ADVERTISEMENT

ಉಡುಪಿ: ಪ್ರಕೃತಿ ಮಡಿಲಲ್ಲಿ ನೆಲೆನಿಂತ ನೀಲಾವರ ಮಹಿಷ ಮರ್ಧಿನಿ

ಭಕ್ತರ ಇಷ್ಟಾರ್ಥ ಈಡೇರಿಸುವ ತಾಯಿ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2022, 15:59 IST
Last Updated 13 ಆಗಸ್ಟ್ 2022, 15:59 IST
ನೀಲಾವರದ ಮಹಿಷ ಮರ್ಧಿನಿ ದೇವಿ
ನೀಲಾವರದ ಮಹಿಷ ಮರ್ಧಿನಿ ದೇವಿ   

ಉಡುಪಿ: ಪ್ರಕೃತಿಯ ಮಡಿಲಲ್ಲಿ ಸೀತಾ ನದಿಯ ತೀರದಲ್ಲಿ ನಿರ್ಮಾಣವಾಗಿರುವ ಕರಾವಳಿಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ ನೀಲಾವರ ಮಹಿಷ ಮರ್ಧಿನಿ ದೇವಸ್ಥಾನ ಭಕ್ತರನ್ನು ಸೆಳೆಯುತ್ತಿದೆ. ಇಷ್ಟಾರ್ಥಗಳನ್ನು ಈಡೇರಿಸುವ ತಾಯಿ ಎಂದೇ ಈ ಭಾಗದಲ್ಲಿ ದೇವಸ್ಥಾನ ಪ್ರಸಿದ್ಧಿ ಹೊಂದಿದೆ.

ಹೋಗುವುದು ಹೇಗೆ:ಬ್ರಹ್ಮಾವರದಿಂದ ಕುಂಜಾಲು ಮಾರ್ಗವಾಗಿ ನೀಲಾವರದ ಮಹಿಷ ಮರ್ಧಿನಿ ದೇವಸ್ಥಾನವನ್ನು ತಲುಪಬಹುದು. ಸೂಕ್ತ ಸಾರಿಗೆ ವ್ಯವಸ್ಥೆಯೂ ಇದೆ. ನೀಲಾವರ ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿ ತ್ರಿಶೂಲ ಧಾರಿಣಿ ಮಹಿಷ ಮರ್ಧಿನಿ ಮೂರ್ತಿಯ ಭವ್ಯ ಸ್ವಾಗತ ಗೋಪುರ ಭಕ್ತರನ್ನು ಸ್ವಾಗತಿಸುತ್ತದೆ.

ಮುಂದಕ್ಕೆ ಸಾಗಿದರೆ ಸೀತಾ ನದಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಾ ಹಕ್ಕಿಗಳ ಕಲರವ, ಪ್ರಕೃತಿ ಸೊಬಗನ್ನೂ ಸವಿಯುತ್ತ ಕ್ಷೇತ್ರ ಪ್ರವೇಶಿಸಬಹುದು. ಮುಖ ಮಂಟಪ ಬಿಟ್ಟು ಮುಂದೆ ಸಾಗಿದರೆ ಸಿಂಹ ಸ್ವರೂಪಿಣಿ ಮಹಿಷ ಮರ್ಧಿನಿಯ ದೇವಸ್ಥಾನ ಎದುರಾಗುತ್ತದೆ.ಪಕ್ಕದಲ್ಲಿಯೇ ನಾಗ ದೇವರ ಗುಡಿಯೂ ಇದೆ.

ADVERTISEMENT

ದೇವಸ್ಥಾನ ಒಳ ಪ್ರವೇಶಿಸುತ್ತಿದ್ದಂತೆ ವೀರಭದ್ರ ಸ್ವಾಮಿಯ ಗುಡಿ ಸಿಗುತ್ತದೆ. ಬಲ ಬದಿಯಲ್ಲಿ ವ್ಯಾಗ್ರ ಚಾಮುಂಡಿ ದೇವರು ನೆಲೆಸಿದ್ದಾರೆ. ಸಮೀಪದಲ್ಲಿಯೇ ಗಣಪತಿ ದೇವರ ದರ್ಶನ ಮಾಡಬಹುದು.

ದೇವಸ್ಥಾನದ ಗರ್ಭ ಗುಡಿಯಲ್ಲಿರುವ ಭಕ್ತರ ಅಧಿ ದೇವತೆ ಮಹಿಷ ಮರ್ಧಿನಿಯ ದಿವ್ಯ ರೂಪವನ್ನು ಕಣ್ತುಂಬಿಕೊಳ್ಳುವುದೇ ಕಣ್ಣಿಗೆ ಹಬ್ಬ. ಹಬ್ಬ ಹರಿದಿನಗಳಲ್ಲಿ ದೇವಸ್ಥಾನದಲ್ಲಿ ಕಾಲಿಡಲು ಜಾಗವಿಲ್ಲದಷ್ಟು ಭಕ್ತರು ನೆರೆಯುತ್ತಾರೆ. ದೇವಿಯನ್ನು ನಂಬಿ ಬಂದವರನ್ನು ಹರಸುತ್ತಾಳೆ ಎನ್ನುತ್ತಾರೆ ಭಕ್ತರು.

ಕಲ್ಕುಡ ದೇವರು ಗುಡಿಯೂ ಇದ್ದು ಭಕ್ತರು ಹರಕೆ ಕಟ್ಟಿಕೊಂಡು ಸಣ್ಣ ಕಲ್ಲುಗಳನ್ನು ಇಲ್ಲಿಗೆ ಹಾಕಿ ಹೋಗುತ್ತಿದ್ದು ಕಲ್ಲಿನ ರಾಶಿಯೇ ನಿರ್ಮಾಣವಾಗಿದೆ. ಸುಬ್ರಹ್ಮಣ್ಯನ ಆರಾಧನೆ ಹಾಗೂ ಪ್ರತಿವರ್ಷ ವೃಶ್ಚಿಕ ಮಾಸದಲ್ಲಿ ಬರುವ ಪಂಚಮಿ ತೀರ್ಥಸ್ನಾನ ವಿಶೇಷವಾಗಿದೆ.

ಕ್ಷೇತ್ರದ ಇತಿಹಾಸ:ದೇವಸ್ಥಾನದ ಮೂಲ ಮೂರ್ತಿ ಮಹಿಷಾಸುರ ಮರ್ಧಿನಿ ಚತುರ್ಬಾಹು ವಿಗ್ರಹವಾಗಿದ್ದು, ಬಲಗೈಯಲ್ಲಿ ಚಕ್ರ, ಎಡಗೈನಲ್ಲಿ ಶಂಖ, ಇನ್ನೊಂದು ಕೈನಲ್ಲಿ ಮಹಿಷಾಸುರನನ್ನು ಎತ್ತಿ ಹಿಡಿದಿದ್ದರೆ, ಬಲಗೈಯಲ್ಲಿನ ತ್ರಿಶೂಲದಿಂದ ಮಹಿಷಾಸುರನತಲೆ ಇರಿಯುವಂತೆ ಹಾಗೂ ದೇವಿಯು ಬಲಗಾಲಿನಿಂದ ಮಹಿಷಾಸುರನನ್ನು ಮೆಟ್ಟಿ ಹಿಡಿದಂತೆ ಕೆತ್ತಲಾಗಿಗಿದೆ. ದಿ.ಡಾ.ಪಿ.ಗುರುರಾಜ ಭಟ್ಟರ ಅಧ್ಯಯನದ ಪ್ರಕಾರ ದೇವಿಯ ಮೂರ್ತಿ 10ನೇ ಶತಮಾನಕ್ಕೆ ಸೇರಿರಬಹುದು ಎಂದು ಹೇಳಲಾಗುತ್ತದೆ.

ಆಳುಪ ರಾಜವಂಶದ ರಾಜರು ನೀಲಾವರದ ದೇವಸ್ಥಾನದ ಬಗ್ಗೆ ಹೆಚ್ಚು ಗಮನ ಹರಿಸಿದರು. ಅರಸ ವೀರಪಾಂಡ್ಯನು 1258ರ ಫೆಬ್ರವರಿ 24ರಂದು ಹೊರಡಿಸಿರುವ ಶಾಸನದಲ್ಲಿ ಕ್ಷೇತ್ರದ ಬಗ್ಗೆ ಉಲ್ಲೇಖವಿದೆ. ಆಳುಪ ರಾಣಿ ಚಲ್ಲ ಮಹಾದೇವಿಯ ಪ್ರಥಮ ಶಾಸನ ನೀಲಾವರದಲ್ಲಿ ಲಭ್ಯವಾಗಿದೆ. ಹೊಯ್ಸಳರ ಆಳ್ವಿಕೆಯ ಪ್ರಥಮ ಶಾಸನವೂ ನೀಲಾವರದಲ್ಲಿದೆ.

ಆಳುಪರ ಬಳಿಕ ಅಧಿಕಾರಕ್ಕೆ ಬಂದ ವಿಜಯನಗರ ಅರಸರ ಕಾಲದಲ್ಲಿಯೂ ನೀಲಾವರ ಪ್ರಸಿದ್ಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕೇಂದ್ರವಾಗಿತ್ತು. ಕ್ರಿ.ಶ 1387ರ ಇಮ್ಮಡಿ ಹರಿಹರನ ನೀಲಾವರದ ಶಾಸನವು ದೇವಾಲಯದ ಜೀರ್ಣೋದ್ದಾರದ ಬಗ್ಗೆ ತಿಳಿಸುತ್ತದೆ. 1528ರ ವಿಜಯನಗರದ ಪ್ರಮುಖ ರಾಜ ಕೃಷ್ಣ ದೇವರಾಯನ ಶಾಸನ ತುಂಬಾ ಪ್ರಾಮುಖ್ಯವಾಗಿದೆ.

ಕರಾವಳಿಯ ಪ್ರಸಿದ್ಧ ದೇಗುಲ
ಕರಾವಳಿಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿ ಗುರುತಿಸಿಕೊಂಡಿರುವ ನೀಲಾವರ ಮಹಿಷ ಮರ್ಧಿನಿ ದೇವಸ್ಥಾನ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಮೂಲಕ ದಿನೇ ದಿನೇ ಸಾವಿರಾರು ಭಕ್ತರನ್ನು ಸೆಳೆಯುತ್ತಿದೆ. ಭಕ್ತರ ಸಹಕಾರದಿಂದ ದೇವಸ್ಥಾನದಲ್ಲಿ ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ನಡೆಯುತ್ತಿವೆ. ಶಾಸಕರ ವಿಶೇಷ ಅನುದಾನ ಬಳಸಿಕೊಂಡು ಸಣ್ಣ ನೀರಾವರಿ ಇಲಾಖೆಯಿಂದ 3 ಕೋಟಿ ವೆಚ್ಚದಲ್ಲಿ ಶೃಂಗೇರಿ ದೇವಸ್ಥಾನದ ಮಾದರಿಯಲ್ಲಿ ಸ್ನಾನಘಟ್ಟ ನಿರ್ಮಾಣ ಕಾಮಗಾರಿ ಶೇ 80ರಷ್ಟು ಪೂರ್ಣಗೊಂಡಿದೆ. ಹೊಳೆ ಬದಿ ಕಾಂಕ್ರಿಟ್ ವಾಲ್ ನಿರ್ಮಿಸಿ ಭಕ್ತರನ್ನು ಸೆಳೆಯಲು ವಿಶೇಷ ಬೆಳಕಿನ ವ್ಯವಸ್ಥೆ ಮಾಡಲಾಗಿದೆ. ದೇವಸ್ಥಾನದಲ್ಲಿ ಅನ್ನ ಸಂತರ್ಪಣೆ ನಡೆಯುತ್ತಿದ್ದು, ಮಂದಾರ್ತಿ ದೇವಸ್ಥಾನಕ್ಕೆ ತೆರಳುವ ಭಕ್ತರು ನೀಲಾವರದ ಮಹಿಷ ಮರ್ಧಿನಿ ದೇವಿಯ ದರ್ಶನ ಪಡೆದು ಅನ್ನ ಪ್ರಸಾದ ಸ್ವೀಕರಿಸುತ್ತಿದ್ದಾರೆ. ದೇವಸ್ಥಾನಕ್ಕೆ ಹೆಬ್ಬಾಗಿಲು ನಿರ್ಮಾಣ, ದೇವಸ್ತಾನದ ಸುತ್ತಲೂ ಕಲ್ಲು ಚಪ್ಪಡಿ ಹಾಸು ಹಾಗೂ ಆಡಳಿತ ಕಚೇರಿ ಕೆಲಸ ಬಾಕಿ ಇದ್ದು ಶೀಘ್ರ ನಡೆಯಲಿದೆ ಎಂದು ನೀಲಾವರ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹೇಂದ್ರ ಕುಮಾರ್ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.