ADVERTISEMENT

ಉಡುಪಿ: ದೀಪದಂತೆ ಪ್ರಜ್ವಲಿಸಲು ‘ಪ್ರಜ್ವಲ’ ಹೆಸರು ನಾಮಕರಣ

ಹೆತ್ತವರಿಗೆ ಬೇಡವಾಗಿ ಕಸದ ತೊಟ್ಟಿ ಸೇರಿದ್ದ ಕಂದಮ್ಮನಿಗೆ ತೊಟ್ಟಿಲುಶಾಸ್ತ್ರದ ಸಂಭ್ರಮ

ಪ್ರಜಾವಾಣಿ ವಿಶೇಷ
Published 25 ನವೆಂಬರ್ 2020, 14:36 IST
Last Updated 25 ನವೆಂಬರ್ 2020, 14:36 IST
ಮೂರು ತಿಂಗಳ ಹಿಂದೆ ಕಸದ ತೊಟ್ಟಿಯಲ್ಲಿ ಸಿಕ್ಕಿದ್ದ ನವಜಾತ ಶಿಶುವಿನ ನಾಮಕರಣ ಸಮಾರಂಭ ಬುಧವಾರ ಕೃಷ್ಣಾನುಗ್ರಹ ಸಂಸ್ಥೆಯಲ್ಲಿ ನೆರವೇರಿತು.
ಮೂರು ತಿಂಗಳ ಹಿಂದೆ ಕಸದ ತೊಟ್ಟಿಯಲ್ಲಿ ಸಿಕ್ಕಿದ್ದ ನವಜಾತ ಶಿಶುವಿನ ನಾಮಕರಣ ಸಮಾರಂಭ ಬುಧವಾರ ಕೃಷ್ಣಾನುಗ್ರಹ ಸಂಸ್ಥೆಯಲ್ಲಿ ನೆರವೇರಿತು.   

ಉಡುಪಿ: ಸಂತೆಕಟ್ಟೆಯ ಕೃಷ್ಣಾನುಗ್ರಹ ಸಂಸ್ಥೆಯಲ್ಲಿ ಬುಧವಾರ ನಾಮಕರಣ ಸಂಭ್ರಮ ಮನೆಮಾಡಿತ್ತು. ಬಲೂನುಗಳಿಂದ ಸಿಂಗಾರಗೊಂಡಿದ್ದ ತೊಟ್ಟಿಲಲ್ಲಿ ಮೂರು ತಿಂಗಳ ಹಸುಗೂಸು ನಲಿಯುತ್ತಿತ್ತು. ಹಿರಿಯ ಸಿವಿಲ್‌ ನ್ಯಾಯಾಧೀಶರಾದ ಕಾವೇರಿ ಅವರು ಮುಂದೆ ನಿಂತು ಶಾಸ್ತ್ರೋಕ್ತವಾಗಿ ನಾಮಕರಣ ನೆರವೇರಿಸಿದರು. ಕಂದಮ್ಮನ ಭವಿಷ್ಯ ದೀಪದಂತೆ ಸದಾ ಪ್ರಜ್ವಲಿಸಲಿ ಎಂದು ‘ಪ್ರಜ್ವಲ’ ಎಂಬ ಹೆಸರನ್ನಿಟ್ಟು ಹರಸಿದರು.

ಮೂರು ತಿಂಗಳ ಹಿಂದೆ ಹೆತ್ತವರಿಗೆ ಬೇಡವಾಗಿ ಕಸದ ತೊಟ್ಟಿ ಸೇರಿದ್ದ ಅನಾಥ ಮಗುವಿನ ‘ನಾಮಕರಣ’ ಸಮಾರಂಭ ಇದು. ನಾಮಕರಣದಲ್ಲಿ ಮಗುವಿನ ಪೋಷಕರು ಇರಲಿಲ್ಲ ಎಂಬ ಕೊರತೆ ಬಿಟ್ಟರೆ ಉಳಿದೆಲ್ಲವೂ ಇತ್ತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕೃಷ್ಣ ಚಾರಿಟೆಬಲ್‌ ಟ್ರಸ್ಟ್‌, ಪೊಲೀಸ್ ಇಲಾಖೆ, ನಾಗರಿಕ ಸೇವಾ ಸಮಿತಿ, ಮಕ್ಕಳ ಸಹಾಯವಾಣಿ, ಹೀಗೆ ಸರ್ಕಾರಿ ಹಾಗೂ ಸರ್ಕಾರೇತರ ಸಂಸ್ಥೆಗಳ ಅಧಿಕಾರಿಗಳು ಮಗುವಿನ ‘ಬಂಧುಗಳ’ ಸ್ಥಾನದಲ್ಲಿ ನಿಂತು ತೊಟ್ಟಿಲು ಶಾಸ್ತ್ರ ನೆರವೇರಿಸಿದರು.

ಸಮಾರಂಭದ ಕುರಿತು ಮಾತನಾಡಿದ ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ್ ಆಚಾರ್ಯ ‘ಮಗು ಆರೋಗ್ಯವಾಗಿದ್ದು, ಬಹಳ ಮುದ್ದಾಗಿದೆ. ಮಗು ಕಸದ ತೊಟ್ಟಿಯಲ್ಲಿ ಸಿಕ್ಕು ಮೂರು ತಿಂಗಳಾದರೂ ಪೋಷಕರು ಪತ್ತೆಯಾಗದ ಹಿನ್ನೆಲೆಯಲ್ಲಿ ಸರ್ಕಾರದ ಇಲಾಖೆಗಳು ಹಾಗೂ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಶಾಸ್ತ್ರೋಕ್ತವಾಗಿ ನಾಮಕರಣ ಮಾಡಲಾಗಿದೆ. ಮುಂದೆ, ಕಾನೂನು ಪ್ರಕಾರ ಮಗುವನ್ನು ದತ್ತು ನೀಡಲಾಗುವುದು. ಹೆತ್ತವರಿಗೆ ಬೇಡವಾದ ಮಗು ದತ್ತು ಪೋಷಕರ ಆಸರೆಯಲ್ಲಿ ಸುಖವಾಗಿ ಬೆಳೆಯುತ್ತದೆ’ ಎಂಬ ವಿಶ್ವಾಸವಿದೆ ಎಂದರು.

ADVERTISEMENT

ಮೂರು ತಿಂಗಳು ಪೋಷಕರ ಬರುವಿಕೆಗೆ ಕಾದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಮುಂದೆ ಮಕ್ಕಳ ಕಲ್ಯಾಣ ಸಮಿತಿಯ ಒಪ್ಪಿಗೆ ಪಡೆದು ಮಗುವನ್ನು ದತ್ತು ಮುಕ್ತಗೊಳಿಸಲಾಗುವುದು. ಬಳಿಕ ಆನ್‌ಲೈನ್‌ನಲ್ಲಿ ದತ್ತು ಪಡೆಯಲು ಅರ್ಜಿ ಸಲ್ಲಿಸಿದ ಪೋಷಕರಿಗೆ ಮಗುವನ್ನು ದತ್ತು ನೀಡುವ ಪ್ರಕ್ರಿಯೆ ನಡೆಯಲಿದೆ ಎಂದು ಪ್ರಭಾಕರ್ ಆಚಾರ್ಯ ಮಾಹಿತಿ ನೀಡಿದರು.‌

ಅಂತರರಾಷ್ಟ್ರೀಯ ದತ್ತು ಮಾಸಾಚರಣೆ 2020 ಅಂಗವಾಗಿ ಹಮ್ಮಿಕೊಂಡಿದ್ದ ಮಡಿಲ ಬೆಳಗು ದತ್ತು ಕಾರ್ಯಕ್ರಮ ಹಾಗೂ ಪರಿತ್ಯಕ್ತ ನವಜಾತ ಶಿಶುವಿನ ನಾಮಕರಣ ಸಮಾರಂಭದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸದಾನಂದ ನಾಯಕ್‌, ಮಹಿಳಾ ಠಾಣೆ ಪಿಎಸ್‌ಐ ವೈಲೆಟ್‌ ಫಿಲೊಮಿನಾ, ಶ್ರೀಕೃಷ್ಣ ಚಾರಿಟೆಬಲ್‌ ಟ್ರಸ್ಟ್‌ನ ಅಧ್ಯಕ್ಷ ಡಾ.ಉಮೇಶ್‌ ಪ್ರಭು, ಜಿಲ್ಲಾ ನಾಗರಿಕ ಸೇವಾ ಸಮಿತಿಯ ಕಾರ್ಯದರ್ಶಿ ನಿತ್ಯಾನಂದ ಒಳಕಾಡು, ಮಕ್ಕಳ ಸಹಾಯವಾಣಿ ನಿರ್ದೇಶಕ ರಾಮಚಂದ್ರ ಉಪಾಧ್ಯಾಯ, ಕೃಷ್ಣಾನುಗ್ರಹ ಆಡಳಿತಾಧಿಕಾರಿ ಉದಯ್ ಕುಮಾರ್‌, ಸಂಯೋಜಕಿ ಮರೀನಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.