ ತಂದ ಭತ್ತದ ತೆನೆಯನ್ನು ದೇವರ ಪೀಠದ ಮೇಲಿರಿಸಿ ಕುಟುಂಬದ ಸದಸ್ಯರೆಲ್ಲರೂ ಒಟ್ಟುಗೂಡಿ ಪ್ರಾರ್ಥನೆ ಸಲ್ಲಿಸಿ, ಭತ್ತದ ತೆನೆ ಹುಡಿ ಮಾಡಿ, ಹಾಲು ಪಾಯಸ ತಯಾರಿಸಿ ಒಟ್ಟಾಗಿ ಸವಿದರು.

ಮಧ್ಯಾಹ್ನ ಎಲ್ಲರೂ ಒಟ್ಟಾಗಿ ನೆಲದ ಮೇಲೆ ಕುಳಿತು ಸಸ್ಯಾಹಾರದ ಊಟ ಸವಿದರು. 3, 9 ಮತ್ತು 15 ಬಗೆಯ ಸಸ್ಯಹಾರ ಖಾದ್ಯಗಳನ್ನು ತಯಾರು ಮಾಡಲಾಗಿತ್ತು. ಕೆಸುವಿನ ಪತ್ರೋಡೆ, ಬೆಂಡೆ, ಅಲಸಂದೆ, ಹೀರೆಕಾಯಿ ಹಾಗೂ ತರಕಾರಿ ಖಾದ್ಯಗಳು ವಿಶೇಷವಾಗಿತ್ತು.

ಉಡುಪಿ ಶೋಕಮಾತಾ ಇಗರ್ಜಿಯಲ್ಲಿ ಧಾರ್ಮಿಕ ಕಾರ್ಯಕ್ರಮದಲ್ಲಿ ಚರ್ಚ್‌ನ ಪ್ರಧಾನ ಧರ್ಮಗುರು ಚಾರ್ಲ್ಸ್ ಮಿನೇಜಸ್ ನೇತೃತ್ವದಲ್ಲಿ ಮೋಂತಿ ಫೆಸ್ತ್ ಆಚರಣೆ ನಡೆಯಿತು.

ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಜೆರಾಲ್ಡ್ ಐಸಾಕ್ ಲೋಬೊ ಮಲ್ಪೆ ಸಮೀಪದ ತೊಟ್ಟಂ ಸಂತ ಅನ್ನಮ್ಮ ದೇವಾಲಯದಲ್ಲಿ ಬಲಿಪೂಜೆ ಅರ್ಪಿಸಿ ಹೊಸ ತೆನೆಗಳನ್ನು ಆಶೀರ್ವದಿಸಿ ಹಬ್ಬದ ಸಂದೇಶ ನೀಡಿದರು. ಚರ್ಚ್‌ನ ಧರ್ಮಗುರು ಡೆನಿಸ್ ಡೆಸಾ ಉಪಸ್ಥಿತರಿದ್ದರು.

ಕುಂದಾಪುರದ ಹೋಲಿ ರೋಸರಿ ಚರ್ಚಿನಲ್ಲಿ ಸ್ಟ್ಯಾನಿ ತಾವ್ರೋ, ಶಿರ್ವದ ಆರೋಗ್ಯ ಮಾತೆ ಚರ್ಚಿನಲ್ಲಿ ಲೆಸ್ಲಿ ಡಿಸೋಜಾ, ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್‌ನಲ್ಲಿ ವಲೇರಿಯನ್ ಮೆಂಡೊನ್ಸಾ, ಕಾರ್ಕಳ ಅತ್ತೂರು ಸಂತ ಲಾರೆನ್ಸ್ ಬಾಸಿಲಿಕಾದಲ್ಲಿ ಆಲ್ಬನ್ ಡಿಸೋಜಾ ನೇತೃತ್ವದಲ್ಲಿ ಮೋಂತಿ ಫೆಸ್ತ್ ಆಚರಣೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.