ADVERTISEMENT

ಶಿರೂರು: ಹೆದ್ದಾರಿ ಸಂಪರ್ಕ ರಸ್ತೆಗೆ ಒತ್ತಾಯ

ಬದಲಿ ರಸ್ತೆ ನಿರ್ಮಿಸದ ಗುತ್ತಿಗೆ ಕಂಪನಿ, ಪ್ರತಿಭಟನೆಗೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2019, 14:45 IST
Last Updated 25 ಅಕ್ಟೋಬರ್ 2019, 14:45 IST
ಸಂಪರ್ಕ ರಸ್ತೆ ತುಂಡರಿಸಿರುವುದು
ಸಂಪರ್ಕ ರಸ್ತೆ ತುಂಡರಿಸಿರುವುದು   

ಬೈಂದೂರು: ಶಿರೂರಿನಲ್ಲಿ ನಡೆದ ಚತುಷ್ಪಥ ಹೆದ್ದಾರಿ ಕಾಮಗಾರಿಯಿಂದ ಗ್ರಾಮ ಪಂಚಾಯಿತಿ ಕಚೇರಿ, ಪ್ರಾಥಮಿಕ ಆರೋಗ್ಯ ಕೇಂದ್ರ್ರ, ಶಾಲೆ, ವಸತಿ ಪ್ರದೇಶ, ವ್ಯವಸಾಯ ಸೇವಾ ಸಹಕಾರಿ ಸಂಘ ಮುಂತಾದೆಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಬದಲಿ ರಸ್ತೆ ನಿರ್ಮಿಸುವ ಗುತ್ತಿಗೆದಾರ ಕಂಪನಿ ಐಆರ್‌ಬಿ ಭರವಸೆ ಅನುಷ್ಠಾನಗೊಂಡಿಲ್ಲ. ಹೀಗಾಗಿ ಇಲ್ಲಿನ ಜನರು ಪ್ರತಿಭಟನೆಗೆ ಸಿದ್ಧರಾಗಿದ್ದಾರೆ.

ಹೆದ್ದಾರಿಯಿಂದ ಪಕ್ಕದಲ್ಲೇ ಇರುವ ವಿವಿಧ ಸಂಸ್ಥೆಗಳಿಗೆ ಜನರು, ವಾಹನ ಚಲಿಸುತ್ತಿದ್ದ ಡಾಂಬರ್‌ ರಸ್ತೆ ಇದು . ಅದೇ ರಸ್ತೆಯ ಮೂಲಕ ಆಲಂದೂರು, ಅರಮನೆಹಕ್ಲು ಪ್ರದೇಶಗಳ ನಿವಾಸಿಗಳೂ ಓಡಾಡಬೇಕು. ನಾಲ್ಕು ತಿಂಗಳ ಹಿಂದೆ ಹೆದ್ದಾರಿ ನಿರ್ಮಾಣ ಕಾಮಗಾರಿಗಾಗಿ ಸಂಪರ್ಕ ರಸ್ತೆಯನ್ನು ಕಡಿದು ಹಾಕಲಾಯಿತು. ರಸ್ತೆಯು ಹೆದ್ದಾರಿಗಿಂತ 5 ಅಡಿಗಳಷ್ಟು ಎತ್ತರದಲ್ಲಿದೆ. ರಸ್ತೆಯನ್ನೂ ಹೆದ್ದಾರಿಯನ್ನು ಜೋಡಿಸುವ ಕೆಲಸ ಆಗಿಲ್ಲ.

‘ರಸ್ತೆ ಹೆದ್ದಾರಿ ಸೇರುವಲ್ಲಿ ಕಲ್ಲು, ಮಣ್ಣು ಸುರಿಯಲಾಗಿದೆ. ಕನಿಷ್ಠ ಪಕ್ಷ ರಸ್ತೆಯನ್ನು ಇಳಿಜಾರುಗೊಳಿಸಿ ಅದಕ್ಕೆ ಹೆದ್ದಾರಿಯಿಂದ ಮೊದಲಿನಂತೆ ನೇರ ಸಂಪರ್ಕ ಕಲ್ಪಿಸಬಹುದಿತ್ತು. ಅದನ್ನು ಮಾಡಲಿಲ್ಲ. ಹೆದ್ದಾರಿಗೆ ಸಮಾನಾಂತರವಾಗಿ ಸರ್ವೀಸ್ ರಸ್ತೆ ನಿರ್ಮಿಸಿ ಅದನ್ನು ಎರಡು ಕಡೆ ಹೆದ್ದಾರಿಗೆ ಸಂಪರ್ಕಿಸಬಹುದಿತ್ತು. ಅದೂ ಆಗಲಿಲ್ಲ’ ಎಂಬುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ADVERTISEMENT

‘ಜನರು ಈಗ ಹೆದ್ದಾರಿ ಮತ್ತು ಖಾಸಗಿ ಕಟ್ಟಡಗಳ ಆವರಣದ ನಡುವೆ ಇರುವ ಕಿರಿದಾದ ಸ್ಥಳದಲ್ಲಿ ಸುತ್ತು ಬಳಸಿ ಸಂಪರ್ಕ ರಸ್ತೆಗೆ ಬರುತ್ತಿದ್ದಾರೆ. ಪ್ರತಿದಿನ ನೂರಾರು ಜನರು ಕಚೇರಿ ಕೆಲಸ, ಅಸ್ವಸ್ಥರು ಚಿಕಿತ್ಸೆಗೆ ಓಡಾಡಬೇಕಾದ ರಸ್ತೆ ನಿರ್ಮಾಣದ ಬಗ್ಗೆ ಕಂಪನಿಯ ಧೋರಣೆ ಅಕ್ಷಮ್ಯ; ಜನವಿರೋಧಿ ನಡೆಗೆ ಸಾಕ್ಷಿ’ ಎಂದು ಸಾರ್ವಜನಿಕರು ದೂರಿದ್ದಾರೆ. ‘ಹೆದ್ದಾರಿ ಹೆಸರಿನಲ್ಲಿ ಜನರಿಗೆ ತೊಂದರೆ ಉಂಟುಮಾಡುವುದು ಎಷ್ಟು ಸರಿ’ ಎಂದು ಪ್ರಶ್ನಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.