ADVERTISEMENT

ಬ್ರಹ್ಮಾವರ | ಭತ್ತಕ್ಕೆ ಹುಳು ಬಾಧೆ: ಹತೋಟಿ ಕ್ರಮಗಳು

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2025, 5:44 IST
Last Updated 10 ಆಗಸ್ಟ್ 2025, 5:44 IST
<div class="paragraphs"><p>ಭತ್ತದ ಬೆಳೆಗೆ ಎಲೆ ಸುರುಳಿ ಕೊಳವೆ ಹುಳುಗಳು</p></div>

ಭತ್ತದ ಬೆಳೆಗೆ ಎಲೆ ಸುರುಳಿ ಕೊಳವೆ ಹುಳುಗಳು

   

ಬ್ರಹ್ಮಾವರ: ಕರಾವಳಿಯ ಹಲವೆಡೆ ಭತ್ತ ನಾಟಿ ಕಾರ್ಯ ಮುಗಿಯುವ ಹಂತ ತಲುಪಿದೆ. ಆದರೆ ಕೆಲವೆಡೆ ಭತ್ತದ ಬೆಳೆಗೆ ಎಲೆ ಸುರುಳಿ, ಕೊಳವೆ ಹುಳುಗಳ ಬಾಧೆ ಕಾಣಿಸಿಕೊಂಡಿದ್ದು, ರೈತರು ಇದರ ಹತೋಟಿ ಬಗ್ಗೆ ಮುಂಜಾಗರೂಕತೆ ವಹಿಸುವುದು ಉತ್ತಮ ಎಂದು ವಲಯ ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿಗಳಾದ ಬಿ. ಧನಂಜಯ, ರೇವಣ್ಣ ರೇವಣ್ಣವರ, ಶಂಕರ ಎಂ. ಸಲಹೆ ನೀಡಿದ್ದಾರೆ.

ಭತ್ತದ ಎಲೆ ಸುರುಳಿ ಕೀಟ, ಕೊಳವೆ ಹುಳುಗಳು ಮೊಟ್ಟೆ, ಮರಿ, ಕೋಶ, ಚಿಟ್ಟೆ ಬೆಳವಣಿಗೆ ಹಂತಗಳು ಪೂರ್ಣಗೊಳ್ಳಲು 35ರಿಂದ 40 ದಿನ ಬೇಕು. ಒಂದು ಹೆಣ್ಣು ಚಿಟ್ಟೆ 150 ಮೊಟ್ಟೆಗಳನ್ನಿಡುತ್ತದೆ. ಮರಿ ಹುಳುಗಳು ತಿಳಿ ಹಸಿರು ಬಣ್ಣ ಹೊಂದಿದ್ದು ಭತ್ತದ ಎಲೆಗಳನ್ನು ಸಂಪೂರ್ಣ ತಿನ್ನುವ, ನೀರಿನಲ್ಲಿ ಮುಳುಗಿದರೂ ಉಸಿರಾಡುವ ಸಾಮರ್ಥ್ಯ ಹೊಂದಿವೆ ಎಂದು ತಿಳಿಸಿದ್ದಾರೆ.

ADVERTISEMENT

ಬಾಧೆಯ ಲಕ್ಷಣಗಳು: ಎಲೆ ಸುರುಳಿ ಮರಿ ಹುಳು ಭತ್ತ ಎಲೆಯನ್ನು ಮಡಚಿ ಅಥವಾ ಸುರುಳಿ ಸುತ್ತಿ ಒಳಗಡೆಯಿಂದ ಎಲೆಯನ್ನು ಹಾಳು ಮಾಡುತ್ತದೆ. ಕೊಳವೆ ಮರಿ ಹುಳುಗಳು ಎಲೆ ತುದಿಯನ್ನು ಕತ್ತರಿಸಿ ಕೊಳವೆ ನಿರ್ಮಿಸಿಕೊಂಡು, ಭತ್ತದ ಎಲೆಗಳಿಗೆ ಅಂಟಿಕೊಂಡು ಎಲೆಗಳನ್ನು ಹಾಳು ಮಾಡುತ್ತವೆ. ಭತ್ತ ನಾಟಿ ಮಾಡಿದ 15 ದಿವಸಗಳ ನಂತರ ಈ ಹುಳುಗಳ ಬಾಧೆ ಪ್ರಾರಂಭವಾಗಿ, ಭತ್ತದ ಸಸಿ ಕವಲು ಒಡೆಯುವಾಗ ಹೆಚ್ಚಾಗಿ, ತೆನೆಯೊಡೆಯುವ ಸಮಯದಲ್ಲಿ ಕ್ರಮೇಣ ಕಡಿಮೆಯಾಗುತ್ತದೆ. ಈ ಹುಳುಗಳ ಬಾಧೆಯ ಮುಖ್ಯ ಲಕ್ಷಣಗಳೆಂದರೆ, ಮಡಚಿರುವ ಎಲೆ, ಕತ್ತರಿಸಿರುವ ಎಲೆ, ಎಲೆಗಳ ಮೇಲೆ ಬಿಳಿ ಗೆರೆಗಳು ಅಥವಾ ಮಚ್ಚೆಗಳು. ನೀರಿನ ಮೇಲೆ ತೇಲಾಡುವ ಎಲೆಗಳ ತುಣುಕುಗಳು, ಕೊಳವೆಗಳು. ಈ ಹುಳುಗಳನ್ನು ವೈಜ್ಞಾನಿಕವಾಗಿ ಸಕಾಲದಲ್ಲಿ ನಿಯಂತ್ರಣ ಮಾಡದಿದ್ದರೆ ಭತ್ತದ ಬೆಳೆಯನ್ನು ಸಂಪೂರ್ಣ ನಾಶ ಮಾಡುವ ಸಾಮರ್ಥ್ಯ ಈ ಹುಳುಗಳು ಹೊಂದಿವೆ ಎಂದು ರೇವಣ್ಣವರ ತಿಳಿಸಿದ್ದಾರೆ.

ಸಮಗ್ರ ಹತೋಟಿ ಕ್ರಮಗಳು: ಭತ್ತದ ಸಸಿಗಳನ್ನು ಬೇಗ ನಾಟಿ ಮಾಡಿದರೆ ಈ ಹುಳುಗಳ ಹಾವಳಿ ಕಡಿಮೆ ಅಥವಾ ತಪ್ಪಿಸಿಕೊಳ್ಳಬಹುದು. ಸುತ್ತಮುತ್ತಲಿನ ರೈತರು ಸೂಕ್ತ ಸಮಯದೊಳಗೆ ಒಂದೇ ಸಮಯದಲ್ಲಿ ನಾಟಿ ಮಾಡಿದರೆ ಈ ಹುಳುವಿನ ಬಾಧೆ ಕಡಿಮೆ ಇರುತ್ತದೆ. ಗದ್ದೆಯ ಬದುಗಳ ಮೇಲಿರುವ ಕಳೆ ನಿಯಂತ್ರಣ ಮಾಡಬೇಕು. ಭತ್ತ ಸಸಿ ಹಂತದಲ್ಲಿರುವಾಗ ಭಕ್ಷಕ ಹಕ್ಕಿಗಳು ಗದ್ದೆಯಲ್ಲಿ ಕುಳಿತುಕೊಳ್ಳಲು ರೆಂಬೆಗಳನ್ನು ಅಲ್ಲಲ್ಲಿ ಊರಬೇಕು. ಕಡಿಮೆ ದರದಲ್ಲಿ ದೊರೆಯುವ ಟ್ರೈಕೊಗ್ರಾಮಾ ಕಿಲೋನಿಸ್ ಪರತಂತ್ತ ಜೀವಿ ಸಮೀಪದಲ್ಲಿ ಲಭಿಸಿದರೆ 1 ಎಕ್ರೆಗೆ 40 ಸಾವಿರದಷ್ಟು ಭತ್ತ ನಾಟಿಯಾದ 15 ದಿವಸಗಳ ನಂತರ 5ರಿಂದ 6 ಬಾರಿ ಬಿಡುಗಡೆ ಮಾಡುವುದರಿಂದ ಹತೋಟಿಗೆ ತರಬಹುದು.

ಅಲ್ಲದೆ 10 ಕಿ.ಗ್ರಾಂ. ಮರಳಿಗೆ 400 ಮಿ.ಲೀ. ಸೀಮೆಎಣ್ಣೆ ಅಥವಾ ಡೀಸಿಲ್‌ ಲೇಪನ ಮಾಡಿ ಗದ್ದೆಯಲ್ಲಿ ಸಮವಾಗಿ ನೀರಿನ ಮೇಲೆ ಬೀಳುವಂತೆ ಎರಚಬೇಕು. ತೆಂಗಿನ ನಾರಿನ ಹಗ್ಗ ಭತ್ತದ ಬೆಳೆಯ ಮೇಲೆ ಎಳೆದಾಡಿ ಎಲೆಗಳಿಗೆ ಅಂಟಿಕೊಂಡಿರುವ ಹುಳುಗಳಿರುವ ಕೊಳವೆಗಳನ್ನು ನೀರಿನಲ್ಲಿ ಉದುರಿಸಿ, ನಂತರ ಗದ್ದೆಯಲ್ಲಿರುವ ನೀರು ಬಸಿದು ಹೋಗುವಂತೆ ಮಾಡಿ, ಕೊಳವೆಗಳನ್ನು ಸಂಗ್ರಹಿಸಿ ನಾಶಪಡಿಸುವುದರಿಂದಲೂ ಹತೋಟಿಗೆ ತರಬಹುದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಸಿಫಾರಸ್ಸು ಮಾಡಿದ ರಾಸಾಯನಿಕ ಕೀಟನಾಶಕಗಳು: 1 ಲೀ. ನೀರಿಗೆ 0.5 ಮಿ.ಲೀ. ಕ್ಲೋರಾಂಟ್ರಾನಿಲಿಪ್ರೋಲ್, 2 ಗ್ರಾಂ. ಕಾರ್ಟಾಪ ಹೈಡ್ರೊಕ್ಲೋರೈಡ್, 1.5 ಗ್ರಾಂ. ಅಸಿಫೇಟ್, 2 ಮಿ.ಲೀ. ಪ್ರೊರೋಫೆನೋಫಾಜ್, 2 ಮಿ.ಲೀ. ಕೋರ್ ಪೈರಿಫಾಜ್, 2 ಮಿ.ಲೀ. ಕ್ವಿನಾಲ್ ಫಾಸ್, 0.5 ಮಿ.ಲೀ. ಫ್ಲೂಬೆಂಡಿಅಮೈಡ್, 2 ಮಿ. ಲೀ. ಮಿಥೈಲ್ ಪ್ಯಾರಾಥಿಯಾನ್, 1.5 ಮಿ. ಲೀ. ಸ್ಪೈನೋಸ್ಯಾಡ್. ಇವುಗಳಲ್ಲಿ ಲಭ್ಯವಿರುವ ಯಾವುದಾದರೂ ಒಂದು ಕೀಟನಾಶಕವನ್ನು ಆಯ್ಕೆ ಮಾಡಿ ಭತ್ತದ ಬೆಳೆಯ ಮೇಲೆ 15 ದಿವಸಗಳ ಅಂತರದಲ್ಲಿ ಸಿಂಪರಣೆ ಮಾಡಿ ಈ ಹುಳುಗಳನ್ನು ಪರಿಣಾಮಕಾರಿಯಾಗಿ ಹತೋಟಿ ಮಾಡಬಹುದು ಎಂದು ಅವರು ತಿಳಿಸಿದ್ದಾರೆ.

ಎಲೆ ಸುರುಳಿ ರೋಗಕ್ಕೆ ಕಾರಣವಾದ ಹುಳುಗಳು
ಮೂರು ವರ್ಷಗಳಿಂದ ಈ ಹುಳುಗಳು ಹೆಚ್ಚಾಗುತ್ತಿರುವುದಕ್ಕೆ ಮುಖ್ಯ ಕಾರಣ ತಡವಾಗಿ ಭತ್ತ ನಾಟಿ ಮಾಡುವುದು ಪ್ರಾರಂಭಿಕ ಮಳೆಯ ವೈಪರೀತ್ಯ ಅವೈಜ್ಞಾನಿಕ ಅಕಾಲಿಕ ಹತೋಟಿ ಕ್ರಮ
–ಧನಂಜಯ ಮುಖ್ಯಸ್ಥ ಕೃಷಿ ವಿಜ್ಞಾನ ಕೇಂದ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.