ADVERTISEMENT

ಆಮ್ಲಜನಕ ಸಾಂದ್ರಕ ಹಸ್ತಾಂತರಿದ ಕೆ. ರಾಜು; ದಾನಿಗಳ ಸಹಕಾರ ಸ್ವಾಗತಾರ್ಹ

ಆಮ್ಲಜನಕ ಸಾಂದ್ರಕ ಹಸ್ತಾಂತರಿದ ಕೆ. ರಾಜು

​ಪ್ರಜಾವಾಣಿ ವಾರ್ತೆ
Published 8 ಜೂನ್ 2021, 6:04 IST
Last Updated 8 ಜೂನ್ 2021, 6:04 IST
ಅಖ್ತರ್ ಅಹಮ್ಮದ್ ಖಾನ್ ಅವರು ಆಮ್ಲಜನಕ ಸಾಂದ್ರಕವನ್ನು ಆಸ್ಪತ್ರೆಗೆ ಹಸ್ತಾಂತರಿಸಿದರು.
ಅಖ್ತರ್ ಅಹಮ್ಮದ್ ಖಾನ್ ಅವರು ಆಮ್ಲಜನಕ ಸಾಂದ್ರಕವನ್ನು ಆಸ್ಪತ್ರೆಗೆ ಹಸ್ತಾಂತರಿಸಿದರು.   

ಬೈಂದೂರು: ‘ಕೋವಿಡ್-19 ಎದುರಿಸಲು ಸರ್ಕಾರಿ ಆಸ್ಪತ್ರೆಗಳಿಗೆ ಬೇಕಾದ ಕೆಲವು ಅಗತ್ಯಗಳನ್ನು ದಾನಿಗಳು ಒದಗಿಸಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಉತ್ತಮ ಚಿಕಿತ್ಸೆ ನೀಡಲು ಸಾಧ್ಯವಾಯಿತು. ದಾನಿಗಳ ಈ ಸಹಕಾರ ಸ್ವಾಗತಾರ್ಹ’ ಎಂದು ಕುಂದಾಪುರ ಉಪ ವಿಭಾಗಾಧಿಕಾರಿ ಕೆ. ರಾಜು ಹೇಳಿದರು.

ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದುಬೈನ ಉದ್ಯಮಿಯೊಬ್ಬರು ಗಂಗೊಳ್ಳಿ ತೌಹೀದ್ ಎಜುಕೇಶನ್ ಟ್ರಸ್ಟ್‌ನ ಆಡಳಿತಾಧಿಕಾರಿ ಅಖ್ತರ್ ಅಹಮ್ಮದ್ ಖಾನ್ ಮೂಲಕ ಭಾನುವಾರ ನೀಡಿದ ₹ 60 ಸಾವಿರ ಮೌಲ್ಯದ ಆಮ್ಲಜನಕ ಸಾಂದ್ರಕ ಹಸ್ತಾಂತರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ನಾಗಭೂಷಣ ಮಾತನಾಡಿ, ‘ಉಡುಪಿ, ಕುಂದಾಪುರ, ಬೈಂದೂರು ತಾಲ್ಲೂಕುಗಳಲ್ಲಿ 3,000ಕ್ಕೂ ಅಧಿಕ ಸೋಂಕಿತರು ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿದ್ದಾರೆ. ಕೋವಿಡ್ ಮೂರನೇ ಎದುರಿಸಲು ಆರೋಗ್ಯ ಇಲಾಖೆ ಸಿದ್ಧತೆ ಆರಂಭಿಸಿದೆ. ಆಸ್ಪತ್ರೆಗಳಲ್ಲಿ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸುವ ಜತೆಗೆ ಅಗತ್ಯ ಸಿಬ್ಬಂದಿ ನಿಯೋಜನೆ ಕೂಡ ನಡೆಯುತ್ತಿದೆ. ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅತಿ ಶೀಘ್ರ ಕಾಯಂ ವೈದ್ಯಾಧಿಕಾರಿ ನೇಮಕ ಮಾಡಲಾಗುವುದು. ಸೂಕ್ತ ನಿವೇಶನ ದೊರೆತರೆ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ಪ್ರಸ್ತಾವ ಸಲ್ಲಿಸಲಾಗುವುದು ಎಂದು ಹೇಳಿದರು.

ADVERTISEMENT

ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ ಖಾರ್ವಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಆರೋಗ್ಯ ಅಧಿಕಾರಿಯಾಗಿ ನಿಯುಕ್ತಿಗೊಂಡಿರುವ ಡಾ. ನಾಗಭೂಷಣ ಉಡುಪ ಅವರನ್ನು ಸನ್ಮಾನಿಸಲಾಯಿತು. ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ರಂಜಿತ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಪ್ರೇಮಾ ಸಿ. ಪೂಜಾರಿ, ಪಿಡಿಒ ಉಮಾಶಂಕರ, ವಂಡ್ಸೆ ಹೋಬಳಿ ಕಂದಾಯ ನಿರೀಕ್ಷಕ ರಾಘವೇಂದ್ರ ದೇವಾಡಿಗ, ಗಂಗೊಳ್ಳಿ ಎಎಸ್‌ಐ ವೆಂಕಟೇಶ ಗೊಲ್ಲ, ಜಮಾತುಲ್ ಮುಸ್ಲಿಮಿನ್ ಅಧ್ಯಕ್ಷ ಪಿ.ಎಂ. ಹಸೈನಾರ್, ಕಾರ್ಯದರ್ಶಿ ರೆಹಾನ್, ರೋಟರಿ ಅಧ್ಯಕ್ಷ ಬಿ. ಲಕ್ಷ್ಮೀಕಾಂತ ಮಡಿವಾಳ ಇದ್ದರು. ಪತ್ರಕರ್ತ ಬಿ. ರಾಘವೇಂದ್ರ ಪೈ ಸ್ವಾಗತಿಸಿದರು. ಆಶಾ ಕಾರ್ಯಕರ್ತೆ ಕಲ್ಪನಾ ಶೇರುಗಾರ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.