ADVERTISEMENT

ಯುವಜನತೆಗೆ ಸ್ವಉದ್ಯೋಗ ಮಾಹಿತಿ ಕಾರ್ಯಕ್ರಮ ಆಯೋಜಿಸಿ

ಅಧಿಕಾರಿಗಳಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು ಸೂಚನೆ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2021, 14:55 IST
Last Updated 10 ಆಗಸ್ಟ್ 2021, 14:55 IST
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನೆಹರೂ ಯುವ ಕೇಂದ್ರದ ವಾರ್ಷಿಕ ಕ್ರಿಯಾ ಯೋಜನೆ ಅನುಷ್ಠಾನ ಕುರಿತ ಸಭೆ ನಡೆಯಿತು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನೆಹರೂ ಯುವ ಕೇಂದ್ರದ ವಾರ್ಷಿಕ ಕ್ರಿಯಾ ಯೋಜನೆ ಅನುಷ್ಠಾನ ಕುರಿತ ಸಭೆ ನಡೆಯಿತು.   

ಉಡುಪಿ: ಪದವಿ ಮುಗಿಸಿದ ಬಳಿಕ ಸ್ವಂತ ಉದ್ಯೋಗ ಮಾಡಲು ಬಯಸುವ ಯುವ ಜನತೆಗೆ ಕಾಲೇಜು ಹಂತದಲ್ಲಿಯೇ ಸ್ವ ಉದ್ಯೋಗ ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ನೆಹರೂ ಯುವ ಕೇಂದ್ರದ ಅಧಿಕಾರಿಗಳಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನೆಹರೂ ಯುವ ಕೇಂದ್ರದ ವಾರ್ಷಿಕ ಕ್ರಿಯಾ ಯೋಜನೆ ಅನುಷ್ಠಾನ ಕುರಿತ ಸಭೆಯಲ್ಲಿ ಮಾತನಾಡಿ, ಯುವ ಜನತೆ ಪದವಿ ನಂತರ ಭವಿಷ್ಯ ಕಟ್ಟಿಕೊಳ್ಳಲು ಪೂರಕವಾಗುವಂತೆ, ಅಂತಿಮ ವರ್ಷದ ಪದವಿ ಓದುವಾಗಲೇ ಸ್ವ ಉದ್ಯೋಗಗಳ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ಕಾರ್ಯಕ್ರಮ ಆಯೋಜಿಸಬೇಕು.

ಕಾರ್ಯಕ್ರಮಗಳಿಗೆ ಲೀಡ್‌ ಬ್ಯಾಂಕ್‌ ಅಧಿಕಾರಿಗಳನ್ನು ಆಹ್ವಾನಿಸಿ, ಸ್ವಯಂ ಉದ್ಯೋಗಕ್ಕೆ ಬ್ಯಾಂಕ್‌ಗಳು ನೀಡುವ ವಿವಿಧ ಬಗೆಯ ಸಾಲಗಳ ಮಾಹಿತಿ, ಸಬ್ಸಿಡಿ ಮೊತ್ತದ ಬಗ್ಗೆ ಸಮಗ್ರ ವಿವರಗಳನ್ನು ನೀಡಬೇಕು ಎಂದರು.

ADVERTISEMENT

ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸ್ವಉದ್ಯೋಗಕ್ಕೆ ಅನುಕೂಲವಾಗುವಂತೆ ಇರುವ ಯೋಜನೆಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಸಮಗ್ರ ಮಾಹಿತಿ ನೀಡಬೇಕು. ಕೇಂದ್ರ ಸರ್ಕಾರ ಸ್ಟಾರ್ಟ್ ಆ್ಯಪ್‌ಗಳನ್ನು ಆರಂಭಿಸಲು ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಆತ್ಮ ನಿರ್ಭರ ಯೋಜನೆಯಡಿ ಉದ್ದಿಮೆ ಆರಂಭಿಸಲು ಅವಕಾಶಗಳಿದ್ದು, ಇದರ ಬಗ್ಗೆ ಯುವಕರಿಗೆ ಮಾಹಿತಿ ಹಾಗೂ ಮಾರ್ಗದರ್ಶನ ನೀಡಬೇಕು ಎಂದರು.

ಯುವ ಶಕ್ತಿಯನ್ನು ಜಿಲ್ಲೆಯ ಅಭಿವೃದ್ದಿಗೆ ಪೂರಕವಾಗಿ ಬಳಕೆಯಾಗುವ ಕುರಿತು ವಾರ್ಷಿಕ ಕ್ರಿಯಾ ಯೋಜನೆ ರೂಪಿಸಬೇಕು. ಪ್ರಾಕೃತಿಕ ವಿಕೋಪಗಳು ಎದುರಾದಾಗ ಸಮಾಜದ ನೆರವಿಗೆ ದಾವಿಸುವ ಬಗ್ಗೆ ಜಾಗೃತಿ ಮೂಡಿಸಬೇಕು. ಈ ಸಂಬಂಧ ಯುವಕ ಸಂಘಗಳಿಗೆ ತರಬೇತಿ ನೀಡಬೇಕು. ಗಾಂಧಿ ಜಯಂತಿಯಂದು ಜಿಲ್ಲೆಯ ಎಲ್ಲ ಬೀಚ್‌ಗಳಲ್ಲಿ ಸ್ವಚ್ಚತಾ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಜಲಶಕ್ತಿ ಅಭಿಯಾನ, ನಶಾ ಮುಕ್ತ ಭಾರತದಂತಹ ಕಾರ್ಯಕ್ರಮಗಳಲ್ಲಿ ಯುವಜನತೆಯ ಸಹಭಾಗಿತ್ವ ಪಡೆಯಬೇಕು ಎಂದರು.

ಯುವಕ ಸಂಘಗಳು ಕೋವಿಡ್ ಸಂದರ್ಭದಲ್ಲಿ ಸಾರ್ವಜನಿಕರಿಗೆ ನೆರವು ನೀಡಿವೆ. ಮಾಸ್ಕ್‌ಗಳ ವಿತರಣೆ, ಅಶಕ್ತರಿಗೆ ಆಹಾರ ವಿತರಣೆ ಮಾಡಿವೆ. ಸ್ವಯಂ ಸೇವಕರಾಗಿ ನೆರವಿಗೆ ದಾವಿಸಿದ್ದಾರೆ ಎಂದು ಎಡಿಸಿ ಶ್ಲಾಘಿಸಿದರು.

ನೆಹರೂ ಯುವ ಕೇಂದ್ರದ ವಿಷ್ಣುಮೂರ್ತಿ ಕ್ರಿಯಾ ಯೋಜನೆಯ ವಿವರ ನೀಡಿದರು. ಸಭೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಯುವಕ ಸಂಘಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.