ADVERTISEMENT

‘ಉಚಿತ’ ಆಮಿಷಕ್ಕೆ ಬಿದ್ದರೆ ಖಾತೆ ಖಾಲಿ

ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಸೈಬರ್ ಅಪರಾಧ ಪ್ರಕರಣ: ವಂಚಕರ ಮೋಸದ ಜಾಲಕ್ಕೆ ಸಾರ್ವಜನಿಕರು ಬಲಿ

ಬಾಲಚಂದ್ರ ಎಚ್.
Published 30 ಜನವರಿ 2023, 5:47 IST
Last Updated 30 ಜನವರಿ 2023, 5:47 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಉಡುಪಿ: ಸುಶಿಕ್ಷಿತರ ಜಿಲ್ಲೆ ಎಂದು ಕರೆಸಿಕೊಳ್ಳುವ ಉಡುಪಿ ಜಿಲ್ಲೆಯಲ್ಲಿ ಅತಿ ಹೆಚ್ಚು ಸೈಬರ್ ಅಪರಾಧ ಪ್ರಕರಣಗಳು ಬೆಳಕಿಗೆ ಬರುತ್ತಿರುವುದು ಆತಂಕಕಾರಿ ಬೆಳವಣಿಗೆ. ಆನ್‌ಲೈನ್ ವಂಚಕರು ತೋಡುವ ಖೆಡ್ಡಾಗಳಿಗೆ ಸುಶಿಕ್ಷಿಸ್ಥರು ಎನಿಸಿಕೊಂಡ ವೈದ್ಯರು, ಎಂಜಿನಿಯರ್‌ಗಳು, ಪ್ರಾಧ್ಯಾಪಕರು ಹಾಗೂ ಉದ್ಯಮಿಗಳೇ ಹೆಚ್ಚಾಗಿ ಬೀಳುತ್ತಿದ್ದಾರೆ.

ಪೊಲೀಸ್ ಇಲಾಖೆಯ ಅಂಕಿ–ಅಂಶಗಳ ಪ್ರಕಾರ ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಲ್ಲಿ 100ಕ್ಕೂ ಹೆಚ್ಚು ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿದ್ದು ಈ ಪೈಕಿ 55ಕ್ಕೂ ಹೆಚ್ಚು ಹಣ ವಂಚನೆ ಪ್ರಕರಣಗಳು ವರದಿಯಾಗಿವೆ.

ಇನ್ನು ಅನಧಿಕೃತವಾಗಿ ಪೊಲೀಸ್ ಠಾಣೆ ಮೇಟ್ಟಿಲೇರದ ನೂರಾರು ವಂಚನೆ ಪ್ರಕರಣಗಳು ನಡೆದಿವೆ. ಅಜ್ಞಾತ ಸ್ಥಳದಲ್ಲಿ ಕುಳಿತು ವಂಚಕರು ಬೀಸುವ ಮೋಸದ ಬಲೆಗೆ ಸಿಲುಕುತ್ತಿರುವ ಸಾರ್ವಜನಿಕರು ಕೋಟ್ಯಂತರ ರೂಪಾಯಿ ಕಳೆದುಕೊಳ್ಳುತ್ತಿದ್ದಾರೆ.

ADVERTISEMENT

ದುಬಾರಿ ಗಿಫ್ಟ್‌, ದೊಡ್ಡ ಮೊತ್ತದ ಹಣ, ಬಂಗಾರ, ನೌಕರಿ ಆಮಿಷಗಳಿಗೆ ಬಲಿಯಾಗಿ ಜೀವನ ಪೂರ್ತಿ ಕಷ್ಟಪಟ್ಟು ದುಡಿದು ಕೂಡಿಟ್ಟ ಹಣ ವಂಚಕರ ಪಾಲಾಗುತ್ತಿದೆ.

ಪ್ರತಿನಿತ್ಯ ಸೈಬರ್ ವಂಚನೆ ಪ್ರಕರಣಗಳು ಬೆಳಕಿಗೆ ಬರುತ್ತಿದ್ದರೂ ಮೋಸಕ್ಕೆ ಸಿಲುಕುತ್ತಿರುವವರ ಸಂಖ್ಯೆ ಜಿಲ್ಲೆಯಲ್ಲಿ ಕಡಿಮೆಯಾಗುತ್ತಿಲ್ಲ. ತಂತ್ರಜ್ಞಾನದ ಲೋಪ–ದೋಷಗಳನ್ನು ಬಂಡವಾಳ ಮಾಡಿಕೊಂಡ ಸೈಬರ್‌ ವಂಚಕರು ಹೊಸ ವೇಷ, ಹೊಸ ತಂತ್ರದೊಂದಿಗೆ ಸಾರ್ವಜನಿಕರ ಹಣವನ್ನು ದೋಚುತ್ತಿದ್ದಾರೆ.

ಹಿಂದೆ, ಮೊಬೈಲ್‌ಗೆ ಕರೆ ಮಾಡಿ ನಿಮ್ಮ ಎಟಿಎಂ ಕಾರ್ಡ್‌ ಅವಧಿ ಮುಗಿದಿದೆ. ನವೀಕರಣಕ್ಕೆ ಕಾರ್ಡ್‌ನ 16 ಡಿಜಿಟ್ ನಂಬರ್‌, ಸಿವಿವಿ, ಒಟಿಪಿ ನಂಬರ್ ಕೊಡಿ ಎಂದು ಕೇಳುತ್ತಿದ್ದ ವಂಚಕರು ಈಗ ಹೊಸ ಮಾದರಿಯಲ್ಲಿ ವಂಚನೆಗೆ ಇಳಿದಿದ್ದಾರೆ.

ವಿದ್ಯುತ್ ಬಿಲ್ ಬಾಕಿ ಇದೆ: ವಿದ್ಯುತ್ ಬಿಲ್ ಬಾಕಿ ಇದ್ದು, ತಕ್ಷಣ ಪಾವತಿಸದಿದ್ದರೆ ರಾತ್ರಿ 10.30ರಿಂದ ವಿದ್ಯುತ್ ಕಡಿತಗೊಳಿಸಲಾಗುವುದು ಎಂಬ ಸಂದೇಶಗಳು ಸಾರ್ವಜನಿಕರ ಮೊಬೈಲ್‌ಗೆ ಬರುತ್ತಿವೆ. ಮೆಸ್ಕಾಂ ಅಧಿಕಾರಿಗಳೇ ಸಂದೇಶ ಕಳಿಸಿರಬೇಕು ಎಂದು ನಂಬುತ್ತಿರುವ ಗ್ರಾಹಕರು ವಂಚಕರಿಗೆ ಕರೆ ಮಾಡಿ ಬ್ಯಾಂಕ್ ಖಾತೆಯ ವಿವರ, ಎಟಿಎಂ ಪಿನ್‌, ಒಟಿಪಿ ಕೊಟ್ಟು ಹಣ ಕಳೆದುಕೊಳ್ಳುತ್ತಿದ್ದಾರೆ.

ಇದೇ ಮಾದರಿಯ ವಂಚನೆಗೆ ಸಿಲುಕಿ ಉಡುಪಿಯ ಬಲಾಯಿಪಾದೆಯ ವ್ಯಕ್ತಿಯೊಬ್ಬರ ಖಾತೆಯಿಂದ ಕ್ರಮವಾಗಿ ₹30,999 ಹಾಗೂ ₹ 49,000 ದೋಚಲಾಗಿದೆ.

ವಿದ್ಯುತ್ ಬಿಲ್ ಕಟ್ಟದಿದ್ದರೆ ವಿದ್ಯುತ್ ನಿಲುಗಡೆ ಮಾಡುವುದಾಗಿ ಮೆಸ್ಕಾಂ ಗ್ರಾಹಕರ ಮೊಬೈಲ್‌ಗೆ ಸಂದೇಶ ಕಳಿಸುವುದಿಲ್ಲ. ಒಂದು ತಿಂಗಳ ಬಿಲ್ ಬಾಕಿ ಇದ್ದರೆ ಮುಂದಿನ ತಿಂಗಳು ದಂಡಸಹಿತ ಪಾವತಿಗೆ ಅವಕಾಶ ಇರುತ್ತದೆ. ಇದರ ಹೊರತಾಗಿ ಗ್ರಾಹಕರ ಮೊಬೈಲ್‌ಗೆ ಸಂದೇಶ ಕಳಿಸಿ ಬಿಲ್‌ ಕಟ್ಟುವಂತೆ ಒತ್ತಡ ಹಾಕುವುದಿಲ್ಲ ಎನ್ನುತ್ತಾರೆ ಮೆಸ್ಕಾಂ ಅಧಿಕಾರಿಗಳು.

ಹೇಗೆಲ್ಲ ನಡೆಯುತ್ತೆ ವಂಚನೆ: ಸಾರ್ವಜನಿಕರನ್ನು ಯಾಮಾರಿಸಲು ವಂಚಕರು ಕಂಡುಕೊಂಡಿರುವ ದಾರಿಗಳು ಒಂದೆರಡಲ್ಲ. ಇ ಮೇಲ್ ಅಥವಾ ಮೊಬೈಲ್‌ಗೆ ಭಾರಿ ಮೊತ್ತದ ಬಹುಮಾನ ಬಂದಿರುವುದಾಗಿ ಸಂದೇಶ ಕಳಿಸಿ, ತೆರಿಗೆ, ಇತರ ಶುಲ್ಕಗಳ ಹೆಸರಿನಲ್ಲಿ ವಂಚಿಸಲಾಗುತ್ತಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವಿದೇಶಿಗರ ಸೋಗಿನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳಿಸಿ ಒಡನಾಟ ಬೆಳೆಸಿಕೊಂಡು ಬಳಿಕ ದುಬಾರಿ ಗಿಫ್ಟ್‌ ಹಾಗೂ ದೊಡ್ಡ ಮೊತ್ತ ನೀಡುವುದಾಗಿ ಆಮಿಷವೊಡ್ಡಿ, ಏರ್‌ಪೋರ್ಟ್‌ನಲ್ಲಿ ವಿದೇಶಿ ಕರೆನ್ಸಿಯನ್ನು ಭಾರತದ ರೂಪಾಯಿಗೆ ಬದಲಾಯಿಸಿ ಕೊಡುವುದಾಗಿ ನಂಬಿಸಿ ಖಾತೆಗೆ ಲಕ್ಷಾಂತರ ರೂಪಾಯಿ ಮೋಸ ಮಾಡಲಾಗುತ್ತಿದೆ.

ಯೋಧರ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಗೃಹ ಬಳಕೆ ವಸ್ತುಗಳನ್ನು ಅತಿ ಕಡಿಮೆ ದರದಲ್ಲಿ ಮಾರಾಟ ಮಾಡುವುದಾಗಿ ಪೋಸ್ಟ್ ಹಾಕಿ ಗ್ರಾಹಕರನ್ನು ನಂಬಿಸಿ ಮುಂಗಡ ಹಣ ಪಡೆದು ಪಂಗನಾಮ ಹಾಕಲಾಗುತ್ತಿದೆ.

ಸರ್ಕಾರದ ಸಾಲದ ಯೋಜನೆಗಳನ್ನೂ ವಂಚನೆಗೆ ಬಳಸಿಕೊಳ್ಳಲಾಗುತ್ತಿದೆ. ಬ್ಯಾಂಕ್ ಅಧಿಕಾರಿಗಳ ಹೆಸರಿನಲ್ಲಿ ಮುದ್ರಾ ಲೋನ್ ಕೊಡುವುದಾಗಿ ಕರೆ ಮಾಡಿ, ಅಗತ್ಯ ದಾಖಲಾತಿ ಪಡೆದು ಪ್ರೊಸೆಸಿಂಗ್ ಶುಲ್ಕ, ತೆರಿಗೆ, ವಿಮಾ ಶುಲ್ಕದ ಹೆಸರಿನಲ್ಲಿ ಖಾತೆಗೆ ಹಣ ಹಾಕಿಸಿಕೊಂಡು ಕೈ ಎತ್ತಲಾಗುತ್ತಿದೆ.

ಜಿಎಸ್‌ಟಿ, ಐಟಿ ಅಧಿಕಾರಿ ಸೋಗಿನಲ್ಲೂ ಕರೆ ಮಾಡಿ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ್ದು ದಾಳಿ ಮಾಡುವುದಾಗಿ ಬೆದರಿಸಿ ಖಾತೆಗೆ ಹಣ ಹಾಕಿಸಿಕೊಂಡು ಮೋಸ ಮಾಡಲಾಗುತ್ತಿದೆ.

ವಿಡಿಯೊ ಕರೆ ಮೂಲಕ ಯುವತಿಯರ ಅಶ್ಲೀಲ ದೃಶ್ಯಗಳನ್ನು ತೋರಿಸಿ, ವಿಡಿಯೋ ವೀಕ್ಷಣೆ ಮಾಡಿದ ವ್ಯಕ್ತಿಯ ದೃಶ್ಯಗಳನ್ನು ಚಿತ್ರೀಕರಿಸಿ ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾಗಿರುವಂತೆ ನಕಲಿ ವಿಡಿಯೋ ಸೃಷ್ಟಿಸಿ ಹಣಕ್ಕಾಗಿ ಬ್ಲಾಕ್ ಮೇಲ್ ಮಾಡುತ್ತಿರುವ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚಾಗಿವೆ. ಮರ್ಯಾದೆಗೆ ಅಂಜಿ ಬಹಳಷ್ಟು ಮಂದಿ ಹಣ ಕಳೆದುಕೊಂಡಿದ್ದಾರೆ.

ಪ್ರಸಿದ್ಧ ಕಂಪೆನಿಗಳಲ್ಲಿ ಲಕ್ಷಾಂತರ ರೂಪಾಯಿ ಸಂಬಳದ ಹುದ್ದೆಗಳನ್ನು ಕೊಡಿಸುವುದಾಗಿ ಎಚ್‌ಆರ್‌ಗಳ ಸೋಗಿನಲ್ಲಿ ಕರೆ ಮಾಡುತ್ತಿರುವ ವಂಚಕರು ಶುಲ್ಕದ ಹೆಸರಿನಲ್ಲಿ ನಿರುದ್ಯೋಗಿಗಳನ್ನೂ ಸುಲಿಗೆ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.