ADVERTISEMENT

ಮುಂಡ್ಕೂರು: ಎಸ್.ಎಲ್.ಆರ್.ಎಂ ಘಟಕದಲ್ಲಿ ಸಿಬ್ಬಂದಿ ಕೊರತೆ

ಸಿದ್ಧಾಪುರ ವಾಸುದೇವ ಭಟ್ಟ
Published 1 ಜನವರಿ 2025, 5:46 IST
Last Updated 1 ಜನವರಿ 2025, 5:46 IST
ಕಾರ್ಕಳ ತಾಲ್ಲೂಕಿನ ಮುಂಡ್ಕೂರು ಎಸ್ಎಲ್ಆರ್ ಎಂ ಘಟಕ
ಕಾರ್ಕಳ ತಾಲ್ಲೂಕಿನ ಮುಂಡ್ಕೂರು ಎಸ್ಎಲ್ಆರ್ ಎಂ ಘಟಕ   

ಕಾರ್ಕಳ: ಮುಂಡ್ಕೂರು ಗ್ರಾಮ ಪಂಚಾಯಿತಿ ಸ್ವಚ್ಛ ಗ್ರಾಮಕ್ಕೆ ಹೆಜ್ಜೆಯಿಟ್ಟು ಎಸ್.ಎಲ್.ಆರ್.ಎಂ ಘಟಕ ಆರಂಭಿಸಿ ಜನಮನ್ನಣೆ ಪಡೆದಿದೆ. ಗ್ರಾಮೀಣ ಪರಿಸರದಲ್ಲಿ ಕಸ ಸಂಗ್ರಹವೇ ಸವಾಲಾಗಿದ್ದು, ಇತ್ತೀಚಿನ ದಿನಗಳಲ್ಲಿ ಕಸ ವಿಂಗಡಣೆ, ವಿಲೇವಾರಿ ಕಷ್ಟದ ಕೆಲಸವಾಗಿ ಪರಿಣಮಿಸಿದೆ.

ಈ ಹಿಂದೆ ಜನನಿಬಿಡ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಕಸ ವಿಲೇವಾರಿ ಈಗ ಗ್ರಾಮೀಣ ಪ್ರದೇಶಕ್ಕೂ ವಿಸ್ತರಿಸಿದೆ. ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಜನರು ಕಸ ವಿಂಗಡಿಸಿ ಸಮರ್ಪಕವಾಗಿ ವಿಲೇವಾರಿ ಮಾಡುವುದು ಅವಶ್ಯವಾಗಿದೆ. ಈ ನಿಟ್ಟಿನಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಾಲಯ ಕಾರ್ಯ ನಿರ್ವಹಿಸುತ್ತಿರುವ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ಕಾರ್ಯ ಪ್ರವೃತ್ತವಾಗಿದೆ.

ಸ್ವಚ್ಛ ಭಾರತ ಪರಿಕಲ್ಪನೆಯ ಅಡಿಯಲ್ಲಿ ಪ್ರತಿ ಗ್ರಾಮಗಳಲ್ಲಿ ಎಸ್ ಎಲ್ ಆರ್ ಎಂ (ಘನ, ದ್ರವ ಸಂಪನ್ಮೂಲ ನಿರ್ವಹಣೆ) ಸ್ಥಾಪಿಸಲಾಗಿದೆ.

ADVERTISEMENT

ಮುಂಡ್ಕೂರು ಗ್ರಾಮ ಪಂಚಾಯಿತಿ ಆರಂಭಿಸಿದ ಎಸ್.ಎಲ್.ಎಂ.ಆರ್ ಘಟಕದ ಕಾರ್ಯನಿರ್ವಹಣೆ ಉತ್ತಮವಾಗಿದೆ. ಇದೀಗ ಸ್ವಂತ ವಾಹನ ಹೊಂದಿ ಹಸಿ ಕಸ, ಒಣ ಕಸವನ್ನು ಸಂಗ್ರಹಿಸಲಾಗುತ್ತಿದೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಚ್ಚೇರಿಪೇಟೆ, ಪೋಸ್ರಾಲ್ ಸಂಕಲಕರಿಯ, ಜಾರಿಗೆ ಕಟ್ಟೆ ಮುಂಡ್ಕೂರು, ಮುಲ್ಲಡ್ಕ ಮುಂತಾದೆಡೆ 650ಕ್ಕೂ ಅಧಿಕ ಮನೆಗಳಿಂದ, 219 ಅಂಗಡಿಗಳಿಂದ ಕಸ ಸಂಗ್ರಹಿಸಲಾಗುತ್ತಿದೆ. ಗ್ರಾಮ ಪಂಚಾಯಿತಿ ಸಮೀಪದಲ್ಲಿಯೇ ಎಸ್.ಎಲ್.ಆರ್.ಎಂ ಘಟಕ ಕಾರ್ಯ ನಿರ್ವಹಿಸುತ್ತಿದ್ದು ಹಸಿ ಕಸ, ಒಣ ಕಸ ಸಂಗ್ರಹ, ವಿಂಗಡಣೆಗೆ ಜಾರಿಗೆಕಟ್ಟೆ ಪದವಿನಲ್ಲಿ ಕಟ್ಟಡ ನಿರ್ಮಾಣ ಮಾಡಲಾಗಿದೆ.

ಘಟಕದ ಕಾರ್ಯ ನಿರ್ವಹಣೆಗೆ ಸಿಬ್ಬಂದಿ ಕೊರತೆ ತೊಡಕುಂಟಾಗಿದೆ. ಈ ಘಟಕದಲ್ಲಿ ಸ್ವಚ್ಛತಾಕಾರ, ವಾಹನ ಚಾಲಕ, ಮೇಲ್ವಿಚಾರಕಿ, ಬಿಲ್ ಸಹಾಯಕ ಹೀಗೆ ಕೇವಲ 4 ಸಿಬ್ಬಂದಿ ಇದ್ದಾರೆ. ಸಿಬ್ಬಂದಿ ಕೊರತೆಯಿಂದ ಕಸ ಸಂಗ್ರಹ, ವಿಲೇವಾರಿ ಘಟಕಕ್ಕೆ ಸವಲಾಗಿ ಪರಿಣಮಿಸಿದೆ.

ಆದಾಯಕ್ಕಿಂತ ಖರ್ಚು ಅಧಿಕ: ದಿನದಿಂದ ದಿನಕ್ಕೆ ಕಸ ಸಂಗ್ರಹ ಏರಿಕೆಯಾಗುತ್ತಿದ್ದು, ಗ್ರಾಮ ಪಂಚಾಯಿತಿಯಲ್ಲಿ ನಿಧಿ ಕೊರತೆಯಿದೆ. ಗ್ರಾಮೀಣ ಪ್ರದೇಶ ಆಗಿರುವುದರಿಂದ ಕಸ ಸಂಗ್ರಹಣೆಗೆ ಕಿ.ಮೀ.ಗಟ್ಟಲೆ ದೂರ ಸಂಚಾರ ಮಾಡಬೇಕು. ಅದಕ್ಕೆ ಸರಿಯಾಗಿ ಕಸ ಸಂಗ್ರಹ ವಾಹನದ ನಿರ್ವಹಣೆ ನಡೆಸಬೇಕಾಗಿದ್ದು, ಆದಾಯಕ್ಕಿಂತ ಖರ್ಚು ಅಧಿಕವಾಗುತ್ತಿದೆ. ಆದಾಗ್ಯೂ ಮುಂಡ್ಕೂರು ಗ್ರಾಮವನ್ನು ಕಸ ಮುಕ್ತವಾಗಿ ಮಾಡಲು ಸ್ಥಳೀಯಾಡಳಿತ ಹರಸಾಹಸ ಪಡುತ್ತಿದೆ.

ಘಟಕದಲ್ಲಿ ವಿಂಗಡಣೆಗಾಗಿ ರಾಶಿಯಾಗಿ ಬಿದ್ದ ತ್ಯಾಜ್ಯ
ಜನರು ಸ್ವಚ್ಛತೆಗೆ ಆದ್ಯತೆ ನೀಡಿ ಕಸನ್ನು ಹಸಿ ಕಸ ಒಣ ಕಸವಾಗಿ ವಿಂಗಡನೆ ಮಾಡಿ ವಾಹನಗಳಿಗೆ ನೀಡಿದರೆ ಉತ್ತಮ
ಉಷಾ ಕುಲಾಲ ಎಸ್.ಎಲ್.ಆರ್.ಎಂ ಘಟಕ ಮೇಲ್ವಿಚಾರಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.