ADVERTISEMENT

ಸಂಪೂರ್ಣ ಒಡಿಎಫ್‌ ಪ್ಲಸ್‌–1 ಜಿಲ್ಲೆಯತ್ತ ಉಡುಪಿ: ಸಿಇಒ ಡಾ.ವೈ. ನವೀನ್ ಭಟ್‌

ನಿಟ್ಟೆಯಲ್ಲಿ ಶೀಘ್ರ ಕೇಂದ್ರೀಕೃತ ಘನ ತ್ಯಾಜ್ಯ ಸಂಸ್ಕರಣ ಘಟಕ ಕಾರ್ಯಾರಂಭ

ಪ್ರಜಾವಾಣಿ ವಿಶೇಷ
Published 18 ಆಗಸ್ಟ್ 2021, 14:55 IST
Last Updated 18 ಆಗಸ್ಟ್ 2021, 14:55 IST
ಡಾ.ವೈ.ನವೀನ್ ಭಟ್‌, ಜಿಲ್ಲಾ ಪಂಚಾಯಿತಿ ಸಿಇಒ
ಡಾ.ವೈ.ನವೀನ್ ಭಟ್‌, ಜಿಲ್ಲಾ ಪಂಚಾಯಿತಿ ಸಿಇಒ   

ಉಡುಪಿ: ಜಿಲ್ಲೆಯು ವೈಯಕ್ತಿಕ ಗೃಹ ಶೌಚಾಲಯ ನಿರ್ಮಾಣದಲ್ಲಿ ಈಗಾಗಲೇ ಬಯಲು ಶೌಚಮುಕ್ತ ಜಿಲ್ಲೆಯಾಗಿದ್ದು, ಇದೀಗ ಒಡಿಎಫ್‌ ಪ್ಲಸ್‌–1 (ಒಪನ್‌ ಡಿಫೆಕ್ಷನ್ ಫ್ರೀ) ಜಿಲ್ಲೆಯಾಗಿಸಲು ಕಾರ್ಯಯೋಜನೆ ರೂಪಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ.ವೈ.ನವೀನ್ ಭಟ್ ತಿಳಿಸಿದ್ದಾರೆ.

ಜಿಲ್ಲೆಯನ್ನು ಸಂಪೂರ್ಣ ಒಡಿಎಫ್‌ ಪ್ಲಸ್‌–1 ಎಂದು ಘೋಷಿಸಲು ಎಲ್ಲ ಗ್ರಾಮಗಳಲ್ಲಿ ಶೌಚಾಲಯಗಳ ನಿರ್ಮಾಣ, ಬಳಕೆ, ನಿರ್ವಹಣೆ, ಘನತ್ಯಾಜ್ಯ ನಿರ್ವಹಣೆ, ಸಮುದಾಯ ಶೌಚಾಲಯಗಳ ನಿರ್ಮಾಣ ಹಾಗೂ ಬಳಕೆಯ ಬಗ್ಗೆ ಪರಿಶೀಲಿಸುವ ಕಾರ್ಯ ನಡೆಯುತ್ತಿದೆ. ಜಿಲ್ಲೆಯಲ್ಲಿ 2020-21ನೇ ಸಾಲಿನಲ್ಲಿ 1,369 ವೈಯಕ್ತಿಕ ಗೃಹ ಶೌಚಾಲಯಗಳ ಗುರಿ ಇದ್ದು, ಈಗಾಗಲೇ 1,369 ಶೌಚಾಲಯ ನಿರ್ಮಾಣಕ್ಕೆ ಕಾರ್ಯಾದೇಶ ನೀಡಲಾಗಿದೆ. ತ್ಯಾಜ್ಯ ನಿರ್ವಹಣೆಯಲ್ಲಿ ಜಿಲ್ಲೆಯ 131 ಗ್ರಾಮ ಪಂಚಾಯಿತಿಗಳಲ್ಲಿ ಘನ ತ್ಯಾಜ್ಯವನ್ನು ಮನೆಯ ಹಂತದಲ್ಲಿಯೇ ಬೇರ್ಪಡಿಸಿ ಸ್ವಸಹಾಯ ಸಂಘಗಳ ಮೂಲಕ ಸಂಗ್ರಹಿಸಿ ವೈಜ್ಞಾನಿಕವಾಗಿ ನಿರ್ವಹಿಸಲಾಗುತ್ತಿದೆ ಎಂದು ಸಿಇಒ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಒಣ ತ್ಯಾಜ್ಯ ಸಂಗ್ರಹಣೆ ಹಾಗೂ ನಿರ್ವಹಣೆಗೆ ಒತ್ತು ನೀಡಲಾಗುತ್ತಿದ್ದು, ಹಸಿ ತ್ಯಾಜ್ಯವನ್ನು ಮನೆ ಹಂತದಲ್ಲಿಯೇ ನಿರ್ವಹಣೆ ಮಾಡಲು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಒಣ ತ್ಯಾಜ್ಯ ಸಂಗ್ರಹಣೆಗೆ ನೀಲಿ ಬಣ್ಣದ ಬ್ಯಾಗ್ ವಿತರಣೆ, ಹಾಗೂ 92 ಗ್ರಾಮ ಪಂಚಾಯಿತಿಗಳಿಗೆ ಒಣ ತ್ಯಾಜ್ಯ ಸಂಗ್ರಹಣೆಗೆ ಸ್ವಚ್ಚ ವಾಹಿನಿ ವಾಹನಗಳನ್ನು ವಿತರಿಸಲಾಗಿದೆ.

ADVERTISEMENT

ರಾಜ್ಯದಲ್ಲಿ ಪ್ರಾಯೋಗಿಕವಾಗಿ ಉಡುಪಿ ಜಿಲ್ಲೆಯ 80 ಬಡಗಬೆಟ್ಟು ಹಾಗೂ ಕಾರ್ಕಳ ತಾಲ್ಲೂಕಿನ ಕುಕ್ಕುಂದೂರು ಗ್ರಾಮ ಪಂಚಾಯಿತಿಯಲ್ಲಿ ಮಲ ತ್ಯಾಜ್ಯ ನಿರ್ವಹಣಾ ಘಟಕ ಆರಂಭವಾಗುತ್ತಿದೆ. ಕೊಲ್ಲೂರು ಹಾಗೂ ಮಂದಾರ್ತಿ ದೇವಸ್ಥಾನಗಳಲ್ಲಿ ಹಸಿ ತ್ಯಾಜ್ಯ ನಿರ್ವಹಣೆಗೆ ಗೋಬರ್ ಧನ್ ಯೋಜನೆಯಡಿ ಬಯೋ ಗ್ಯಾಸ್ ಘಟಕಗಳು ಮಂಜೂರಾಗಿದೆ. ವಂಡ್ಸೆ ಹಾಗೂ ನಿಟ್ಟೆ ಗ್ರಾಮ ಪಂಚಾಯಿತಿಗಳಿಗೂ ಘಟಕ ಮಂಜೂರಾಗಿದ್ದು, ಅನುಷ್ಠಾನ ಪ್ರಗತಿಯಲ್ಲಿದೆ ಎಂದು ಸಿಇಒ ಡಾ.ವೈ.ನವೀನ್ ಭಟ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.