ADVERTISEMENT

ಎಲ್ಲರೂ ಒಂದಾಗಿ ಆಚರಿಸುವ ಹಬ್ಬ ಓಣಂ: ಕೇರಳ ಶಾಸಕ ಮುಕೇಶ್‌

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2025, 4:50 IST
Last Updated 1 ಸೆಪ್ಟೆಂಬರ್ 2025, 4:50 IST
ಓಣಂ ಹಬ್ಬದ ಅಂಗವಾಗಿ ಹೂವಿನ ರಂಗೋಲಿ ಹಾಕಲಾಗಿತ್ತು
ಓಣಂ ಹಬ್ಬದ ಅಂಗವಾಗಿ ಹೂವಿನ ರಂಗೋಲಿ ಹಾಕಲಾಗಿತ್ತು   

ಉಡುಪಿ: ಜಾತಿ, ಮತ ಭೇದವಿಲ್ಲದೆ ಎಲ್ಲರೂ ಒಂದಾಗಿ ಆಚರಿಸುವ ಹಬ್ಬ ಓಣಂ. ಲೋಕದ ಯಾವ ದೇಶಕ್ಕೆ ಹೋದರೂ ಅಲ್ಲಿ ಮಲಯಾಳಿಗಳಿರುತ್ತಾರೆ, ಅವರ ಸಂಘಗಳಿರುತ್ತವೆ ಮತ್ತು ಓಣಂ ಆಚರಣೆ ಇರುತ್ತದೆ ಎಂದು ಕೇರಳದ ಕೊಲ್ಲಂನ ಶಾಸಕ ಹಾಗೂ ಚಿತ್ರನಟ ಮುಕೇಶ್‌ ಹೇಳಿದರು.

ಕೇರಳ ಕಲ್ಚರಲ್ ಆ್ಯಂಡ್‌ ಸೋಷಿಯಲ್‌ ಸೆಂಟರ್‌ ಉಡುಪಿ ವತಿಯಿಂದ ಅಂಬಲಪಾಡಿಯ ಶಾಮಿಲಿ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಓಣಂ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶತಮಾನಗಳ ಹಿಂದೆ ಕೇರಳದಲ್ಲಿ ಎಲ್ಲರೂ ಒಂದಾಗಿ ಓಣಂ ಆಚರಿಸಲು ಸ್ವಾತಂತ್ರ್ಯವಿರಲಿಲ್ಲ. ಆದರೆ, ಸಮಾಜ ಸುಧಾರಕರಾದ ನಾರಾಯಣಗುರು, ಅಯ್ಯಂಕಾಳಿ ಮೊದಲಾದವರ ಹೋರಾಟದ ಫಲವಾಗಿ ನಮಗೆ ಜೊತೆಯಾಗಿ ಓಣಂ ಆಚರಿಸುವ ಸ್ವಾತಂತ್ರ್ಯ ಸಿಕ್ಕಿದೆ ಎಂದರು.

ADVERTISEMENT

ನಾವೆಲ್ಲರೂ ಶಿಕ್ಷಣ ಪಡೆದು, ಜಾತಿ ಬೇರೆ ಬೇರೆಯಾದರೂ ನಾವೆಲ್ಲರೂ ಒಂದೇ ಎಂಬ ಚಿಂತನೆಯನ್ನು ಯಾವಾಗ ಬೆಳೆಸಿಕೊಂಡೆವೋ ಅಂದಿನಿಂದ ನಮಗೆ ಒಟ್ಟಾಗಿ ಹಬ್ಬ ಆಚರಿಸುವ ಸ್ವಾತಂತ್ರ್ಯ ಸಿಕ್ಕಿದೆ ಎಂದು ಹೇಳಿದರು.

ಕೇರಳ ಕಲ್ಚರಲ್ ಆ್ಯಂಡ್‌ ಸೋಷಿಯಲ್‌ ಸೆಂಟರ್‌ ಅಧ್ಯಕ್ಷ ಸುಗುಣ ಕುಮಾರ್‌ ಅಧ್ಯಕ್ಷತೆ ವಹಿಸಿದ್ದರು. ಮಣಿಪಾಲದ ಪ್ರಸನ್ನ ಸ್ಕೂಲ್‌ ಆಫ್‌ ಪಬ್ಲಿಕ್‌ ಹೆಲ್ತ್‌ನ ನಿರ್ದೇಶಕ ಚೆರಿಯನ್‌ ವರ್ಗೀಸ್‌, ಅಭಿಲಾಶ್‌ ನಾಯರ್‌, ಶ್ರೀಕುಮಾರ್‌, ಟಿ.ಕೆ. ರಾಜನ್‌, ಶಿನೋದ್‌ ಟಿ.ಆರ್‌., ಬಿನೀಶ್‌ ವಿ.ಸಿ., ಶೈನಿ ಸತ್ಯಭಾಮ. ರಾಜನ್‌ ಜಿ. ಪಿಲಿಪ್ಸ್‌ ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮಕ್ಕೂ ಮೊದಲು ಕೇರಳದ ಸಂಸ್ಕೃತಿಯನ್ನು ಬಿಂಬಿಸುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಲಯಾಳಿಗಳು ಮಧ್ಯಾಹ್ನ ಓಣಂ ಸದ್ಯ (ಓಣಂ ಊಟ) ಸವಿದರು. ಸಭಾಂಗಣದಲ್ಲಿ ಆಕರ್ಷಕ ಪೂಕ್ಕಳಂ (ಹೂವಿನ ರಂಗೋಲಿ) ಹಾಕಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.