ಪಡುಬಿದ್ರಿ: ಕೆವೈಸಿ ಸಮಸ್ಯೆಯಿಂದ ಪಡಿತರ ಪಡೆಯಲು ಅಡಚಣೆಯಾಗಿದ್ದ 94 ವರ್ಷದ ವೃದ್ಧೆಗೆ ಹೆಬ್ಬೆಟ್ಟು ಒತ್ತದೆಯೇ ಪಡಿತರ ಪಡೆಯಲು ತಹಶೀಲ್ದಾರ್ ಪ್ರತಿಭಾ ಆರ್. ನೆರವಾಗಿದ್ದಾರೆ.
ಪಲಿಮಾರು ವ್ಯಾಪ್ತಿಯ ಅಡ್ವೆ ನಿವಾಸಿ ಮುತ್ತು ಪೂಜಾರ್ತಿ ಅವರಿಗೆ ಕೆವೈಸಿ ಆಗದೆ ಪಡಿತರ ಅಕ್ಕಿ ಕೊಡಲು ಅಡಚಣೆಯಾಗಿತ್ತು. ಕೆವೈಸಿ ಮಾಡಿಸಲು ಗ್ರಾಮ ಒನ್ ಕೇಂದ್ರಕ್ಕೆ ಹೋಗಿದ್ದರು. ಆದರೆ ಅಲ್ಲಿಯೂ ಸಾಧ್ಯವಾಗಿರಲಿಲ್ಲ. ಮನೆಯವರು ಈ ಬಗ್ಗೆ ಗ್ರಾಮ ಒನ್ ಸೆಂಟರ್‌ನ ಮಾಲಿಕ ಇಸ್ಮಾಯಿಲ್ ಪಲಿಮಾರು ಅವರಿಗೆ ತಿಳಿಸಿದರು. ಅವರು ಅದನ್ನು ತಹಶೀಲ್ದಾರರ ಗಮನಕ್ಕೆ ತಂದರು.
ತಹಶೀಲ್ದಾರರು ಆಹಾರ ನಿರೀಕ್ಷಕ ಲೀಲಾನಂದ್‌ರನ್ನು ಕರೆಯಿಸಿ, ವೃದ್ಧೆಗೆ ಹೆಬ್ಬೆಟ್ಟು ಒತ್ತುವುದರಿಂದ ವಿನಾಯಿತಿ ನೀಡಲು ಕ್ರಮ ಕೈಗೊಳ್ಳಲು ಆದೇಶಿಸಿದರು. ಅದರಂತೆ ಪೂಜಾರ್ತಿ ಅಮ್ಮನಿಗೆ ಹೆಬ್ಬೆಟ್ಟು ಒತ್ತದೆಯೇ ಪಡಿತರ ಪಡೆದುಕೊಳ್ಳಲು ಸಾಪ್ಟ್‌ವೇರ್‌ನಲ್ಲಿ ಅವಕಾಶ ಕಲ್ಪಿಸಲಾಯಿತು.
ನೇರ ಗಮನಕ್ಕೆ ತನ್ನಿ: ಹಾಸಿಗೆ ಹಿಡಿದ ರೋಗಿಗಳಿಗೆ, ವೃದ್ಧರಿಗೆ ಪಡಿತರ ಅಂಗಡಿಗೆ ಬರುವುದು ಅಸಾಧ್ಯವಾಗಿರುತ್ತದೆ. ಅಂಥವರಿಗೆ ಹೆಬ್ಬೆಟ್ಟು ಒತ್ತುವುದರಿಂದ ವಿನಾಯಿತಿ ನೀಡಿ ಪಡಿತರ ಪಡೆಯುವ ವ್ಯವಸ್ಥೆ ಮಾಡಲು ಸಾಧ್ಯವಿದೆ. ಅಂತಹವರು ನೇರವಾಗಿ ಗಮನಕ್ಕೆ ತಂದರೆ ಅಂತವರಿಗೆ ಸಹಾಯ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉಚ್ಚಿಲದಲ್ಲಿ ಐರಿಸ್ ಸ್ಕ್ಯಾನರ್ ವ್ಯವಸ್ಥೆ: ಬಡಾ ಉಚ್ಚಿಲ ಬಡಾ ಪಂಚಾಯಿತಿಯ ಕೆಳಭಾಗ, ಮಹಾಲಿಂಗೇಶ್ವರ ದೇವಸ್ಥಾನ ರಸ್ತೆಯ ಪಕ್ಕದಲ್ಲಿರುವ ಜನ ಸೇವಾ ಕೇಂದ್ರ ಗ್ರಾಮ ಒನ್ ಕೇಂದ್ರದಲ್ಲಿ ಕಣ್ಣಿನ ಐರಿಸ್ ಸ್ಕ್ಯಾನರ್ ಅಳವಡಿಸಲಾಗಿದೆ. ಫೆ. 28ರಂದು ಈ ಬಗ್ಗೆ ಬಂದು ಸೌಲಭ್ಯ ಪಡೆಯಬಹುದು ಎಂದು ತಹಶೀಲ್ದಾರ್ ಪ್ರತಿಭಾ ಆರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.