ADVERTISEMENT

ಪ್ರಧಾನಿ ಸ್ವಾಗತಕ್ಕೆ ಸಿದ್ಧತೆ ಪೂರ್ಣ: ಪುತ್ತಿಗೆ ಶ್ರೀ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2025, 4:17 IST
Last Updated 27 ನವೆಂಬರ್ 2025, 4:17 IST
<div class="paragraphs"><p>ಪುತ್ತಿಗೆ ಶ್ರೀ</p></div>

ಪುತ್ತಿಗೆ ಶ್ರೀ

   

ಉಡುಪಿ: ‘ಉಡುಪಿಯ ಶ್ರೀಕೃಷ್ಣ ಮಠಕ್ಕೆ ಇದೇ 28 ರಂದು ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದು, ಅವರನ್ನು ಸ್ವಾಗತಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಸ್ವಾಮೀಜಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ಮಧ್ಯಾಹ್ನ 12 ಗಂಟೆಗೆ ಪ್ರಧಾನಿಯವರು ಕೃಷ್ಣಮಠಕ್ಕೆ ಬರಲಿದ್ದು, ಮೊದಲು ಕನಕದಾಸರಿಗೆ ಪುಷ್ಪಾರ್ಚನೆ ಮಾಡುವರು ಬಳಿಕ ಕನಕನ ಕಿಂಡಿಗೆ ಹೊದಿಸಿರುವ ಚಿನ್ನದ ಕವಚ, ಸುವರ್ಣ ತೀರ್ಥ ಮಂಟಪವನ್ನು ಅನಾವರಣಗೊಳಿಸುವರು ’ ಎಂದು ಹೇಳಿದರು.

ADVERTISEMENT

‘ಪೂರ್ಣಕುಂಭ ಸ್ವಾಗತದೊಂದಿಗೆ ಪ್ರಧಾನಿಯವರನ್ನು ಬರಮಾಡಿಕೊಳ್ಳಲಿದ್ದು, ಶ್ರೀಕೃಷ್ಣ, ಮುಖ್ಯಪ್ರಾಣ ದೇವರ ಹಾಗೂ ಸುವರ್ಣ ಪಾದುಕೆಯ ದರ್ಶನ ಮಾಡಲಿದ್ದಾರೆ. ಬಳಿಕ ಅವರಿಗೆ ದೇವರ ಪ್ರಸಾದ ನೀಡಲಾಗುವುದು’ ಎಂದರು.

‘ಸರ್ವಜ್ಞ ಪೀಠ, ಗೋಶಾಲೆ ದರ್ಶನ ಮಾಡಿದ ಬಳಿಕ ಅವರು ಗೀತಾಮಂದಿರಕ್ಕೆ ಭೇಟಿ ನೀಡುವರು. ಅಲ್ಲಿ ಲಘು ಉಪಾಹಾರ ಸೇವಿಸುವರು. ಬಳಿಕ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಲಕ್ಷ ಕಂಠ ಗೀತಾ ಕಾರ್ಯಕ್ರಮದ ಅಂಗವಾಗಿ ಭಗವದ್ಗೀತೆಯ 18ನೇ ಅಧ್ಯಾಯದ ಕೊನೆಯ ಕೆಲವು ಶ್ಲೋಕಗಳನ್ನು ಪಠಿಸುವರು’ ಎಂದು ತಿಳಿಸಿದರು.

‘ಶ್ಲೋಕಗಳ ಪಾರಾಯಣದ ಬಳಿಕ ಪರ್ಯಾಯ ಪುತ್ತಿಗೆ ಮಠದ ವತಿಯಿಂದ ಮೋದಿ ಅವರಿಗೆ ಗೌರವ ಸಮರ್ಪಣೆ ನಡೆಯಲಿದೆ. ಮೋದಿಯವರು ಕೋಟಿ ಗೀತಾ ಲೇಖನ ಯಜ್ಷದ ದೀಕ್ಷೆಯನ್ನೂ ಪಡೆಯುವರು’ ಎಂದರು.

‘ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌, ಸಚಿವ ಬೈರತಿ ಸುರೇಶ್ ಅವರೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಸ್ವಾಗತ ಭಾಷಣ ಮಾಡುವರು. ಅಷ್ಟ ಮಠದ ಸ್ವಾಮೀಜಿಗಳಿಗೆ ಆಹ್ವಾನ ನೀಡಿದ್ದೇವೆ’ ಎಂದು ಹೇಳಿದರು.

‘ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಗಣ್ಯರಿಗೆ ಮಾತ್ರ ಪಾಸ್‌ ವ್ಯವಸ್ಥೆ ಇದ್ದು, ಉಳಿದವರಿಗೆ ಮುಕ್ತ ಪ್ರವೇಶ ಇದೆ. ಒಂದು ಲಕ್ಷ ಜನರಿಗೆ ಊಟದ ವ್ಯವಸ್ಥೆ ಮಾಡಿದ್ದೇವೆ. ಆನ್‌ಲೈನ್‌ ಮೂಲಕವೂ ಲಕ್ಷ ಕಂಠ ಗೀತಾ ಪಾರಾಯಣ ನಡೆಯಲಿದೆ ’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮಠದ ದಿವಾನ ನಾಗರಾಜ ಆಚಾರ್ಯ, ಪ್ರಸನ್ನಾಚಾರ್ಯ, ಸುಪ್ರಸಾದ್‌ ಶೆಟ್ಟಿ ಉಪಸ್ಥಿತರಿದ್ದರು.

ಪ್ರವೇಶ ನಿರ್ಬಂಧ

ಲಕ್ಷಕಂಠ ಗೀತಾ ಪಾರಾಯಣಕ್ಕೆ ಪ್ರಧಾನಿ ನರೇಂದ್ರ ಮೋದಿ ಬರುತ್ತಿರುವುದರಿಂದ ಇದೇ 28 ರಂದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 3 ಗಂಟೆಯವರೆಗೆ ಶ್ರೀ ಕೃಷ್ಣ ಮಠಕ್ಕೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಪುತ್ತಿಗೆ ಶ್ರೀ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.