ಪಡುಬಿದ್ರಿ: ಇಲ್ಲಿನ ಬಂಟರ ಸಂಘದ ಹೆಮ್ಮೆಯ ಯೋಜನೆ ‘ಸಿರಿಮುಡಿ ಕ್ರೆಡಿಟ್ ಕೊ-ಅಪರೇಟಿವ್ ಸೊಸೈಟಿ’ ಎಂಬ ಹೆಸರಿನಲ್ಲಿ ಸಹಕಾರಿ ಸಂಘವೊಂದನ್ನು ಸ್ಥಾಪಿಸಿದ್ದು, ಇದರ ಉದ್ಘಾಟನಾ ಸಮಾರಂಭ ಅ. 5ರಂದು ಜರುಗಲಿದೆ ಎಂದು ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಬೆಳಪು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಟ ಸಮಾಜ ಹಾಗೂ ಇತರ ಹಿಂದುಳಿದ ವರ್ಗದ ಸದಸ್ಯರ ಆರ್ಥಿಕ ಸಬಲೀಕರಣ, ಮಹಿಳೆಯರು ಹಾಗೂ ಯುವಜನತೆಗೆ ಸ್ವಉದ್ಯೋಗಕ್ಕೆ ಪ್ರೇರಣೆ, ಉದ್ಯಮಿಗಳಿಗೆ ಉತ್ತೇಜನ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೊಳಿಸುವ ಉದ್ದೇಶದಿಂದ ಈ ಬ್ಯಾಂಕ್‌ನ್ನು ಸ್ಥಾಪಿಸಲಾಗಿದೆ. ₹50 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಸ್ವಂತ ಕಟ್ಟಡದಲ್ಲಿ ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆಯೊಂದಿಗೆ ಕಾರ್ಯಾರಂಭ ಮಾಡಲಿದ್ದು, ಸೇಫ್ ಲಾಕರ್ ಸೌಲಭ್ಯವನ್ನು ಹೊಂದಿದೆ ಎಂದರು.
ಕುಡ್ಡು ಶೆಟ್ಟಿ ಸಂಕೀರ್ಣ: ಬಂಟ ಸಮಾಜದ ಹಿರಿಯ ಮಾರ್ಗದರ್ಶಕ, ಪುಣೆ ಬಂಟರ ಸಂಘದ ಮಾಜಿ ಅಧ್ಯಕ್ಷ ಸದಾನಂದ.ಕೆ. ಶೆಟ್ಟಿಯವರು ಸೊಸೈಟಿ ಸ್ಥಾಪನೆಯಲ್ಲಿ ಮಹತ್ವದ ಸಹಕಾರ ನೀಡಿದ್ದಾರೆ. ಬ್ಯಾಂಕಿನ ಕಟ್ಟಡವು ‘ಸದಾನಂದ ಕುಡ್ಡು ಶೆಟ್ಟಿ ಸಂಕೀರ್ಣ’ ಎಂಬ ನಾಮಾಂಕಿತವನ್ನು ಹೊಂದಿದೆ. ಇದು ಬಂಟರ ಸಂಘಗಳ ಇತಿಹಾಸದಲ್ಲಿಯೇ ಪ್ರಥಮವಾಗಿ ಸ್ವಂತ ಕಟ್ಟಡವನ್ನು ಹೊಂದಿದ ಕೊ-ಅಪರೇಟಿವ್ ಸೊಸೈಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ ಎಂದು ವಿವರಿಸಿದರು.
ವಿವಿಧ ಕಾರ್ಯಕ್ರಮ: ಬಂಟ್ಸ್ ವೆಲ್ಪೇರ್ ಟ್ರಸ್ಟ್ ಹಾಗೂ ಸಿರಿಮುಡಿ ಧತ್ತಿನಿಧಿ ಸೋಶಿಯಲ್ ವೆಲ್ಪೇರ್ ಟ್ರಸ್ಟ್‌ನ ಸಹಭಾಗಿತ್ವದಲ್ಲಿ ಪಡುಬಿದ್ರಿ ಬಂಟರ ಸಂಘದ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ವಿಧವೆಯರಿಗೆ, ಅಂಗವಿಕಲರಿಗೆ, ಅಶಕ್ತರಿಗೆ, ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಸಹಾಯಧನ ವಿತರಣೆ, ದಾನಿಗಳಿಗೆ ಸನ್ಮಾನ ಮತ್ತು ವಿವಿಧ ಕ್ಷೇತ್ರಗಳ ಸಾಧಕರಿಗೆ ಗೌರವಾರ್ಪಣೆ ಸೇರಿದಂತೆ ಹತು ಹಲವು ವೈಶಿಷ್ಟ್ಯ ಒಳಗೊಂಡ ಸಿರಿಮುಡಿ ದತ್ತಿ ನಿಧಿ ವಿತರಣಾ ಸಮಾರಂಭವೂ ಇದೇ ಸಂದರ್ಭದಲ್ಲಿ ನಡೆಯಲಿದೆ.
‘ಸಹಕಾರ ರತ್ನ’ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರು, ಸೊಸೈಟಿ ಉದ್ಘಾಟನೆ ನೆರವೇರಿಸಲಿದ್ದಾರೆ. ಸಂಕೀರ್ಣವನ್ನು ಉದ್ಯಮಿ ಸದಾನಂದ ಕೆ. ಶೆಟ್ಟಿ ಉದ್ಘಾಟಿಸುವರು. ಸಿರಿಮುಡಿ ದತ್ತಿ ನಿಧಿ ಕಾರ್ಯಕ್ರಮದ ಉದ್ಘಾಟನೆಯನ್ನು ಕೊಡುಗೈದಾನಿ, ಎಂ.ಆರ್.ಜಿ.ಗ್ರೂಫ್‌ನ ಆಡಳಿತ ನಿರ್ದೇಶಕ ಕೆ.ಪ್ರಕಾಶ್ ಶೆಟ್ಟಿಯವರು ನೆರವೇರಿಸುವರು. ಸಿರಿಮುಡಿ ಉಳಿತಾಯ ಖಾತೆಯ ಪಾಸ್ ಪುಸ್ತಕದ ವಿತರಣೆಯನ್ನು ಹೇರಂಭ ಗ್ರೂಪ್‌ನ ಆಡಳಿತ ನಿರ್ದೇಶಕ ಕನ್ಯಾನ ಸದಾಶಿವ ಶೆಟ್ಟಿ ಮಾಡುವರು. ವಿ.ಕೆ.ಗ್ರೂಪ್‌ನ ಆಡಳಿತ ನಿರ್ದೇಶಕ ಕೆ.ಎಂ.ಶೆಟ್ಟಿ ನಿರಖು ಠೇವಣಿ ಪತ್ರ ಬಿಡುಗಡೆ ಮಾಡಲಿದ್ದಾರೆ. ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು, ಭದ್ರತಾ ಕೊಠಡಿ ಉದ್ಘಾಟಿಸುವರು. ಪುಣೆ ಬಂಟರ ಸಂಘದ ಅಧ್ಯಕ್ಷ ಅಜಿತ್ ಹೆಗ್ಡೆ ಸವಲತ್ತುಗಳ ವಿತರಣೆ ಮಾಡಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸಿರಿಮುಡಿ ದತ್ತಿ ನಿಧಿ ಬಂಟರ ಸಂಘದ ಸಂಸ್ಥಾಪಕ ಸಾಂತೂರು ಭಾಸ್ಕರ ಶೆಟ್ಟಿ, ಬಂಟ್ಸ್ ವೆಲ್ಪೇರ್ ಟ್ರಸ್ಟ್ ಅಧ್ಯಕ್ಷ ಡಾ. ವೈ.ಎನ್.ಶೆಟ್ಟಿ, ಪಡುಬಿದ್ರಿ ಬಂಟರ ಸಂಘದ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಪಡುಹಿತ್ಲು, ಕೋಶಾಧಿಕಾರಿ ರವಿ ಶೆಟ್ಟಿ ಗುಂಡ್ಲಾಡಿ, ಮಹಿಳಾ ವಿಭಾಗದ ಅಧ್ಯಕ್ಷೆ ಭಾರತಿ ಶೆಟ್ಟಿ, ಯುವ ವಿಭಾಗದ ಅಧ್ಯಕ್ಷ ಸುಜಿತ್ ಶೆಟ್ಟಿ ಕಾರ್ಯಕ್ರಮ ಸಂಘಟನಾ ಸಮಿತಿಯ ಸಂಚಾಲಕ ಸತೀಶ್ ಶೆಟ್ಟಿ ಗುಡ್ಡೆಚ್ಚಿ, ಶ್ರೀನಾಥ್ ಹೆಗ್ಡೆ, ಜಯಶೆಟ್ಟಿ ಪದ್ರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.