ADVERTISEMENT

ಉಡುಪಿ: ಖರೀದಿ ಕೇಂದ್ರಗಳಲ್ಲಿ ಕುಚಲಕ್ಕಿ ಭತ್ತ ಖರೀದಿಗೆ ಒಪ್ಪಿಗೆ

ಕರಾವಳಿ ರೈತರ ಬಹುದಿನಗಳ ಬೇಡಿಕೆಗೆ ಕೇಂದ್ರ ಅಸ್ತು: ಮುಂದಿನ ವರ್ಷ ಶೀಘ್ರ ಖರೀದಿ ಕೇಂದ್ರ ತೆರೆಯಲು ಆಗ್ರಹ

ಬಾಲಚಂದ್ರ ಎಚ್.
Published 13 ಜನವರಿ 2022, 19:30 IST
Last Updated 13 ಜನವರಿ 2022, 19:30 IST
ಕೆಂಪಕ್ಕಿ ಭತ್ತ
ಕೆಂಪಕ್ಕಿ ಭತ್ತ   

ಉಡುಪಿ: ಕರಾವಳಿಯ ಭತ್ತ ಬೆಳೆಗಾರರ ಬಹುದಿನಗಳ ಬೇಡಿಕೆಗೆ ಕೇಂದ್ರ ಸರ್ಕಾರ ತಡವಾಗಿಯಾದರೂ ಸ್ಪಂದಿಸಿದೆ. ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ ಕೇಂದ್ರಗಳ ಮೂಲಕ ಸ್ಥಳೀಯ ಕುಚಲಕ್ಕಿ ಭತ್ತ ಪ್ರಬೇಧಗಳಾದ ಕಜೆ, ಜಯ, ಜ್ಯೋತಿ, ಪಂಚಮುಖಿ, ಸಹ್ಯಾದ್ರಿ ಹಾಗೂ ಉಮಾ ತಳಿಗಳನ್ನು ಖರೀದಿಸುವಂತೆ ಆದೇಶ ಹೊರಡಿಸಿದೆ.

ರೈತರ ಬಳಿ ಭತ್ತ ಇಲ್ಲ:ಆದರೆ, ಜಿಲ್ಲೆಯಲ್ಲಿ ಮುಂಗಾರು ಭತ್ತದ ಕೃಷಿ ಕಟಾವು ಅವಧಿ ಮುಗಿದು ತಿಂಗಳು ಕಳೆದಿರುವುದರಿಂದ ಬಹುತೇಕ ರೈತರು ಬೆಳೆದ ಭತ್ತವನ್ನೆಲ್ಲ ಈಗಾಗಲೇ ದಲ್ಲಾಳಿಗಳಿಗೆ ಹಾಗೂ ರೈಸ್‌ಮಿಲ್‌ಗಳಿಗೆ ಮಾರಾಟ ಮಾಡಿದ್ದಾರೆ. ಹಾಗಾಗಿ, ಸರ್ಕಾರದ ನಿರ್ಧಾರದಿಂದ ಈ ವರ್ಷ ಜಿಲ್ಲೆಯ ಹೆಚ್ಚಿನ ರೈತರಿಗೆ ಅನುಕೂಲವಾಗುವುದಿಲ್ಲ ಎನ್ನುತ್ತಾರೆ ರೈತ ಮುಖಂಡರು.

ಯಾರಿಗೆ ಅನುಕೂಲ: ಭತ್ತವನ್ನು ಮಾರಾಟ ಮಾಡದೆ ಇಟ್ಟುಕೊಂಡಿರುವ ರೈತರಿಗೆ ಅನುಕೂಲವಾಗಲಿದೆ. ಜತೆಗೆ, ರೈತರಿಂದ ಕಡಿಮೆ ದರಕ್ಕೆ ಭತ್ತವನ್ನು ಖರೀದಿಸಿ ದಾಸ್ತಾನಿಟ್ಟುಕೊಂಡಿರುವ ದಲ್ಲಾಳಿಗಳಿಗೆ ಲಾಭವಾಗಲಿದೆ.

ADVERTISEMENT

ಸೆಪ್ಟೆಂಬರ್‌ನಲ್ಲಿ ಖರೀದಿ ಕೇಂದ್ರ ತೆರೆಯಿರಿ: ಕರಾವಳಿಯಲ್ಲಿ ಭತ್ತದ ಕೃಷಿ ರಾಜ್ಯದ ಇತರ ಜಿಲ್ಲೆಗಳಿಗಿಂತ ಮುಂಚಿತವಾಗಿ ಆರಂಭವಾಗುತ್ತದೆ. ಮುಂಗಾರು ಭತ್ತದ ಕೃಷಿ ಜೂನ್‌ನಲ್ಲಿ ಆರಂಭವಾಗಿ ಅಕ್ಟೋಬರ್‌ನಲ್ಲಿ ಮುಗಿಯುತ್ತದೆ. ಸೆಪ್ಟೆಂಬರ್‌ನಲ್ಲಿ ಸರ್ಕಾರ ಭತ್ತ ಖರೀದಿ ಕೇಂದ್ರಗಳನ್ನು ತೆರೆದು ಕುಚಲಕ್ಕಿ ಭತ್ತದ ಎಲ್ಲ ಪ್ರಬೇಧಗಳನ್ನು ಖರೀದಿಸಿದರೆ ರೈತರಿಗೆ ಅನುಕೂಲವಾಗಲಿದೆ. ಮಾರುಕಟ್ಟೆಯಲ್ಲಿ ಭತ್ತದ ದರವೂ ಹೆಚ್ಚಾಗಲಿದೆ ಎನ್ನುತ್ತಾರೆ ಭಾರತೀಯ ಕಿಸಾನ್ ಸಂಘದ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ.

ದರ ಎಷ್ಟು?

ಸದ್ಯ ಬೆಂಬಲ ಬೆಲೆ ಯೋಜನೆಯಡಿಯ ಖರೀದಿ ಕೇಂದ್ರದಲ್ಲಿ ಸಾಮಾನ್ಯ ಭತ್ತ ಕ್ವಿಂಟಲ್‌ಗೆ ₹ 1,940 ದರ ನಿಗದಿಪಡಿಸಲಾಗಿದೆ. ಗ್ರೇಡ್ ‘ಎ’ ಭತ್ತಕ್ಕೆ ₹ 1,960 ದರ ಇದೆ. ಬೆಂಬಲ ಬೆಲೆ ಯೋಜನೆಯ ಪ್ರಯೋಜನ ಪಡೆಯಬೇಕಾದರೆ ರೈತರು ಜಮೀನಿನ ವಿವರವನ್ನು ಫ್ರೂಟ್ಸ್‌ ತಂತ್ರಾಂಶದಲ್ಲಿ ನೋಂದಣಿ ಮಾಡಿಸಿರಬೇಕು. ನೋಂದಣಿ ಮಾಡಿಸದ ರೈತರು ಕೂಡಲೇ ಸ್ಥಳೀಯ ರೈತ ಸಂಪರ್ಕ ಕೇಂದ್ರಕ್ಕೆ ಬಂದು ನೋಂದಣಿ ಮಾಡಿಕೊಂಡು ಮಾರಾಟ ಮಾಡಬಹುದು ಎಂದು ಕೃಷಿ ಇಲಾಖೆ ಅಧಿಕಾರಿ ಸತೀಶ್ ಮಾಹಿತಿ ನೀಡಿದರು.

ಎಲ್ಲೆಲ್ಲಿ ಖರೀದಿ ಕೇಂದ್ರ: ರಾಜ್ಯ ಆಹಾರ ನಿಗಮಕ್ಕೆ ಖರೀದಿ ಕೇಂದ್ರಗಳನ್ನು ತೆರೆಯುವ ಜವಾಬ್ದಾರಿ ವಹಿಸಲಾಗಿದ್ದು ಕಾರ್ಕಳ, ಉಡುಪಿ, ಹಾಗೂ ಕುಂದಾಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ಮಾರ್ಚ್ 30ರವರೆಗೆ ರೈತರು ಭತ್ತವನ್ನು ಖರೀದಿ ಕೇಂದ್ರಗಳಿಗೆ ಮಾರಾಟ ಮಾಡಬಹುದು ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ತಿಳಿಸಿದ್ದಾರೆ.

ಕರಾವಳಿಗೆ ನಿಯಮ ಸಡಿಲಿಸಿ: ಬೆಂಬಲ ಬೆಲೆ ಯೋಜನೆಯಡಿ ರೈತರು ಭತ್ತ ಮಾರಾಟ ಮಾಡಬೇಕಾದರೆ ಕಡ್ಡಾಯವಾಗಿ ಫ್ರೂಟ್ಸ್‌ ತಂತ್ರಾಶದಡಿ ನೋಂದಣಿ ಮಾಡಿಸಿರಬೇಕು ಎಂಬ ನಿಯಮ ಹಾಕಲಾಗಿದೆ. ಸರ್ಕಾರದ ಸಹಾಯಧನ, ಸಾಲ–ಸೌಲಭ್ಯಗಳನ್ನು ಪಡೆಯುವಲ್ಲಿ ಫ್ರೂಟ್ಸ್‌ ತಂತ್ರಾಂಶ ಉತ್ತಮ ವ್ಯವಸ್ಥೆಯಾದರೂ, ಜಿಲ್ಲೆಯಲ್ಲಿ ಸಣ್ಣ ಹಿಡುವಳಿ ಹಾಗೂ ಜಂಟಿ ಮಾಲೀಕತ್ವದ ಕೃಷಿ ಭೂಮಿ, ಕುಮ್ಕಿ, ಬಗರ್‌ಹುಕುಂ ಸಾಗುವಳಿ ಹೆಚ್ಚಾಗಿರುವುದರಿಂದ ಕರಾವಳಿ ಹಾಗೂ ಮಲೆನಾಡು ರೈತರಿಗೆ ಈ ನಿಯಮವನ್ನು ಸಡಿಲಗೊಳಿಸಬೇಕು. ಫ್ರೂಟ್ಸ್‌ ತಂತ್ರಾಂಶದ ಜತೆಗೆ, ಎಲ್ಲರ ರೈತರ ಭತ್ತವನ್ನೂ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಬೇಕು ಎಂದು ಒತ್ತಾಯಿಸುತ್ತಾರೆ ರೈತ ಮುಖಂಡ ಸತ್ಯನಾರಾಯಣ ಉಡುಪ.

‘ಸರ್ಕಾರದ ನಿರ್ಧಾರ ಸ್ವಾಗತಾರ್ಹ’

ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹೆಚ್ಚಾಗಿ ಬೆಳೆಯುವ ಕುಚಲಕ್ಕಿಯನ್ನು ಪಡಿತರ ಕೇಂದ್ರಗಳಲ್ಲಿ ವಿತರಿಸಲು ಈಚೆಗೆ ಕೇಂದ್ರ ಸರ್ಕಾರ ನಿರ್ಧರಿಸಿತ್ತು. ಇದರ ಬೆನ್ನಲ್ಲೇ ಭತ್ತ ಖರೀದಿ ಕೇಂದ್ರಗಳ ಮೂಲಕ ಕರಾವಳಿಯ ಕುಚಲಕ್ಕಿ ಭತ್ತ ಪ್ರಬೇಧಗಳನ್ನು ಖರೀದಿಸಲು ಕೇಂದ್ರ ಸರ್ಕಾರ ಆದೇಶ ಹೊರಡಿಸಿರುವುದು ಸ್ವಾಗತಾರ್ಹ ಎಂದು ರೈತ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.