ADVERTISEMENT

ಕುಂದಾಪುರದಲ್ಲಿ ಶ್ರೀ ನಾರಾಯಣ ಗುರು ಜಯಂತಿ

.

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2022, 2:30 IST
Last Updated 11 ಸೆಪ್ಟೆಂಬರ್ 2022, 2:30 IST
ಕುಂದಾಪುರದ ಮಿನಿ ವಿಧಾನಸೌಧದಲ್ಲಿ ಶನಿವಾರ ಬ್ರಹ್ಮಶ್ರೀ ನಾರಾಯಣ ಗುರುಗಳ 168 ನೇ ಜಯಂತಿ ನಡೆಯಿತು.
ಕುಂದಾಪುರದ ಮಿನಿ ವಿಧಾನಸೌಧದಲ್ಲಿ ಶನಿವಾರ ಬ್ರಹ್ಮಶ್ರೀ ನಾರಾಯಣ ಗುರುಗಳ 168 ನೇ ಜಯಂತಿ ನಡೆಯಿತು.   

ಕುಂದಾಪುರ: ಸಮಾಜದಲ್ಲಿ ಬೇರು ಬಿಟ್ಟಿದ್ದ ಅಸ್ಪೃಶ್ಯತೆ, ಶೋಷಣೆ, ಮೂಢನಂಬಿಕೆಯಂತಹ ಅನಿಷ್ಠ ಪದ್ಧತಿಯ ವಿರುದ್ಧ ಸಾಮಾಜಿಕ ಕ್ರಾಂತಿ ಮಾಡಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳು ಸಮಾಜದ ಅನೇಕ ತೊಡಕುಗಳನ್ನು ಹೋಗಲಾಡಿಸಿ, ಸಮಾಜದ ಸುಧಾರಣೆಗಾಗಿ ಶ್ರಮಿಸಿದ ದಾರ್ಶನಿಕರು ಎಂದು ತಾಲ್ಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಅಶೋಕ ಪೂಜಾರಿ ಬೀಜಾಡಿ ಹೇಳಿದರು.

ಇಲ್ಲಿನ ಮಿನಿ ವಿಧಾನಸೌಧದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ, ತಾಲ್ಲೂಕು ಆಡಳಿತ ಹಾಗೂ ತಾಲ್ಲೂಕು ಪಂಚಾಯಿತಿ ಆಶ್ರಯದಲ್ಲಿ ನಡೆದ ಕುಂದಾಪುರ ತಾಲ್ಲೂಕು ಮಟ್ಟದ ಬ್ರಹ್ಮಶ್ರೀ ನಾರಾಯಣ ಗುರು ಅವರ 168ನೇ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಸಮಾಜದ ನೆಮ್ಮದಿಯನ್ನು ಕಾಡುತ್ತಿದ್ದ ಕೆಲವೊಂದು ಅನಿಷ್ಠ ಪದ್ಧತಿಗಳು ತಾಂಡವವಾಡುತ್ತಿದ್ದಾಗ ಜನಿಸಿದ್ದ ಶ್ರೀ ನಾರಾಯಣ ಗುರುಗಳು, ಜಾತಿ-ವೈಷಮ್ಯ ಎಂಬ ಅಜ್ಞಾನವನ್ನು ತೊಡೆಯಲು ಶಿಕ್ಷಣದ ಮೂಲಕ ಸಾಮಾಜಿಕ ಕ್ರಾಂತಿಯ ಸಂದೇಶವನ್ನು ಸಾರಿದ್ದರು. ಶೋಷಿತ ಮತ್ತು ಹಿಂದುಳಿದ ವರ್ಗಗಳಿಗೆ ಸಾಮಾಜಿಕ ಸಮಾನತೆಯನ್ನು ದೊರಕಿಸಿಕೊಟ್ಟ ಮಹಾನ್ ಸಂತರು ಅವರು’ ಎಂದರು.

ADVERTISEMENT

ಕುಂದಾಪುರ ತಹಶೀಲ್ದಾರ್ ಕಿರಣ್ ಜಿ. ಗೌರಯ್ಯ ನಾರಾಯಣ ಗುರುಗಳ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿದರು.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರಾಘವೇಂದ್ರ ವರ್ಣೆಕರ್, ಬಿಲ್ಲವ ಸಮಾಜದ ಪ್ರಮುಖರಾದ ಮಂಜು ಬಿಲ್ಲವ, ರಾಜು ಪೂಜಾರಿ ಜಡ್ಕಲ್ ಮಾತನಾಡಿದರು.

ಕುಂದಾಪುರ ಡಿವೈಎಸ್‌ಪಿ ಶ್ರೀಕಾಂತ್ ಕೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ವೇತಾ ಎನ್, ಉಪ ತಹಶೀಲ್ದಾರ್ ಚಂದ್ರಶೇಖರ್, ಬಿಲ್ಲವ ಸಮಾಜ ಸೇವಾ ಸಂಘದ ಕಾರ್ಯದರ್ಶಿ ಗಣೇಶ್ ವಿಠಲವಾಡಿ, ಉಪಾಧ್ಯಕ್ಷ ಭಾಸ್ಕರ ಬಿಲ್ಲವ, ಮಹಿಳಾ ಘಟಕಾಧ್ಯಕ್ಷೆ ಸುಮನಾ ಬಿದ್ಕಲ್‌ಕಟ್ಟೆ, ಹೇಮಾವತಿ, ಜಾನಕಿ ಬಿಲ್ಲವ, ಶೈಕ್ಷಣಿಕ ಹಾಗೂ ದತ್ತಿ ಸಂಸ್ಥೆಯ ಕಾರ್ಯದರ್ಶಿ ಭಾಸ್ಕರ ವಿಠಲವಾಡಿ, ನಾರಾಯಣ ಗುರು ಯುವಕ ಮಂಡಲದ ಅಧ್ಯಕ್ಷ ಅಜಿತ್, ಪ್ರಮುಖರಾದ ದಿವಾಕರ ಕಡ್ಗಿಮನೆ, ರಾಜೇಶ್ ಕಡ್ಗಿಮನೆ, ಆನಂದ ಕೊಡೇರಿ, ಯೋಗೀಶ್ ಕೋಡಿ ಇದ್ದರು.

ಉಪ ತಹಶೀಲ್ದಾರ್ ವಿನಯ್ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.