ADVERTISEMENT

ಮಳೆ, ಬಿಸಿಲಿನ ವಾತಾವರಣ: ಕಾದುನೋಡುವ ತಂತ್ರಕ್ಕೆ ರೈತರ ಮೊರೆ

ಮಳೆ, ಬಿಸಿಲಿನ ವಾತಾವರಣ: ಭತ್ತದ ಕೃಷಿ ಕಾರ್ಯ ವಿಳಂಬ

​ಪ್ರಜಾವಾಣಿ ವಾರ್ತೆ
Published 19 ಜೂನ್ 2025, 6:18 IST
Last Updated 19 ಜೂನ್ 2025, 6:18 IST
ಭತ್ತದ ಗದ್ದೆಯ ಉಳುಮೆ ಕಾರ್ಯ   
ಭತ್ತದ ಗದ್ದೆಯ ಉಳುಮೆ ಕಾರ್ಯ      

ಉಡುಪಿ: ಈ ಬಾರಿ ಮೇ ತಿಂಗಳಲ್ಲೇ ಧಾರಾಕಾರ ಮಳೆ ಸುರಿದಿದ್ದರೂ ಜಿಲ್ಲೆಯ ಬಹುತೇಕ ಕೃಷಿಕರು ಭತ್ತದ ಕೃಷಿಯನ್ನು ಬೇಗ ಆರಂಭಿಸದೆ ಕಾದು ನೋಡುವ ತಂತ್ರ ಅನುಸರಿಸಿದ್ದಾರೆ.

ಅವಧಿಪೂರ್ವ ಮಳೆ ಬಂದಿದ್ದರೂ ಬೇಗನೆ ಭತ್ತದ ಕೃಷಿ ಆರಂಭಿಸಿದರೆ ಮಧ್ಯೆ ಮಳೆ ಕೈಕೊಟ್ಟು ಬಿಸಿಲಿನ ವಾತಾವರಣ ಬಂದರೆ. ಇಳುವರಿ ಕುಸಿತವಾಗುವ ಭೀತಿಯಿಂದ ಕೃಷಿ ಚಟುವಟಿಕೆ ಆರಂಭಿಸಿಲ್ಲ ಎಂದು ರೈತರು ತಿಳಿಸಿದ್ದಾರೆ.

ಜೂನ್ ಮೊದಲ ವಾರದ ಬಳಿಕ ಜಿಲ್ಲೆಯಲ್ಲಿ ಕೆಲವು ರೈತರು ಕೃಷಿ ಚಟುವಟಿಕೆ ಆರಂಭಿಸಿದರೆ, ಇನ್ನೂ ಕೆಲವು ರೈತರು ಭತ್ತದ ಕೃಷಿ ಇನ್ನೂ ಆರಂಭಿಸಿಲ್ಲ. ಗದ್ದೆ ಉಳುವ ಕೆಲಸವಷ್ಟೆ ಈಗ ನಡೆಯುತ್ತಿದೆ.

ADVERTISEMENT

ಯಾಂತ್ರೀಕೃತ ರೀತಿಯಲ್ಲಿ ಕೃಷಿ ಮಾಡುವವರಲ್ಲಿ ಕೆಲವರು ಈಗಾಗಲೇ ಚಾಪೆನೇಜಿ ಸಿದ್ದ ಮಾಡಿದರೆ. ಸಾಂಪ್ರದಾಯಿಕ ಶೈಲಿಯಲ್ಲಿ ಕೈ ನಾಟಿ ಮಾಡುವ ಪದ್ದತಿಯಲ್ಲಿ ಕೃಷಿ ಮಾಡುವವರಲ್ಲಿ ಬಹುತೇಕರ ಇನ್ನೂ ಬಿತ್ತನೆ ಮಾಡಿಲ್ಲ.

ಈಗ ಮಳೆ, ಬಿಸಿಲಿನ ವಾತಾವರಣ ಇರುವುದರಿಂದ ಕೆಲದಿನ ಕಾದು, ಜೂನ್‌ ಅಂತ್ಯದ ವೇಳೆಗೆ ನಾಟಿ ಮಾಡಲು ಕೆಲವರು ಸಿದ್ಧತೆ ನಡೆಸಿದ್ದಾರೆ. ಬೀಜ ಬಿತ್ತನೆ ನಡೆಸುವವರು ಕೂಡ ಇದೇ ಅವಧಿಯಲ್ಲಿ ಬಿತ್ತನೆ ನಡೆಸಲಿದ್ದಾರೆ ಎಂದು ರೈತರು ಹೇಳಿದ್ದಾರೆ.

ಈ ಬಾರಿ ಈಗಾಗಲೇ ಸಾಕಷ್ಟು ಮಳೆ ಬಂದಿದ್ದು ನಡುವೆ 15 ದಿವಸ ಮಳೆ ಕೈಕೊಟ್ಟರೆ ಕೃಷಿಗೆ ನೀರು ಒದಗಿಸುವ ಅನಿವಾರ್ಯತೆ ಎದುರಾಗಬಹುದು ಎಂಬ ಭೀತಿ ಇದೇ ಎನ್ನುತ್ತಾರೆ ಶೀಂಬ್ರಾದ ರೈತ ರವೀಂದ್ರ ಪೂಜಾರಿ.

ನಾವು ಸಾಂಪ್ರದಾಯಿಕ ಶೈಲಿಯಲ್ಲಿ ಭತ್ತದ ಕೃಷಿ ಮಾಡುತ್ತಿದ್ದೇವೆ. ಮಳೆ ಬೇಗ ಬಂದರು ಕೂಡ ಈ ಭಾಗದ ರೈತರು ಒಂದೇ ಸಮಯದಲ್ಲಿ ಭತ್ತದ ಕೃಷಿ ಚಟುವಟಿಕೆ ಆರಂಭಿಸುತ್ತೇವೆ. ಇದರಿಂದ ಕಟಾವಿನ ಸಂದರ್ಭದಲ್ಲಿ ಯಂತ್ರದ ಬಳಕೆಗೆ ಅನುಕೂಲವಾಗುತ್ತದೆ ಎನ್ನುತ್ತಾರೆ ಅವರು.

ಒಮ್ಮೆ ಜೋರಾದ ಮಳೆ ಮತ್ತೆ ಬಿಸಿಲಿನ ವಾತಾವರಣವಿದ್ದರೆ ಭತ್ತದ ಸಸಿಯು ಬೆಳವಣಿಗೆ ಸಾಧಿಸದೆ ಇಳುವರಿ ಕುಂಠಿತವಾಗುವ ಸಾಧ್ಯತೆ ಇದೆ. ಈ ಕಾರಣಕ್ಕೆ ಹಲವು ಮಂದಿ ಭತ್ತದ ಕೃಷಿಕರು ಭತ್ತದ ಕೃಷಿಯ ಬಿತ್ತನೆ ಆರಂಭಿಸುವುದೋ ಬೇಡವೋ ಎಂಬ ಅಂತಂತ್ರ ಭಾವದಲ್ಲಿದ್ದಾರೆ ಎಂದು ಉಡುಪಿ ಜಿಲ್ಲಾ ಕೃಷಿಕ ಸಂಘದ ಕಾರ್ಯದರ್ಶಿ ರವೀಂದ್ರ ಗುಜ್ಜರಬೆಟ್ಟು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಮೊದಲೇ ರೈತರು ಭತ್ತದ ಕೃಷಿಯಿಂದ ದೂರ ಸರಿಯುತ್ತಿದ್ದಾರೆ. ಅದರ ನಡುವೆ ಹವಾಮಾನ ವೈಪರೀತ್ಯದಿಂದಾಗಿ ಇನ್ನಷ್ಟು ರೈತರು ಭತ್ತದ ಕೃಷಿ ಮಾಡುವುದನ್ನೇ ಬಿಡುತ್ತಿದ್ದಾರೆ ಎಂದು ಹೇಳಿದರು.

ಈ ಬಾರಿ ಕೃಷಿ ಇಲಾಖೆಯು ಸಹ್ಯಾದ್ರಿ ಕೆಂಪುಮುಕ್ತಿ ಸೇರಿದಂತೆ ವಿವಿಧ ತಳಿಯ ಭತ್ತದ ಬಿತ್ತನೆ ಬೀಜವನ್ನು ಪ್ರಾಯೋಗಿಕವಾಗಿ ಬೆಳೆಯಲು ಉಚಿತವಾಗಿ ನೀಡಿದೆ ಎಂದೂ ಅವರು ತಿಳಿಸಿದರು.  

ಈ ಬಾರಿ ನಮ್ಮ ಪ್ರದೇಶದ ಹಲವು ರೈತರು ಸಹ್ಯಾದ್ರಿ ಬ್ರಹ್ಮ ತಳಿಯ ಭತ್ತದ ಕೃಷಿಯನ್ನೂ ಪ್ರಾಯೋಗಿಕವಾಗಿ ಮಾಡಿದ್ದಾರೆ. ಈ ತಳಿಯಿಂದ ಕಳೆದ ವರ್ಷ ಕೆಲವರಿಗೆ ಉತ್ತಮ ಇಳುವರಿ ಸಿಕ್ಕಿತ್ತು
ರವೀಂದ್ರ ಪೂಜಾರಿ ರೈತ
ಈ ಬಾರಿ ಎಂಒ4 ತಳಿಯ ಭತ್ತದ ಬಿತ್ತನೆ ಬೀಜದ ಕೊರತೆ ಕಾಡಿಲ್ಲ. ಅತಿಯಾದ ಮಳೆ ಬಿಸಿಲೇ ರೈತರಿಗೆ ಆತಂಕ ತರುತ್ತಿದೆ
ರಾಮಕೃಷ್ಣ ಶರ್ಮ ಬಂಟಕಲ್ಲು ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ
ಜೂನ್‌ ಎರಡನೇ ವಾರದಲ್ಲಿ ಮತ್ತೆ ಮಳೆ ಬಿರುಸಿನಿಂದ ಸುರಿದ ಕಾರಣ ಕೆಲವೆಡೆ ಭತ್ತದ ಕೃಷಿಯ ಸಿದ್ಧತೆ ಕಾರ್ಯಗಳು ವಿಳಂಬವಾಗಿವೆ. ಜೂನ್‌ ಅಂತ್ಯಕ್ಕೆ ಕೃಷಿ ಚಟುವಟಿಕೆ ಚುರುಕುಗೊಳ್ಳಲಿದೆ
ರವೀಂದ್ರ ಗುಜ್ಜರ ಬೆಟ್ಟು ಉಡುಪಿ ಜಿಲ್ಲಾ ಕೃಷಿಕ ಸಂಘದ ಕಾರ್ಯದರ್ಶಿ

‘ಕರಾವಳಿಗೆ ಎಂ4 ತಳಿಯೇ ಸೂಕ್ತ’

ಭತ್ತದ ಎಂಒ4 ತಳಿಯು 135 ದಿನಗಳಲ್ಲಿ ಕಟಾವಿಗೆ ಬರುತ್ತದೆ. ಇದು ಕರಾವಳಿಯ ಹವಾಗುಣಕ್ಕೆ ಅತ್ಯಂತ ಸೂಕ್ತ ತಳಿಯಾಗಿದೆ. ಉಳಿದ ಭತ್ತದ ತಳಿಗಳು ಕಟಾವಿಗೆ ಬರಲು 155 ದಿವಸಗಳು ಬೇಕು ಎಂದು ರವೀಂದ್ರ ಗುಜ್ಜರಬೆಟ್ಟು ತಿಳಿಸಿದರು. ಕಳೆದ ವರ್ಷ ಎಂಒ4 ತಳಿಯ ಭತ್ತದ ಬಿತ್ತನೆ ಬೀಜದ ತೀವ್ರ ಕೊರತೆಯಿಂದ ಆರಂಭದಲ್ಲೇ ರೈತರು ಸಂಕಷ್ಟ ಅನುಭವಿಸಿದ್ದರು. ಅನಂತರ ನೆರೆ ಹಾವಳಿಯಿಂದ ಭತ್ತದ ಕೃಷಿ ನಾಶವಾಗಿತ್ತು. ಈ ಭಾರಿಯೂ ನೆರೆ ಬಂದು ಭತ್ತದ ಕೃಷಿ ಪ್ರದೇಶ ಹಲವು ದಿನಗಳ ಕಾಲ ಜಲಾವೃತವಾದರೆ ಸಮಸ್ಯೆಯಾಗಲಿದೆ ಎಂದೂ ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.