ADVERTISEMENT

ನಿಟ್ಟೂರು ಶಾಲೆ ಅಭಿವೃದ್ಧಿಗೆ ₹ 1 ಕೋಟಿ ದೇಣಿಗೆ

ನಿಟ್ಟೂರು ಪ್ರೌಢ ಶಾಲೆಯಲ್ಲಿ ಹೆಗ್ಗುಂಜೆ ರಾಜೀವ ಶೆಟ್ಟಿ ಸಭಾಂಗಣ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2022, 15:54 IST
Last Updated 1 ಆಗಸ್ಟ್ 2022, 15:54 IST
ಉಡುಪಿಯ ನಿಟ್ಟೂರು ಪ್ರೌಢಶಾಲೆಯ ಅಭಿವೃದ್ಧಿಗೆ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್‌ ಅಧ್ಯಕ್ಷರಾದ ಎಚ್.ಎಸ್.ಶೆಟ್ಟಿ ಅವರು ₹ 1 ಕೋಟಿ ಮೊತ್ತದ ಚೆಕ್‌ ದೇಣಿಗೆ ನೀಡಿದರು.
ಉಡುಪಿಯ ನಿಟ್ಟೂರು ಪ್ರೌಢಶಾಲೆಯ ಅಭಿವೃದ್ಧಿಗೆ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್‌ ಅಧ್ಯಕ್ಷರಾದ ಎಚ್.ಎಸ್.ಶೆಟ್ಟಿ ಅವರು ₹ 1 ಕೋಟಿ ಮೊತ್ತದ ಚೆಕ್‌ ದೇಣಿಗೆ ನೀಡಿದರು.   

ಉಡುಪಿ: ಉಡುಪಿಯ ನಿಟ್ಟೂರು ಪ್ರೌಢಶಾಲೆಯ ಅಭಿವೃದ್ಧಿಗೆ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್‌ ಅಧ್ಯಕ್ಷರಾದ ಎಚ್.ಎಸ್.ಶೆಟ್ಟಿ ₹ 1 ಕೋಟಿ ದೇಣಿಗೆ ನೀಡಿದರು.

ಸೋಮವಾರ ಶಾಲೆಯಲ್ಲಿ ಹೆಗ್ಗುಂಜೆ ರಾಜೀವ ಶೆಟ್ಟಿ ಸಭಾಂಗಣ ಮತ್ತು ವೇದಿಕೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಕಿವಿಮಾತು ಹೇಳಿದರು.

ದೇಶವನ್ನು ಮುನ್ನಡೆಸುವ ಮಹಾ ನಾಯಕರು ಹುಟ್ಟಿದ್ದು ಗ್ರಾಮೀಣ ಪ್ರದೇಶಗಳಲ್ಲಿ. ಓದಿದ್ದು ಮಾತೃ ಭಾಷೆಯಲ್ಲಿ. ಕನ್ನಡ ಮಾಧ್ಯಮ ಶಾಲೆಗಳು ವಿದ್ಯಾರ್ಥಿಗಳಲ್ಲಿ ಅದಮ್ಯ, ಆತ್ಮವಿಶ್ವಾಸ ತುಂಬುವ, ಸಂಪ್ರದಾಯ ಮತ್ತು ಸಂಸ್ಕೃತಿಯ ಸೊಗಡನ್ನು ಮೈಗೂಡಿಸುವ ಕೇಂದ್ರಗಳಾಗಿವೆ. ಹಲವು ಕ್ಷೇತ್ರಗಳಲ್ಲಿ ದಾಖಲೆಗಳನ್ನು ನಿರ್ಮಿಸಿರುವ ನಿಟ್ಟೂರು ವಿದ್ಯಾಸಂಸ್ಥೆಗೆ ಧನಸಹಾಯ ಮಾಡುತ್ತಿರುವುದು ಅತೀವ ಸಂತಸ ತಂದಿದೆ ಎಂದರು.

ADVERTISEMENT

ಇಂಧನ ಹಾಗೂ ಕನ್ನಡ ಮತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಮಾತನಾಡಿ, ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಏಳಿಗೆಗಾಗಿ ಸರ್ಕಾರ ಹಲವು ಯೋಜನೆಗಳನ್ನು ಹಮ್ಮಿಕೊಂಡಿದ್ದು, ಎಚ್.ಎಸ್. ಶೆಟ್ಟಿ ಅವರಂತಹ ಮಹಾದಾನಿಗಳ ನೆರವು ಶ್ಲಾಘನೀಯ. ಧನಸಹಾಯ ಪಡೆದಿರುವ ಜಿಲ್ಲೆಯ ಮಾದರಿ ವಿದ್ಯಾಸಂಸ್ಥೆಯಾಗಿರುವ ನಿಟ್ಟೂರು ಪ್ರೌಢಶಾಲೆಯ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು.

ವಿಜ್ಞಾನಿ ಹಾಗೂ ಉದ್ಯಮ ತಜ್ಞ ಡಾ.ರಾಜಾ ವಿಜಯಕುಮಾರ್ ಮಾತನಾಡಿ, ಕನ್ನಡ ಮಾಧ್ಯಮ ಶಾಲೆಗಳ ಅಭ್ಯುದಯಕ್ಕಾಗಿ ಎಚ್.ಎಸ್. ಶೆಟ್ಟಿ ಅವರು ನೀಡುತ್ತಿರುವ ಕೊಡುಗೆ ಸ್ಮರಣೀಯ ಎಂದರು.

ನಿಟ್ಟೂರು ಎಜುಕೇಷನಲ್ ಸೊಸೈಟಿಯ ಅಧ್ಯಕ್ಷ ಕೆ.ರಘುಪತಿ ಭಟ್ ಮಾತನಾಡಿ, ಶಾಲೆಯ ಇತಿಹಾಸದಲ್ಲಿ ಇಂದು ಅವಿಸ್ಮರಣೀಯವಾಗಿದ್ದು, ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಧನಸಹಾಯ ಪೂರಕವಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ದಾನಿ ಎಚ್.ಎಸ್. ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಗ್ಯಾಸ್ ಸಂಪರ್ಕವಿಲ್ಲದ 12 ವಿದ್ಯಾರ್ಥಿಗಳಿಗೆ ಉಚಿತವಾಗಿ ಗ್ಯಾಸ್ ಸಂಪರ್ಕ ಕಲ್ಪಿಸಲಾಯಿತು. ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷ ಎಸ್.ವಿ. ಭಟ್ ಸ್ವಾಗತಿಸಿದರು. ಆಡಳಿತ ಮಂಡಳಿಯ ಕಾರ್ಯದರ್ಶಿ ಮುರಳಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಶಿಕ್ಷಕಿ ಅನಸೂಯ ಧನ್ಯವಾದ ಸಮರ್ಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.