ಪಡುಬಿದ್ರಿ: ಅಂತರರಾಷ್ಟ್ರೀಯ ಮಾನ್ಯತೆ ಪಡೆದ ಪಡುಬಿದ್ರಿಯ ಬೀಚ್ ರಸ್ತೆ ಸಂಪೂರ್ಣ ಕಿತ್ತು ಹೋಗಿದ್ದು, ಇಲ್ಲಿಗೆ ಭೇಟಿ ನೀಡುವವರು ಹರಸಾಹಸ ಪಡಬೇಕಾದ ದುಃಸ್ಥಿತಿ ನಿರ್ಮಾಣವಾಗಿದೆ.
ರಸ್ತೆ ಸಂಪೂರ್ಣವಾಗಿ ಹದಗೆಟ್ಟಿರುವುದರಿಂದ ಇಲ್ಲಿನ ಬ್ಲೂಫ್ಲ್ಯಾಗ್ ಬೀಚ್‌ಗೆ ರಾಜ್ಯ, ಹೊರ ರಾಜ್ಯಗಳಿಂದ ಬರುವ ಪ್ರವಾಸಿಗರು ಹಿಡಿಶಾಪ ಹಾಕುವಂತಾಗಿದೆ. ರಾಷ್ಟ್ರೀಯ ಹೆದ್ದಾರಿ ಮೂಲಕ ಪಡುಬಿದ್ರಿ ಮಹಾಗಣಪತಿ ದೇವಸ್ಥಾನವಾಗಿ ಮುಖ್ಯ ಬೀಚ್‌ವರೆಗಿನ ಒಂದೂವರೆ ಕಿ.ಮೀ. ರಸ್ತೆ ಸಂಪೂರ್ಣ ಹೊಂಡಮಯವಾಗಿದೆ.
ಎರ್ಮಾಳ್‌ನಿಂದ ಪಡುಬಿದ್ರಿವರೆಗೆ ಕಾಂಕ್ರಿಟ್ ರಸ್ತೆ ಇದ್ದರೂ ಮುಂದೆ ಮುಖ್ಯಬೀಚ್‌ನಿಂದ ಬ್ಲೂಫ್ಲ್ಯಾಗ್ ಬೀಚ್‌ವರೆಗಿನ ಮೂರು ಕಿ.ಮೀ. ರಸ್ತೆ ಹೊಂಡಗಳಿಂದಲೇ ಕೂಡಿದೆ.
ಇಲ್ಲಿನ ಬೀಚ್ ಹಾಗೂ ಬ್ಲೂಫ್ಲ್ಯಾಗ್ ಬೀಚ್‌ಗೆ ದಿನನಿತ್ಯ ನೂರಾರು ಪ್ರವಾಸಿಗರು ಬರುತಿದ್ದಾರೆ. ಇಲ್ಲಿ ಶಾಲೆಯೂ ಇದ್ದು, ನೂರಾರು ಮನೆಗಳು ಕೂಡ ಇವೆ. ಹಲವು ಬಾರಿ ರಸ್ತೆ ದುರವಸ್ಥೆ ಬಗ್ಗೆ ಜನಪ್ರತಿನಿಧಿಗಳ ಗಮನ ಸೆಳೆದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ.
ಕುಸಿತದ ಭೀತಿಯಲ್ಲಿ ಸೇತುವೆ: ಬೀಚ್ ಸಂಪರ್ಕಿಸುವ ಈ ರಸ್ತೆಯಲ್ಲಿ 50 ವರ್ಷಗಳ ಹಿಂದಿನ ಸೇತುವೆಯೊಂದಿದ್ದು, ಅದು ಕುಸಿತದ ಭೀತಿಯಲ್ಲಿದೆ. ಸೇತುವೆ ಕಿರಿದಾದರೂ ಅದರ ಮೂಲಕ ಬೀಚ್‌ಗೆ ಶನಿವಾರ ಮತ್ತು ಭಾನುವಾರಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗುತ್ತಿದೆ. ಇದರಿಂದ ಈ ಸೇತುವೆಯ ಬಳಿ ವಾಹನ ಸಂಚಾರಕ್ಕೆ ತೊಡಕು ಉಂಟಾಗುತ್ತಿದೆ.
ವಾಹನ ದಟ್ಟಣೆ ಹೆಚ್ಚಾದರೆ ಏಕಮುಖ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಬೇಕಾದ ಅನಿವಾರ್ಯತೆ ಇದೆ. ಅಲ್ಲದೆ ಸೇತುವೆ ಕುಸಿಯುವ ಭೀತಿಯಲ್ಲಿದೆ. ಈಗಾಗಲೇ ಈ ಸೇತುವೆ ದುಸ್ಥಿತಿ ಬಗ್ಗೆ ಹಲವು ಭಾರಿ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ರಸ್ತೆಯಲ್ಲಿ ಸಂಚಾರಕ್ಕೆ ಈ ರಸ್ತೆ ಅಯೋಗ್ಯವಾಗಿದೆ. ಸಂಬಂಧಪಟ್ಟವರು ಕೂಡಲೇ ರಸ್ತೆ ದುರಸ್ತಿಗೊಳಿಸಬೇಕು ಎಂದು ಕಾಡಿಪಟ್ಣ ಮೊಗವೀರ ಮಹಾಸಭಾ ಅಧ್ಯಕ್ಷ ಅಶೋಕ್ ಪಡುಬಿದ್ರಿ ಒತ್ತಾಯಿಸಿದ್ದಾರೆ.
ಅಂತರರಾಷ್ಟ್ರೀಯ ಮಾನ್ಯತೆ ಪಡೆದ ಬೀಚ್‌ಗಿಲ್ಲ ಉತ್ತಮ ರಸ್ತೆ ರಸ್ತೆ ಹೊಂಡಗಳಿಂದ ಪ್ರವಾಸಿಗರಿಗೆ ತೊಂದರೆ
ಪಡುಬಿದ್ರಿ ಬೀಚ್ ಸಂಪರ್ಕಿಸುವ ರಸ್ತೆಯು ಕಾಡಿಪಟ್ಣ ನಡಿಪಟ್ಣ ಹಾಗೂ ಭಜನಾ ಮಂದಿರ ಬಳಿ ಸಂಪೂರ್ಣ ಹದಗೆಟ್ಟಿದೆ. ಈ ಬಗ್ಗೆ ಶಾಸಕರಿಗೆ ಮನವಿ ಸಲ್ಲಿಸಲಾಗಿದೆ. ಮಳೆಗಾಲ ಮುಗಿದ ಕೂಡಲೇ ರಸ್ತೆ ದುರಸ್ತಿಗೊಳಿಸುವುದಾಗಿ ಶಾಸಕರು ಭರವಸೆ ನೀಡಿದ್ದಾರೆ
-ಶಶಿಕಾಂತ್ ಪಡುಬಿದ್ರಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ
ಚರಂಡಿ ವ್ಯವಸ್ಥೆಯೂ ಇಲ್ಲ ಬೀಚ್‌ಗೆ ಸಂಪರ್ಕಿಸುವ ರಸ್ತೆಯಲ್ಲಿ ಚರಂಡಿ ವ್ಯವಸ್ಥೆಯೂ ಇಲ್ಲ. ಇದರಿಂದ ರಸ್ತೆ ಸಂಪೂರ್ಣ ಹದಗೆಟ್ಡಿದೆ. ರಸ್ತೆಯಲ್ಲಿ ಜನರು ನಡೆದಾಡುವುದೇ ದುಸ್ತರವಾಗಿದೆ. ಜೋರು ಮಳೆ ಬರುವಾಗ ರಸ್ತೆಯಲ್ಲಿಯೇ ಮಳೆ ನೀರು ಹರಿದು ರಸ್ತೆ ಹಾಳಾಗಿದೆ. ಸಂಬಂಧಪಟ್ಟವರು ರಸ್ತೆ ಪಕ್ಕದಲ್ಲಿ ಚರಂಡಿ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಜನರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.